ಇಂದು ಮೈಸೂರು ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಅಂತಿಮ ಘಳಿಗೆಯಲ್ಲಿ ಬಿಜೆಪಿ ಮೈತ್ರಿ ಮುರಿದುಕೊಂಡ ಜೆಡಿಎಸ್; ಈಗ ಮೈಸೂರು ಜಿಪಂನಲ್ಲೂ ಜೆಡಿಎಸ್-ಕಾಂಗ್ರೆಸ್ ದೋಸ್ತಿ
ಮೈಸೂರು

ಇಂದು ಮೈಸೂರು ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಅಂತಿಮ ಘಳಿಗೆಯಲ್ಲಿ ಬಿಜೆಪಿ ಮೈತ್ರಿ ಮುರಿದುಕೊಂಡ ಜೆಡಿಎಸ್; ಈಗ ಮೈಸೂರು ಜಿಪಂನಲ್ಲೂ ಜೆಡಿಎಸ್-ಕಾಂಗ್ರೆಸ್ ದೋಸ್ತಿ

February 23, 2019

ಮೈಸೂರು: ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಅಂತಿಮ ಘಳಿಗೆಯಲ್ಲಿ ಜೆಡಿಎಸ್, ಬಿಜೆಪಿ ಯೊಂದಿ ಗಿನ ಮೈತ್ರಿ ಮುರಿದುಕೊಂಡಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ವರಿಷ್ಠರ ನಡುವೆ ಮಾತುಕತೆ ಫಲಶ್ರುತಿಯಾಗಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಏರ್ಪಟ್ಟಿರುವಂತೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮೂಲಕ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲೂ ಅಧಿಕಾರ ಹಿಡಿಯಲು ಸಜ್ಜಾಗಿವೆ. ಕೆಲ ದಿನಗಳಿಂದ ಜೆಡಿಎಸ್ ವರಿಷ್ಠರೇ ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾ ವಣೆಯ ಸಂಬಂಧ ಸ್ಥಳೀಯ ಮುಖಂಡರ ನಿರ್ಧಾರಕ್ಕೆ ಬಿಡಲಾಗಿದೆ ಎಂದು ಹೇಳುತ್ತಾ ಬಂದಿದ್ದರು. ಇದರ ಫಲವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ್ ಸಿಂಹ ಸೇರಿ ಮಾತುಕತೆ ಮೂಲಕ ಈ ಹಿಂದೆ ಐದು ವರ್ಷಗಳಿಗೆ ಏರ್ಪಟ್ಟಿದ್ದ ಒಡಂಬಡಿಕೆಯಂತೆ ಮೈತ್ರಿ ಮುಂದುವರೆಸಲು ನಿರ್ಧರಿಸಿದ್ದರು. ಈ ವೇಳೆ ಉಭಯ ಪಕ್ಷಗಳ ಸದಸ್ಯರ ಒತ್ತಾಯದಂತೆ ಹಾಗೂ ಅವರ ಇರಾದೆಯಂತೆ ಮೈತ್ರಿಯನ್ನು ಮುಂದುವರೆಸುತ್ತಿರುವುದಾಗಿಯೂ ಹೇಳಿದ್ದರು.

ಆದರೆ ಇಂದು ರಾತ್ರಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಸಂಪರ್ಕಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಸಿದ್ದರಾಮಯ್ಯ ಮಾತುಕತೆ ನಡೆಸಿದರು.

ಅಭಿವೃದ್ಧಿ, ಮೈತ್ರಿ ಧರ್ಮದ ದೃಷ್ಟಿಯಿಂದ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲೂ ಉಭಯ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ. ಒಂದು ವೇಳೆ ಹೀಗೆ ಆಗದಿದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮದ ಸಂಬಂಧ ರಾಜ್ಯದಲ್ಲಿ ಅನ್ಯ ಸಂದೇಶ ಹೋಗುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಉಭಯ ನಾಯಕರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಇದಕ್ಕೂ ಮುನ್ನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಮೈತ್ರಿಯ ಅನಿವಾರ್ಯತೆಯ ಬಗ್ಗೆ ಮನವಿ ಮಾಡಿದ್ದರು. ಆದರೆ ಇದನ್ನು ಮಾಜಿ ಪ್ರಧಾನಿ ದೇವೇಗೌಡರು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಕೆ.ಸಿ.ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಮಧ್ಯೆ ಪ್ರವೇಶಿಸಿ ದೇವೇಗೌಡರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರನ್ನು ಮೈತ್ರಿಗೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ಪರಿಣಾಮವಾಗಿ ದೇವೇಗೌಡರು, ಇಂದು ರಾತ್ರಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ದೂರವಾಣಿ ಕರೆ ಮಾಡಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಮೈಸೂರು ಜಿಲ್ಲಾ ಪಂಚಾಯತ್‍ನ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನವನ್ನು ಹಿಡಿಯುವಂತೆ ಸೂಚನೆ ನೀಡಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ರಾಜ್ಯ ನಾಯಕರು ಕೂಡ ಹುಣಸೂರು ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್‍ಗೆ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಭೇಟಿ ಮಾಡಿ ಮಾತುಕತೆ ನಡೆಸುವಂತೆಯೂ ಸೂಚಿಸಿದ್ದರು. ಅದರಂತೆ ಮಂಜುನಾಥ್ ಅವರು, ಸಾ.ರಾ.ಮಹೇಶ್ ಭೇಟಿಯಾಗಿ ತಮ್ಮ ಪಕ್ಷದ ರಾಜ್ಯ ನಾಯಕರ ಸಂದೇಶ ತಲುಪಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಉಭಯ ಪಕ್ಷಗಳ ವರಿಷ್ಠರ ಸೂಚನೆ ಮೇರೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಏರ್ಪಟ್ಟಿದೆ. ಅದರಂತೆ ಜೆಡಿಎಸ್ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಪಡೆಯಲಿದೆ. ವರಿಷ್ಠರು ನಮಗೆ ನೀಡಿದ ಅವಕಾಶದಂತೆ ಸ್ಥಳೀಯವಾಗಿ ನಾವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಿಂದಿನಿಂದಲೂ ಅಧಿಕಾರ ನಡೆಸುತ್ತಾ ಬಂದಿದ್ದೇವೆ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಮೈತ್ರಿ ಧರ್ಮ ಪಾಲನೆಗೆ ನಮ್ಮ ಪಕ್ಷಗಳ ವರಿಷ್ಠರ ಸೂಚನೆಯನ್ನು ಪಾಲಿಸಲು ಬದ್ಧರಾಗಿರುವುದಾಗಿ ಘೋಷಿಸಿದರು.

ಬಿಜೆಪಿಗೆ ಮರ್ಮಾಘಾತ

“ರಾಜ್ಯ ರಾಜಕಾರಣದ ಹಣಾಹಣಿ ನಡುವೆ ಮೈಸೂರು ಜಿಪಂನಲ್ಲಿ ಮೈತ್ರಿ ಮುಂದುವರಿಯುತ್ತದೆ ಎಂದು ನಂಬಿದ್ದ ಬಿಜೆಪಿಗೆ ಮರ್ಮಾಘಾತವಾಗಿದೆ. ಜೆಡಿಎಸ್ ನಾಯಕರು ಸಭೆ ನಡೆಸಿ, ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸುವ ದೃಢ ನಿರ್ಧಾರ ತೆಗೆದುಕೊಂಡಿದ್ದಲ್ಲದೆ, ಯಾವುದೇ ಗೊಂದಲ ಸೃಷ್ಟಿಯಾಗಬಾರದೆಂದು ಉಭಯ ಪಕ್ಷದ ಸದಸ್ಯರನ್ನು ರೆಸಾರ್ಟ್‍ಗೂ ಕಳುಹಿಸಿದ್ದರು. ಆದರೆ ರಾತ್ರೋರಾತ್ರಿ ಬೆಳವಣಿಗೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ನಿರ್ಧಾರ ಮಾಡಿದ್ದು, ಬಿಜೆಪಿಗೆ ಭಾರೀ ಆಘಾತ ನೀಡಿದಂತಾಗಿದೆ.

Translate »