ಮಂಡ್ಯದಲ್ಲಿ ಮಾತಿನ ಸಮರ: ಸುಮಲತಾ ಗೆಲ್ಲಲು ಕುತಂತ್ರ ರೂಪಿಸಿದ್ದಾರೆ
ಮಂಡ್ಯ, ಮೈಸೂರು

ಮಂಡ್ಯದಲ್ಲಿ ಮಾತಿನ ಸಮರ: ಸುಮಲತಾ ಗೆಲ್ಲಲು ಕುತಂತ್ರ ರೂಪಿಸಿದ್ದಾರೆ

April 12, 2019

ಮಂಡ್ಯ: ಮತದಾನಕ್ಕೆ ಒಂದೆರಡು ದಿನ ಬಾಕಿ ಇರುವಾಗ ಸುಮಲತಾ ಅವರೇ ಪ್ರಚಾರ ಸಭೆಯಲ್ಲಿ ಕಲ್ಲೆಸೆದುಕೊಂಡು, ತಲೆಗೆ ಪೆಟ್ಟು ಮಾಡಿಕೊಂಡು ನಾಟಕ ಮಾಡಲು ಯೋಜನೆ ರೂಪಿಸಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿ ರೀತಿ ತಾವು ಯಾವುದೇ ಕುತಂತ್ರ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಇಂದು ಮದ್ದೂರು ಬಳಿಯ ಗೆಜ್ಜಲಗೆರೆ ಬಳಿ ರೋಡ್ ಶೋ ವೇಳೆ ಮಾತನಾಡಿದ ಅವರು, ಚುನಾವಣೆ ಗೆಲ್ಲಲು ಸುಮಲತಾ ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ. ಪ್ರಚಾರ ಸಭೆಯಲ್ಲಿ ಅವರೇ ಕಲ್ಲೆಸೆದುಕೊಂಡು ಜೆಡಿಎಸ್ ವಿರುದ್ಧ ಗೂಬೆ ಕೂರಿಸಲು ಯೋಜನೆ ರೂಪಿಸಿದ್ದಾರೆ. ಆ ಮೂಲಕ ಅನುಕಂಪದ ಮತಗಳನ್ನು ಪಡೆಯುವ ಹುನ್ನಾರ ನಡೆಸಿ ದ್ದಾರೆ. ಆದರೆ ನಾವು ಅಂತಹ ಕುತಂತ್ರ ಮಾಡುವುದಿಲ್ಲ ಎಂದರು. ಮೈತ್ರಿ ಅಭ್ಯರ್ಥಿ ನಿಖಿಲ್ ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗಿವೆ. ತಮಗೆ ಕುತಂತ್ರ ರಾಜಕಾರಣ ಮಾಡುವ ಅಗತ್ಯವಿಲ್ಲ. ಪಕ್ಷೇತರ ಅಭ್ಯರ್ಥಿ ಇನ್ನೊಂದು ಮುಖ ನೋಡಿಲ್ಲ ಅಂತಾರೆ. ಅವರು ಬಂದಾಗ ಇನ್ನೊಂದು ಮುಖ ತೋರಿಸಿ ಎಂದು ಕೇಳಿ. ಅವರ ಬಗ್ಗೆ ನಮಗೆಲ್ಲ ಗೊತ್ತಿದೆ, ಈಗ ಆ ಚರ್ಚೆ ಬೇಡ ಎಂದು ಹೇಳಿದರು.

ಮಂಡ್ಯ ಬಜೆಟ್ ಎಂದ ಬಿಜೆಪಿ ನಾಯಕರ ಜೊತೆ ಸೇರಿ ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದಾರೆ. ಜಿಲ್ಲೆಯ 200 ರೈತರು ಆತ್ಮಹತ್ಯೆ ಮಾಡಿಕೊಂಡಾಗ ನಿಮ್ಮ ಬೆಂಬಲಕ್ಕೆ ಯಾರು ಬಂದರು ಎಂದು ಯೋಚಿಸಿ ತೀರ್ಮಾನಿಸಿ. ಈ ನಿಮ್ಮ ಕುಮಾರಣ್ಣ
ಬೇಕೋ ಅಥವಾ ಪಕ್ಷೇತರ ಅಭ್ಯರ್ಥಿ ಬೇಕೋ ಎಂಬುದನ್ನು ವಿವೇಚನೆಯಿಂದ ನಿರ್ಧರಿಸಿ ಎಂದರು. ಮಂಡ್ಯ ಜಿಲ್ಲೆಯ ಏಳಕ್ಕೂ ಏಳು ವಿಧಾನಸಭಾ ಸ್ಥಾನಗಳಲ್ಲಿ ಜೆಡಿಎಸ್ ಶಾಸಕ ರನ್ನು ಗೆಲ್ಲಿಸಿದ್ದೀರಿ. ಅದಕ್ಕಾಗಿ ಶಾಸಕರ ಒತ್ತಾ ಯದ ಮೇರೆಗೆ ಜಿಲ್ಲೆಯ ಅಭಿವೃದ್ದಿ ಕಾರ್ಯ ಗಳಿಗೆ 9 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದೇನೆ. ಕೆಲವರು ನಿಖಿಲ್ ಅಭ್ಯರ್ಥಿ ಆಗಲಿದ್ದಾನೆ ಎಂಬ ಕಾರಣಕ್ಕೆ ಅಭಿವೃದ್ಧಿಗೆ ಹಣ ನೀಡಿದ್ದಾರೆಂದು ಆರೋಪಿಸಿದ್ದಾರೆ. ಅದೆಲ್ಲಾ ಸುಳ್ಳು, ಜಿಲ್ಲೆಯ ಜನತೆಯ ಋಣ ತೀರಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದರು. ಮೈಷುಗರ್ ಕಾರ್ಖಾನೆ ಉಳಿಸಲು 450 ಕೋಟಿ ವೆಚ್ಚದಲ್ಲಿ ಹೊಸ ಕಾರ್ಖಾನೆ ನಿರ್ಮಿಸಲು ಪಣ ತೊಟ್ಟಿದ್ದೇನೆ. ಇಷ್ಟಾದರೂ ಜಿಲ್ಲೆಯಲ್ಲಿ ನಿಖಿಲ್ ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗಿ ನನ್ನನ್ನು ಅತಂತ್ರ ಮಾಡಲು ಹೊರಟಿದ್ದಾರೆ. ರಾಮನಗರ ಜಿಲ್ಲೆ ತಮಗೆ ರಾಜಕೀಯ ಜನ್ಮ ಕೊಟ್ಟಿದೆ. ಮಂಡ್ಯ ಜಿಲ್ಲೆ ರಾಜಕೀಯ ಶಕ್ತಿಯನ್ನು ಕೊಟ್ಟಿದೆ. ಪಕ್ಷೇತರ ಅಭ್ಯರ್ಥಿ ಕುಟುಂಬದವರ ಮನೆ ಕೆಲಸದವರಿಗೆ ಆಮಿಷ ಒಡ್ಡಿದ್ದಾರೆ ಎಂಬ ಮಾಹಿತಿ ಇದೆ. ವಿದೇಶಕ್ಕೆ ಕಳುಹಿಸುತ್ತೇವೆ ಎಂದು ನಾವು ಹೇಳಿದ್ದೇವಂತೆ. ವಿದೇಶಕ್ಕೆ ಹೋಗುವವರು ನಾವಲ್ಲ ಎಂದು ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ಸಂದೇಶ್ ನಾಗರಾಜ್ ಅವರ ಕೈಯಲ್ಲಿ ಒಂದು ಚುನಾವಣೆ ಗೆಲ್ಲುವುದಕ್ಕೆ ಆಗುತ್ತಿರಲಿಲ್ಲ. ತಾವೇ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ಈಗ ತಮ್ಮ ವಿರುದ್ದವೇ ಆತ ಹೋಟೆಲ್‍ನಲ್ಲಿ ಕುಳಿತು ಚರ್ಚೆ ಮಾಡುತ್ತಾನೆ ಎಂದು ಏಕವಚನದಲ್ಲೇ ಗುಡುಗಿದರು.

Translate »