ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದು ಬನ್ನಿ, ಮರುದಿನವೇ ಬಿ.ಎಸ್.ಯಡಿಯೂರಪ್ಪ ಸಿಎಂ ಆಗ್ತಾರೆ
ಮೈಸೂರು

ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದು ಬನ್ನಿ, ಮರುದಿನವೇ ಬಿ.ಎಸ್.ಯಡಿಯೂರಪ್ಪ ಸಿಎಂ ಆಗ್ತಾರೆ

February 23, 2019

ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರ ರಚಿಸಲು ಬೇಡುತ್ತಾ ಕೂರುವ ಅಗತ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಿ, ಮರು ದಿನವೇ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯುತ್ತದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸ್ಥಳೀಯ ನಾಯಕರಿಗೆ ತಿಳಿಸಿದ್ದಾರೆ. ನಿನ್ನೆ ತಡರಾತ್ರಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ, ನೇರವಾಗಿಯೇ ಆಪರೇಷನ್ ಕಮಲ ಕಾರ್ಯಾಚರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ನಾವೇ ಸರ್ಕಾರ ರಚಿಸಬೇಕಿತ್ತು. ಆದರೆ ಸಂವಿಧಾನ ಬದ್ಧವಾಗಿ ಅದು ಸಾಧ್ಯವಾಗಲಿಲ್ಲ. ರಾಜ್ಯ ವಿಧಾನಸಭೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರತಿಪಕ್ಷವಾಗಿ ಕೂರುವ ಸ್ಥಿತಿ ಬಂದಿದ್ದರೂ ಅದೇನೂ ಶಾಶ್ವತ ಸ್ಥಿತಿಯಲ್ಲ. ನೀವು 25 ಸ್ಥಾನ ಗೆದ್ದು ತನ್ನಿ, 24 ಗಂಟೆಯೊಳಗೆ ನಾನು, ನಿಮಗೆ ಅಧಿಕಾರ ಕೊಡಿಸುತ್ತೇನೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕಾಗಿ ತಮ್ಮ ವೈಮನಸ್ಸುಗಳನ್ನು ಮರೆತು ಒಂದಾಗಿರಬಹುದು. ಆದರೆ ವಾಸ್ತವ ಬೇರೆಯೇ ಇದೆ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಮುಂದುವರೆಯುವುದಿಲ್ಲ. ಅಧಿಕಾರಕ್ಕಾಗಿ ಕೈಯೊಡ್ಡಿ ಕುಳಿತುಕೊಳ್ಳಬೇಡಿ, ಮೊದಲು ಚುನಾವಣೆಗೆ ಸಿದ್ಧರಾಗಿ, ಪಕ್ಷ ಸಂಘಟಿಸಿ ಹೆಚ್ಚು ಸ್ಥಾನ ಗೆಲ್ಲುವತ್ತ ಗಮನ ಹರಿಸಿ. ಕಾಂಗ್ರೆಸ್-ಜೆಡಿಎಸ್ ರಾಜ್ಯ ಮುಖಂಡರು ಹಾದಿಬೀದಿಯಲ್ಲಿ ಕಿತ್ತಾಡಿಕೊಂಡಿ ರಲಿ, ನೀವು ಅದರ ಲಾಭ ಪಡೆದುಕೊಳ್ಳುವತ್ತ ಗಮನ ಹರಿಸಿ, ಇದನ್ನು ಬಿಟ್ಟು ಆಗದ ಕೆಲಸಕ್ಕೆ ಕೈಹಾಕಬೇಡಿ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅತ್ಯಂತ ಮಹತ್ವದ ಘಟ್ಟದಲ್ಲೇ ನೀವು 17 ಲೋಕಸಭಾ ಸ್ಥಾನ ಗೆಲ್ಲಿಸಿದ್ದೀರಿ.

ಕೇವಲ ಮೋದಿ ಅಲೆ ಅಷ್ಟೇ ಅಲ್ಲ, ಅದಕ್ಕಿಂತ ಮಿಗಿಲಾಗಿ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಶ್ರಮವೂ ಸೇರಿದೆ. ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ ಜನ ವಿರೋಧಿ ಅಲೆ ಇದೆ. ಇದರ ಲಾಭವನ್ನು ನಾವು ಪಡೆದುಕೊಳ್ಳಬೇಕಿದೆ. ನೀವು ಒಗ್ಗಟ್ಟಿ ನಿಂದ ನಮ್ಮ ಮಾರ್ಗದರ್ಶನದಲ್ಲಿ ನಡೆದರೆ, 25ರ ಗುರಿ ಮುಟ್ಟು ವುದರಲ್ಲಿ ಸಂಶಯವೇ ಇಲ್ಲ. ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ವರಿಷ್ಠರ ಆದೇಶಗಳನ್ನು ಸರಿಯಾಗಿ ಪಾಲಿಸಿದ್ದರೆ, ಬೆಂಗಳೂರು ಕೇಂದ್ರ ಒಂದರಲ್ಲೇ ಇನ್ನೂ ಹೆಚ್ಚು ಸ್ಥಾನ ಗಳಿಸುತ್ತಿದ್ದಿರಿ. ನನಗೆ ಇರುವ ಮಾಹಿತಿ ಪ್ರಕಾರ ನೀವು ಇದೇ ರೀತಿ ಮೈಮರೆತರೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಲೋಕಸಭಾ ಕ್ಷೇತ್ರಗಳನ್ನೂ ಕಳೆದುಕೊಳ್ಳುತ್ತೀರಿ.

ನಮ್ಮನ್ನು ನಂಬಿ, ನೀವು ಒಂದಾಗಿ ದುಡಿಯಿರಿ, ನಿಮಗೆ ಅಧಿಕಾರದ ಬಾಗಿಲು ತಾನಾಗಿಯೇ ತೆರೆಯುತ್ತದೆ ಎಂದು ಹಿಂದಿ ಭಾಷೆಯಲ್ಲೇ ಕಟು ಸತ್ಯವನ್ನು ತಿಳಿಸಿದ್ದಾರೆ.

ಭಾರಿ ಸಂಖ್ಯೆಯ ಶಾಸಕರನ್ನು ಬೇರೆ ಪಕ್ಷದಿಂದ ಕರೆತರುವಾಗ ಸಾರ್ವಜನಿಕವಾಗಿ ಅಪನಿಂದನೆಗಳನ್ನು ಎದುರಿಸಬೇಕಾಗುತ್ತದೆ. ಲೋಕಸಭಾ ಚುನಾವಣೆ ನೀವಂದು ಕೊಂಡಷ್ಟು ಸುಲಭವಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಕೈಜೋಡಿಸಿರುವು ದರಿಂದ ಅವೆರಡೂ ಶಕ್ತಿಗಳನ್ನು ನಾವು ಏಕಾಂಗಿಯಾಗಿ ಎದುರಿಸಬೇಕಾಗುತ್ತದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದವರ ಪೈಕಿ ಹದಿನಾರು ಮಂದಿ ಇನ್ನೂ ಸಂಸದರಾಗಿದ್ದಾರೆ. ಅವರಿಗೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡೋಣ. ಉಳಿದಂತೆ ಹನ್ನೆರಡು ಲೋಕಸಭಾ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬಹುದು ಎಂಬ ಕುರಿತು ನೀವೊಂದು ಪಟ್ಟಿ ನೀಡಿದ್ದೀರಿ. ಈ ಕ್ಷೇತ್ರಗಳಲ್ಲಿ ಯಾರನ್ನು ನಿಲ್ಲಿಸಬೇಕು, ಯಾರನ್ನು ನಿಲ್ಲಿಸಿದರೆ ಗೆಲುವು ಸಾಧಿಸುವುದು ಸುಲಭ ಎಂಬ ಕುರಿತು ನನ್ನ ಬಳಿ ಬೇರೆ ಪಟ್ಟಿ ಇದೆ. ವಿವರವಾಗಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳೋಣ, ನಂತರ ಚುನಾವಣಾ ಆಯ್ಕೆ ಸಮಿತಿಗೆ ಪಟ್ಟಿ ಕಳುಹಿಸೋಣ ಎಂದು ಅವರು ಇದೇ ಸಂದರ್ಭದಲ್ಲಿ ರಾಜ್ಯ ನಾಯಕರಿಗೆ ವಿವರಿಸಿದರು.

Translate »