ರಾಜಕೀಯಕ್ಕಾಗಿ ಮಂಡ್ಯಕ್ಕೆ ಬಂದಿಲ್ಲ, ಮಂಡ್ಯಕ್ಕೆ  ಬರೋದಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ: ಸುಮಲತಾ
ಮಂಡ್ಯ, ಮೈಸೂರು

ರಾಜಕೀಯಕ್ಕಾಗಿ ಮಂಡ್ಯಕ್ಕೆ ಬಂದಿಲ್ಲ, ಮಂಡ್ಯಕ್ಕೆ ಬರೋದಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ: ಸುಮಲತಾ

February 22, 2019

ಭಾರತೀನಗರ: ರಾಜಕೀಯಕ್ಕೆ ಬರಬೇಕೆಂದು ಮಂಡ್ಯಕ್ಕೆ ಬಂದಿಲ್ಲ, ಮಂಡ್ಯಕ್ಕೆ ಬರಬೇಕೆಂದು ರಾಜಕೀಯಕ್ಕೆ ಬರುತ್ತಿದ್ದೇನೆ ಎಂದು ಚಿತ್ರನಟಿ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.

ಗುರುವಾರ ತಮ್ಮ ಮನೆ ದೇವರು ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಂಬರೀಶ್ ಹುಟ್ಟೂರು ಮಂಡ್ಯ ಜಿಲ್ಲೆ ಬಿಟ್ಟರೆ ಇನ್ನೆಲ್ಲೂ ಈ ಪ್ರೀತಿ ನನಗೆ ಸಿಕ್ಕಿಲ್ಲ ಎಂದು ಭಾವುಕರಾದರು. ಜಿಲ್ಲೆಯ ಜನತೆಯ ಋಣ ನಮ್ಮ ಮೇಲಿದೆ. ಅದನ್ನು ತೀರಿಸಲು ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ. ಇದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ತಂದಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷ ನಮ್ಮನ್ನು ಗುರುತಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಅಂಬಿ ಮೇಲಿನ ಪ್ರೀತಿ, ವಿಶ್ವಾಸವನ್ನು ಮುಂದೆಯೂ ನಮ್ಮ ಕುಟುಂಬದ ಮೇಲೆ ಮುಂದುವರಿಸಿಕೊಂಡು ಹೋಗುವಂತೆ ಕಾಂಗ್ರೆಸ್ ವರಿಷ್ಠರಿಗೆ ತಿಳಿಸಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆಗೆ ಎದುರು ನೋಡುತ್ತಿದ್ದೇನೆ. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವಂತೆ ಯಾವುದೇ ಆಹ್ವಾನ ಬಂದಿಲ್ಲ ಎಂದರು. ನಮ್ಮ ಯಜಮಾನರು ಮಂಡ್ಯದ ಮಗ. ಹಾಗಾಗಿ ನಾನೂ ಮಂಡ್ಯದವಳೇ ಅನ್ನುವ ಮೂಲಕ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡರಿಗೆ ಸುಮಲತಾ ಟಾಂಗ್ ನೀಡಿದರು.

ಸುಮಲತಾಗೆ ಅದ್ಧೂರಿ ಸ್ವಾಗತ: ಚಿತ್ರನಟಿ ಸುಮಲತಾ ಅಂಬರೀಶ್ ಮಂಡ್ಯ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ರಸ್ತೆಯುದ್ದಕ್ಕೂ ಅಭಿಮಾನಿಗಳ ಮಹಾಪೂರ ಹರಿದು ಬಂದಿತು. ದಾರಿ ಉದ್ದಕ್ಕೂ ಅಭಿಮಾನಿಗಳು ಸುಮಲತಾಗೆ ಚುನಾವಣೆಗೆ ಸ್ಪರ್ಧಿಸಲು ಆಗ್ರಹ ಪಡಿಸಿದರು. ಎಳನೀರು, ಕಬ್ಬಿನ ಜ್ಯೂಸ್, ಮಜ್ಜಿಗೆ ನೀಡಿ ಸತ್ಕರಿಸುವ ಜೊತೆಗೆ ಹಾರ ಹಾಕಿ ಅಭಿನಂದಿಸಿದರು.

ಕೊಟ್ಟ ಮಾತು ಉಳಿಸಿಕೊಂಡ ಸುಮಲತಾ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮನಾದ ವೀರಯೋಧ ಹೆಚ್.ಗುರು ಅವರ ಸ್ವಗ್ರಾಮ ಗುಡಿಗೆರೆ ಗ್ರಾಮಕ್ಕೆ ತೆರಳಿದ ಚಿತ್ರನಟಿ ಸುಮಲತಾ ಕುಟುಂಬದವರಿಗೆ ಸಾಂತ್ವನ ಹೇಳಿದರು. ಯೋಧ ಗುರು ತಂದೆ ಹೊನ್ನಯ್ಯ, ತಾಯಿ ಚಿಕ್ಕೋಳಮ್ಮ, ಪತ್ನಿ ಕಲಾವತಿ ಅವರನ್ನು ಕಂಡು ಕಣ್ಣೀರಿಟ್ಟ ಸುಮಲತಾ, ಪತಿ ಅಂಬರೀಶ್‍ರನ್ನು ಈ ಸಂದರ್ಭ ನೆನೆದರು.

ಅಂಬರೀಶ್‍ಗೆ ಪಿತ್ರಾರ್ಜಿತವಾಗಿ ಬಂದಿದ್ದ ದೊಡ್ಡರಸಿನಕೆರೆಯಲ್ಲಿರುವ 6.5 ಎಕರೆ ಕೃಷಿ ಭೂಮಿಯಲ್ಲಿ ಯೋಧನ ಕುಟುಂಬಕ್ಕೆ ನೀಡಿದ ಭರವಸೆಯಂತೆ ಅರ್ಧ ಎಕರೆ ಭೂಮಿಯ ದಾಖಲೆ ಹಸ್ತಾಂತರಿಸುವ ಬಗ್ಗೆ ಸುಮಲತಾ ಮಾತನಾಡಿದರು. ಈ ಹಿಂದೆ ಅಂಬರೀಶ್ ಅವರು ಪುತ್ರ ಅಭಿಷೇಕ್ ಹೆಸರಿಗೆ ಜಮೀನನ್ನು ನೋಂದಣಿ ಮಾಡಿಸಿದ್ದರು. ಈ ಭೂಮಿ ನೀರಾವರಿ ಹೊಂದಿದ್ದು, ಭಾರೀ ಬೆಲೆ ಬಾಳುತ್ತದೆ. ಗುಡಿಗೆರೆ ಕಾಲೋನಿಯಿಂದ ಸುಮಾರು 3 ಕಿ.ಮೀ ದೂರದಲ್ಲಿದೆ.

ಗುರು ಸಮಾಧಿಗೆ ನಮನ: ಹುತಾತ್ಮ ಯೋಧ ಗುರು ಕುಟುಂಬಕ್ಕೆ ನೀಡಲು ಉದ್ದೇಶಿಸಿರುವ ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಕೃಷಿ ಭೂಮಿಯನ್ನು ವೀಕ್ಷಿಸಿದ ಸುಮಲತಾ ಅವರು ಕೆ.ಎಂ.ದೊಡ್ಡಿ ಹೊರವಲಯದಲ್ಲಿರುವ ಹುತಾತ್ಮ ಯೋಧ ಗುರು ಸಮಾಧಿಗೆ ತೆರಳಿ ನಮನ ಸಲ್ಲಿಸಿದರು. ಇದೇ ವೇಳೆ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ತೊರೆಚಾಕನಹಳ್ಳಿ ಶಂಕರೇಗೌಡ, ನಟ ದೊಡ್ಡಣ್ಣ, ಕಾಂಗ್ರೆಸ್ ಮುಖಂಡ ಜೋಗಿಗೌಡ ಸೇರಿದಂತೆ ಇತರರಿದ್ದರು.

Translate »