ವಿದ್ಯುತ್ ತಂತಿ ಕಡಿದು ಬಿದ್ದು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ತಾಯಿ, ಮಗಳು ಸಾವು
ಮೈಸೂರು

ವಿದ್ಯುತ್ ತಂತಿ ಕಡಿದು ಬಿದ್ದು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ತಾಯಿ, ಮಗಳು ಸಾವು

April 13, 2019

ಚಾಮರಾಜನಗರ: ವಿದ್ಯುತ್ ತಂತಿ ತುಂಡಾಗಿ ಬಿದ್ದು ಹೊಳೆಯಲ್ಲಿ ಸ್ನಾನ ಮಾಡು ತ್ತಿದ್ದ ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಬ್ಬಸೂರು ಗ್ರಾಮದ ಬಳಿಯ ಸುವರ್ಣಾ ವತಿ ಹೊಳೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಮೂಲತಃ ಹೆಬ್ಬಸೂರು ಗ್ರಾಮದ ನಿವಾಸಿ ಹಾಗೂ ಹಾಲಿ ಚಾಮರಾಜನಗರ ಭ್ರಮರಾಂಬ ಬಡಾವಣೆ ಯಲ್ಲಿ ವಾಸವಿದ್ದ ಕಣ್ಣನ್ ಎಂಬುವವರ ಪತ್ನಿ ಮಂಜುಳಾ (40) ಹಾಗೂ ಮಗಳು ಯಶಶ್ರೀ(9) ಮೃತಪಟ್ಟವರು. ಘಟನೆಯಲ್ಲಿ ಇವರ ಮತ್ತೊಬ್ಬ ಮಗಳು ಶ್ರಾವ್ಯಶ್ರೀ(14) ಗಾಯಗೊಂಡಿದ್ದು, ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹೆಬ್ಬಸೂರು ಬಳಿಯ ಕುಂಭೇಶ್ವರ ಕಾಲೋನಿಯಲ್ಲಿ ಶುಕ್ರವಾರ ಕೊಂಡೋತ್ಸವವಿತ್ತು. ಕಣ್ಣನ್ ಅವರ ಅಕ್ಕ ಅದೇ ಗ್ರಾಮದವರಾಗಿದ್ದರಿಂದ ಹಬ್ಬಕ್ಕೆ ಆಹ್ವಾನಿಸಿದ್ದರು. ಮಕ್ಕಳಿಗೆ ರಜೆ ಇದ್ದ ಕಾರಣ ಕಣ್ಣನ್ ಹಾಗೂ ಅವರ ಭಾವ ಸುಬ್ರಹ್ಮಣ್ಯ ಮಕ್ಕಳ ಸಮೇತ ಹಬ್ಬಕ್ಕೆ ತೆರಳಿದ್ದರು. ಮಕ್ಕಳು ಇಷ್ಟಪಟ್ಟ ಹಿನ್ನೆಲೆಯಲ್ಲಿ ಸಮೀಪ ದಲ್ಲಿದ್ದ ಸುವರ್ಣಾವತಿ ಹೊಳೆಗೆ ಸುಬ್ರಹ್ಮಣ್ಯ ಕುಟುಂಬ ಸಮೇತರಾಗಿ ಮಧ್ಯಾಹ್ನ ಹೋಗಿದ್ದರು. ಈ ವೇಳೆ ಹೊಳೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಭಾರೀ ಶಬ್ದ ದೊಂದಿಗೆ ಸ್ನಾನ ಮಾಡುತ್ತಿದ್ದ

ಮಂಜುಶ್ರೀ, ಯಶಶ್ರೀ, ಶ್ರಾವ್ಯಶ್ರೀ ಮತ್ತು ಮಂಜುಳಾ ಅವರ ಅಕ್ಕ ನಾಗಮ್ಮ ಮೇಲೆ ಬಿದ್ದಿದೆ. ಪರಿಣಾಮ ವಿದ್ಯುತ್ ಸ್ಪರ್ಶದಿಂದ ಮಂಜುಳಾ ಹಾಗೂ ಯಶಶ್ರೀ ಸಾವನ್ನಪ್ಪಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯ, ವಿದ್ಯುತ್ ತಂತಿ ತುಂಡಾಗಿ ಬಿದ್ದ ತಕ್ಷಣ ನನಗೂ ವಿದ್ಯುತ್ ಸ್ಪರ್ಶವಾದರೂ, ಶ್ರಾವ್ಯಶ್ರೀಯನ್ನು ದಡಕ್ಕೆ ಎಳೆದು ತಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಆಕೆ ಚೇತರಿಸಿಕೊಂಡಳು. ನಂತರ ಅಕ್ಕ ನಾಗಮ್ಮನನ್ನು ದಡಕ್ಕೆ ತಂದು ಬದುಕಿಸಿಕೊಂಡೆ. ಆದರೆ ಮಂಜುಳಾ ಮತ್ತು ಯಶಶ್ರೀ ಅವರನ್ನು ಉಳಿಸಿ ಕೊಳ್ಳಲು ಆಗಲಿಲ್ಲ ಎಂದು ಕಣ್ಣೀರು ಹಾಕುತ್ತಾ ಹೇಳಿದರು. ಮೃತ ಮಂಜುಳಾ ಈ ಹಿಂದೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು, ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ಚಾಮರಾಜನಗರ ಚೆಸ್ಕಾಂ ವಿಭಾಗದ ಲೆಕ್ಕಾಧಿಕಾರಿ ಭಾಸ್ಕರ್ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ನಂತೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »