ಲೋಕಸಭಾ ಚುನಾವಣೆ ಹಿನ್ನೆಲೆ: ಐಎಎಸ್, ಐಪಿಎಸ್ ಸೇರಿದಂತೆ ಅಧಿಕಾರಿಗಳ ಭಾರೀ ವರ್ಗಾವರ್ಗಿ
ಮೈಸೂರು

ಲೋಕಸಭಾ ಚುನಾವಣೆ ಹಿನ್ನೆಲೆ: ಐಎಎಸ್, ಐಪಿಎಸ್ ಸೇರಿದಂತೆ ಅಧಿಕಾರಿಗಳ ಭಾರೀ ವರ್ಗಾವರ್ಗಿ

February 22, 2019

ಬೆಂಗಳೂರು: ಮುಂಬರುವ ಲೋಕ ಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಐಎಎಸ್, ಐಪಿಎಸ್ ಹಾಗೂ ಕೆಳವರ್ಗದ ಅಧಿಕಾರಿಗಳನ್ನು ವರ್ಗಾವರ್ಗಿ ಮಾಡಿದೆ.

ಕೇಂದ್ರ ಚುನಾವಣಾ ಆಯೋಗ ನೀಡಿರುವ ಗಡುವು ಮತ್ತು ಮಾರ್ಗಸೂಚಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಗಿರುವ ಅಧಿಕಾರ ಬಳಸಿಕೊಂಡು, ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ವರ್ಗಾವರ್ಗಿಗೆ ಚಾಲನೆ ನೀಡಿದೆ. ನಿನ್ನೆಯಷ್ಟೇ ಸಚಿವಾಲಯ ಹಾಗೂ ಜಿಲ್ಲಾ ಮಟ್ಟದಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾ ವಣೆ ಮಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ತಡರಾತ್ರಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಏಕಕಾಲಕ್ಕೆ ಕಿರಿಯ ಪೊಲೀಸ್ ಅಧಿಕಾರಿಗಳ ವರ್ಗಾ ವಣೆಯು ಆಗಿದೆ. ಇದಲ್ಲದೆ, ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಣೆ ಹೊಣೆ ಹೊತ್ತಿರುವ ಕಂದಾಯ, ಶಿಕ್ಷಣ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ವರ್ಗಾವಣೆಯು ಆಗಿದೆ. ಆಯೋಗ ಈ ಮೊದಲು ಫೆಬ್ರವರಿ 20 ರೊಳಗಾಗಿ ವರ್ಗಾವರ್ಗಿ ಪೂರ್ಣಗೊಳಿಸಿ, 25ಕ್ಕೆ ವರದಿ ಸಲ್ಲಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶ ಹೊರಡಿಸಿತ್ತು. ತನ್ನ ಆದೇಶ ಬದಲಾವಣೆ ಮಾಡಿಕೊಂಡ ಆಯೋಗ ವರ್ಗಾವರ್ಗಿಗೆ ಮತ್ತೆ ಒಂಬತ್ತು ದಿನಗಳ ಕಾಲಾವಕಾಶ ನೀಡಿರುವುದಲ್ಲದೆ, ರಾಜಕೀಯ ನೇಮಕಾತಿಗೂ ಅವಕಾಶ ಕಲ್ಪಿಸಿದೆ. ಇದರ ಲಾಭ ಪಡೆದ ಮುಖ್ಯಮಂತ್ರಿಯವರು ಕಳೆದ ಎರಡು ದಿನಗಳಿಂದ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿ, ವರ್ಗಾವಣೆ ಮಾಡಿದ್ದಾರೆ. ಅಲ್ಲದೆ, ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಇಂದು ಬೆಳಿಗ್ಗೆ ಭೇಟಿ ಮಾಡಿ, ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸಲಹೆ ಪಡೆದಿದ್ದಾರೆ, ಇದೇ ಸಂದರ್ಭದಲ್ಲಿ ತಮ್ಮ ಪಕ್ಷದ ಶಾಸಕ ರಿಗೆ ನಿಗಮ-ಮಂಡಳಿ ಹಾಗೂ ಸಂಸದೀಯ ಕಾರ್ಯ ದರ್ಶಿಗಳ ನೇಮಕಾತಿಗೆ ಸಂಬಂಧಿಸಿದಂತೆಯು ಚರ್ಚೆ ಮಾಡಿದ್ದಾರೆ ಎಂದು ಉನ್ನತ ಮೂಲ ಗಳು ತಿಳಿಸಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮೂರು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗುಪ್ತಚಾರ ವಿಭಾಗಕ್ಕೆ ನೇಮಕ ಮಾಡಿಕೊಂಡಿದ್ದ ಅಮರ್‍ಕುಮಾರ್ ಪಾಂಡೆ ಅವರನ್ನು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ ಮುಂದುವರಿಸಿದ್ದರು.

ಈ ಸಂದರ್ಭದಲ್ಲಿ ಆಪರೇಷನ್ ಕಮಲ ಸೇರಿದಂತೆ ಕೆಲವು ರಾಜಕೀಯ ಘಟನೆಗಳು ನಡೆದು ಹೋದವು. ಇಷ್ಟಾದರೂ ಅವರ ಬದಲಾವಣೆ ಮಾಡಿರಲಿಲ್ಲ. ಆಪರೇಷನ್ ಕಮಲದಿಂದ ಹೊರ ಬರುತ್ತಿದ್ದಂತೆ ಮುಖ್ಯಮಂತ್ರಿಯವರು ಇಂದು ಮುಂಜಾನೆ ಅಮರ್‍ಕುಮಾರ್ ಪಾಂಡೆ ಅವರನ್ನು ಏಕಾಏಕಿ ವರ್ಗಾವಣೆ ಮಾಡಿ, ಹಿರಿಯ ಅಧಿಕಾರಿ ಬಿ. ದಯಾನಂದ್ ಅವರನ್ನು ಅಲ್ಲಿಗೆ ನೇಮಿಸಿಕೊಂಡಿದ್ದಾರೆ.

ಮತ್ತೊಬ್ಬ ಹಿರಿಯ ಅಧಿಕಾರಿ ಕೆ.ವಿ. ಶರತ್‍ಚಂದ್ರ ಅವರನ್ನು ಐಜಿಪಿ ದಕ್ಷಿಣ ವಲಯ ಮೈಸೂರು ವಿಭಾಗದಿಂದ ವರ್ಗಾಯಿಸಿ, ಬೆಂಗಳೂರು ಕೇಂದ್ರ ವಲಯಕ್ಕೆ ನೇಮಿಸಿದ್ದಾರೆ. ಈ ಸ್ಥಳದಲ್ಲಿ ಇದುವರೆಗೂ ದಯಾನಂದ ಅವರು ಕಾರ್ಯನಿರ್ವ ಹಿಸುತ್ತಿದ್ದರು. ವಿಫುಲ್‍ಕುಮಾರ್ ಅವರನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಯಿಂದ ಶರತ್‍ಚಂದ್ರ ಅವರ ಸ್ಥಾನಕ್ಕೆ ನಿಯೋಜಿಸಲಾಗಿದೆ. ಇದೇ ರೀತಿ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆ ಮಾಡಿದ್ದಾರೆ. ಮೈಸೂರು ನಗರದ ಡಿಸಿಪಿಯಾಗಿ ಕಾರ್ಯನಿರ್ವ ಹಿಸುತ್ತಿದ್ದ ಎನ್.ವಿಷ್ಣುವರ್ಧನ್ ಅವರನ್ನು ಬೆಂಗಳೂರು ಗುಪ್ತಚಾರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಕೆಲಸ ಮಾಡುತ್ತಿದ್ದ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ವರ್ಗಾಯಿಸಿ, ಅವರ ಸ್ಥಾನಕ್ಕೆ ಮತ್ತೊಬ್ಬ ಹಿರಿಯ ಅಧಿಕಾರಿ ಹೆಚ್.ಡಿ. ಆನಂದ್‍ಕುಮಾರ್ ಅವರನ್ನು ನೇಮಕ ಮಾಡಿದ್ದಾರೆ. ಗುಪ್ತ ದಳದ ಡಿಐಜಿಪಿಯಾಗಿ ಡಾ.ಎ. ಸುಬ್ರಹ್ಮಣ್ಯೇಶ್ವರರಾವ್, ಬೆಂಗಳೂರಿನ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಡಿಐಜಿ ಮತ್ತು ಜಂಟಿ ಪೊಲೀಸ್ ಆಯುಕ್ತರಾಗಿ ಟಿ.ಆರ್.ಸುರೇಶ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಮಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಸಂದೀಪ್ ಪಾಟೀಲ್, ಕೆಎಸ್‍ಆರ್‍ಟಿಸಿ ಭದ್ರತೆ ಮತ್ತು ಜಾಗೃತ ವಿಭಾಗದ ನಿರ್ದೇಶಕರಾಗಿ ಡಾ.ಪಿ.ಎಸ್.ಹರ್ಷ, ನಕ್ಸಲ್ ನಿಗ್ರಹಪಡೆಯ ಡಿಐಜಿಪಿಯಾಗಿ ವಿಕಾಸ್‍ಕುಮಾರ್, ಬೆಳಗಾವಿಯ ಪೊಲೀಸ್ ಆಯುಕ್ತರಾಗಿ ಬಿ.ಎಸ್.ಲೋಕೇಶ್‍ಕುಮಾರ್ ಅವರನ್ನು ವರ್ಗಾಯಿಸಲಾಗಿದೆ. ಗುಪ್ತ ದಳದ (ಆಡಳಿತ) ಎಸ್‍ಪಿಯಾಗಿ ಡಾ.ಎಂ.ಬಿ. ಬೋರಲಿಂಗಯ್ಯ, ಹೋಮ್‍ಗಾಡ್ರ್ಸ್ ಕಮಾಂಡೆಂಟ್ ಆಗಿ ಅಭಿನವ್ ಖರೆ, ಕಲಬುರಗಿ ಎಸ್‍ಪಿಯಾಗಿ ಲಡಾ ಮಾರ್ಟಿನ್ ಮರ್ಬಾನಿಯಾಂಗ್, ಎಐಜಿಪಿ (ಬೆಂಗಳೂರು) (ಅಪರಾಧ) ಕಾರ್ತಿಕ್‍ರೆಡ್ಡಿ ಅವರನ್ನು ವರ್ಗಾಯಿಸಲಾಗಿದೆ. ಚಿಕ್ಕಬಳ್ಳಾಪುರ ಎಸ್‍ಪಿಯಾಗಿ ಕೆ.ಸಂತೋಷ್‍ಬಾಬು, ಬೆಂಗಳೂರು ನಗರ ದಕ್ಷಿಣ ವಿಭಾಗದ ಡಿಸಿಪಿಯಾಗಿ ಇಶಾಪಂಥ್ ಅವರನ್ನು ವರ್ಗಾಯಿಸಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಕೆ.ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಲಾಗಿದ್ದರೂ, ಯಾವುದೇ ಹುದ್ದೆ ನೀಡಿಲ್ಲ.

57 ಡಿವೈಎಸ್ಪಿಗಳ ವರ್ಗಾವಣೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾ ವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಸರ್ಕಾರವು 57 ಡಿವೈಎಸ್ಪಿಗಳನ್ನು ವರ್ಗಾವರ್ಗಿ ಮಾಡಿ ಆದೇಶ ಹೊರಡಿಸಿದೆ. ಮೈಸೂರಿನ ಎನ್.ಆರ್. ಉಪ ವಿಭಾಗದ ಎಸಿಪಿ ಸಿ.ಗೋಪಾಲ್ ಅವರನ್ನು ವಿಕಾಸ ಸೌಧ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದ್ದು, ಅವರ ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಧರಣೇಶ್ ವರ್ಗಾವಣೆ ಮಾಡಲಾಗಿದೆ. ಕೆ.ಅರ್. ಉಪ ವಿಭಾಗದ ಎಸಿಪಿ ಎನ್.ಎಂ.ಧರ್ಮಪ್ಪ ಅವರನ್ನು ಬೆಂಗಳೂರು ನಗರದ ವಿವಿಐಪಿ ಭದ್ರತೆಗೆ ವರ್ಗಾಯಿಸಿದ್ದು, ಅವರ ಸ್ಥಳಕ್ಕೆ ಶಿರಸಿ ಡಿವೈಎಸ್ಪಿ ಗೋಪಾಲಕೃಷ್ಣ ತಿಮ್ಮಣ್ಣ ನಾಯಕ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸಿಸಿಬಿ ಎಸಿಪಿ ಬಿ.ಆರ್. ಲಿಂಗಪ್ಪ ಅವರನ್ನು ಮಂಗಳೂರಿನ ಐಜಿಪಿ ಕಚೇರಿಗೆ ವರ್ಗಾಯಿಸಲಾಗಿದ್ದು, ಅವರ ಸ್ಥಳಕ್ಕೆ ವಿ.ಮರಿಯಪ್ಪ ವರ್ಗಾವಣೆ ಮಾಡಲಾಗಿದೆ. ಡಿಸಿಆರ್‍ವಿ ಎಸಿಪಿ ಯಶವಂತ್ ಸಾವರ್ಕರ್ ಬೆಂಗಳೂರಿನ ವೈಟ್‍ಫೀಲ್ಡ್ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಳಕ್ಕೆ ಎಸಿಪಿ ಡಿವೈಎಸ್ಪಿ ಕೋದಂಡ ರಾಮ ಅವರನ್ನು ನಿಯೋಜಿಸಲಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಉಪ ವಿಭಾಗದ ಡಿವೈಎಸ್ಪಿ ಕೆ.ಬಿ.ವಿಶ್ವನಾಥ್ ಅವರನ್ನು ಮೈಸೂರಿನ ಕೆಪಿಎಗೆ ವರ್ಗಾಯಿಸ ಲಾಗಿದ್ದು, ಅವರ ಸ್ಥಳಕ್ಕೆ ಬೆಂಗಳೂರು ಸಿಸಿಬಿ ಯಲ್ಲಿದ್ದ ಬಿ.ಎಸ್.ಮೋಹನ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಸಿ.ಮಲ್ಲಿಕ್ ಅವರನ್ನು ಬೆಂಗಳೂರಿನ ಪುಲಿಕೇಶಿ ಉಪ ವಿಭಾ ಗಕ್ಕೆ ವರ್ಗಾಯಿಸಲಾಗಿದ್ದು, ಅವರ ಸ್ಥಳಕ್ಕೆ ಬೆಂಗಳೂರು ನಗರ ವಿವಿಐಪಿ ಭದ್ರತಾ ವಿಭಾಗದಲ್ಲಿದ್ದ ವಿಜಯನಾಥ್ ವರ್ಗಾವಣೆ ಮಾಡಲಾಗಿದೆ. ಸೋಮವಾರ ಪೇಟೆ ಉಪ ವಿಭಾಗದ ಡಿವೈಎಸ್ಪಿ ಪಿ.ಕೆ.ಮುರಳೀಧರ ಅವರನ್ನು ಪುತ್ತೂರು ಉಪ ವಿಭಾಗಕ್ಕೆ ವರ್ಗಾಯಿಸಿದ್ದು, ಅವರ ಸ್ಥಳಕ್ಕೆ ಪುತ್ತೂರಿನ ದಿನಕರ್ ಶೆಟ್ಟಿ ವರ್ಗಾವಣೆ ಮಾಡಲಾಗಿದೆ.

Translate »