ಹಳೆಯ ಭರವಸೆಗಳನ್ನೇ ಎನ್‍ಡಿಎ ಪೂರೈಸಿಲ್ಲ: ಮೋದಿ ವಿರುದ್ಧ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಆಕ್ರೋಶ
ಮೈಸೂರು

ಹಳೆಯ ಭರವಸೆಗಳನ್ನೇ ಎನ್‍ಡಿಎ ಪೂರೈಸಿಲ್ಲ: ಮೋದಿ ವಿರುದ್ಧ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಆಕ್ರೋಶ

April 13, 2019

ಮೈಸೂರು: ಹಿಂದಿನ ಪ್ರಣಾಳಿಕೆಯಲ್ಲಿನ ಭರವಸೆಗಳನ್ನೇ ಈಡೇರಿ ಸುವಲ್ಲಿ ವಿಫಲವಾದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಇದೀಗ ಹೊಸ ಪ್ರಣಾಳಿಕೆಯೊಂದಿಗೆ ಮತ ಕೇಳಿದರೆ ಜನರು ನಂಬಲಿದ್ದಾರೆಯೇ? ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಇಂದಿಲ್ಲಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದು ಕೊಂಡರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಜನರ ಗಮನ ಬೇರೆಡೆ ಸೆಳೆಯಲು ಭಯೋತ್ಪಾದನೆ ನಿಗ್ರಹ, ದೇಶದ ರಕ್ಷಣೆ ಎಂಬ ಭಾವನಾತ್ಮಕ ವಿಷಯದೊಂದಿಗೆ ಚುನಾವಣೆಗೆ ಬಂದಿದ್ದಾರೆ ಎಂದು ಟೀಕಿಸಿದರು.

ಸರ್ಜಿಕಲ್ ಸ್ಟ್ರೈಕ್ ವಿಚಾರವನ್ನೇ ಮೋದಿ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುತ್ತಿ ದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿಯೂ ಎರಡು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಆದರೆ ಅದನ್ನು ಕಾಂಗ್ರೆಸ್ ಎಂದೂ ಬಹಿರಂಗಪಡಿಸಲಿಲ್ಲ. ಆದರೆ ಮೋದಿ ದೇಶದ ಭದ್ರತೆ ವಿಚಾರವನ್ನೇ ಬಹಿರಂಗವಾಗಿ ಚುನಾವಣೆಗೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಕೇಂದ್ರ ಸರ್ಕಾರದಲ್ಲಿ ಆರ್ಥಿಕ ತಜ್ಞರೇ ಇಲ್ಲದೆ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದೆ. ನೋಟು ಅಮಾನ್ಯೀಕರಣ, ಜಿಎಸ್‍ಟಿ ಜಾರಿ ಹಾಗೂ ಇನ್ನಿತರ ವಿಚಾರಗಳ ಕುರಿತಂತೆ ಮೋದಿ ಸಂಸತ್ತಿನಲ್ಲಾಗಲೀ, ಸಚಿವ ಸಂಪುಟದಲ್ಲಾಗಲೀ ಪ್ರಸ್ತಾಪಿಸದೆ ಏಕಾಏಕಿ ಸ್ವಯಂ ನಿರ್ಧಾರ ಕೈಗೊಳ್ಳುವ ಮೂಲಕ ಸಚಿವ ಸಂಪುಟವನ್ನೇ ಕಡೆಗಣಿಸಿದ್ದಾರೆ. ಮೋದಿ ಸರ್ಕಾರ 10-15 ಮಂದಿ ಶ್ರೀಮಂತರ ಪರವಾಗಿರುವ ಸರ್ಕಾರ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಐದು ವರ್ಷಗಳಲ್ಲಿ ದೇಶದ ಅಭಿವೃದ್ಧಿಗಾಗಿ ಏನೇನು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂಬುದನ್ನು ಮೋದಿ ಬಹಿರಂಗಪಡಿಸಲಿ ಎಂದು ಸವಾಲೆಸೆದರು.

ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡಿಲ್ಲ. ಭಾರತದ ಮಣ್ಣಿನ ಗುಣವನ್ನು ತನ್ನದೇ ತತ್ವ ಸಿದ್ದಾಂತದಲ್ಲಿ ಅಳವಡಿಸಿಕೊಂಡಿದೆ. ಹಿಂದಿನ ಯುಪಿಎ ಸರ್ಕಾರ ಮತ್ತು ರಾಜ್ಯದಲ್ಲಿ ಸಿದ್ದರಾಮಯ್ಯ ಅವಧಿಯ ಸರ್ಕಾರ ಸಾಕಷ್ಟು ಜನಪರ ಯೋಜನೆಗಳ ಮೂಲಕ ಜನರನ್ನು ತಲುಪಿದೆ. ಈ ಬಾರಿ ರಾಜ್ಯದ ಜನತೆ ಮೋದಿ ಮತ್ತು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್ ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಮುಖಂಡರಾದ ಭಾಸ್ಕರ್, ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Translate »