ದೇವರಾಜ, ವಾಣಿವಿಲಾಸ, ಮಂಡಿ  ಮಾರುಕಟ್ಟೆಯಲ್ಲಿ ಬೆಸ-ಸಮ ಸಂಖ್ಯೆ ವ್ಯವಸ್ಥೆ
ಮೈಸೂರು

ದೇವರಾಜ, ವಾಣಿವಿಲಾಸ, ಮಂಡಿ ಮಾರುಕಟ್ಟೆಯಲ್ಲಿ ಬೆಸ-ಸಮ ಸಂಖ್ಯೆ ವ್ಯವಸ್ಥೆ

April 29, 2021

ಮೈಸೂರು,ಏ.28(ಪಿಎಂ)- ಮೈಸೂರಿನ ದೇವ ರಾಜ, ವಾಣಿವಿಲಾಸ ಹಾಗೂ ಮಂಡಿ ಮಾರು ಕಟ್ಟೆಗಳಲ್ಲಿ ಅಗತ್ಯ ವಸ್ತು ಮಳಿಗೆಗಳು ಬೆಸ ಮತ್ತು ಸಮ ಸಂಖ್ಯೆ ಆಧಾರದಲ್ಲಿ ಬುಧವಾರ ಬೆಳಗ್ಗೆ 6ರಿಂದ 10ರವರೆಗೆ ತೆರೆದು ವಹಿವಾಟು ನಡೆಸಿದ್ದು, ಜೊತೆಗೆ ಬೆಸ ಮತ್ತು ಸಮ ಸಂಖ್ಯೆ ವ್ಯವಸ್ಥೆ ಸಂಬಂಧ ವ್ಯಾಪಾರಸ್ಥರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯ ಸರ್ಕಾರ 14 ದಿನಗಳ ಕೋವಿಡ್ ಕಫ್ರ್ಯೂ ಅವಧಿಯಲ್ಲಿ ಅಗತ್ಯ ವಸ್ತುಗಳ ಮಳಿಗೆ ತೆರೆಯಲು ಬೆಳಗಿನ 4 ಗಂಟೆ ಮಾತ್ರ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಸ ಮತ್ತು ಸಮ ಸಂಖ್ಯೆ ಆಧಾರದಲ್ಲಿ ಮಳಿಗೆ ತೆರೆಯುವ ವ್ಯವಸ್ಥೆಯಿಂದ ನಮಗೆ ನಷ್ಟ ವಾಗಲಿದೆ ಎಂದು ಮಾರುಕಟ್ಟೆಗಳ ಹಲವು ವ್ಯಾಪಾ ರಸ್ಥರು ಅಭಿಪ್ರಾಯಪಟ್ಟರೆ, ಕೆಲವರು ಕೋವಿಡ್ ಪರಿಣಾಮಕಾರಿ ನಿಯಂತ್ರಣಕ್ಕೆ ಪಾಲಿಕೆ ಕೈಗೊಂಡ ಈ ಕ್ರಮ ಸೂಕ್ತ ಎಂದು ಸ್ವಾಗತಿಸಿದ್ದಾರೆ.
ಏ.21ರಂದು ಸರ್ಕಾರ ಹಲವು ನಿರ್ಬಂಧಗಳ ಜೊತೆಗೆ ರಾತ್ರಿ ಹಾಗೂ ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿತ್ತು. ಇದಾದ ಬಳಿಕ ಏ.23ರಂದು ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಮಳಿಗೆಗಳು ಬೆಸ ಮತ್ತು ಸಮ ಸಂಖ್ಯೆ ಆಧಾರದಲ್ಲಿ ತೆರೆದು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ವ್ಯಾಪಾರ ನಡೆಸಬೇಕೆಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದರು.

ಮೇ 4ರವರೆಗೆ ಇದ್ದ ಈ ಆದೇಶ ಪಾಲಿಸಲು ವ್ಯಾಪಾರಿಗಳು ಮಾನಸಿಕವಾಗಿ ಸಿದ್ಧವಾಗಿದ್ದರು. ಇದೀಗ ಕೋವಿಡ್ ಕಫ್ರ್ಯೂ ಹಿನ್ನೆಲೆಯಲ್ಲಿ ದಿನಕ್ಕೆ ಕೇವಲ 4 ಗಂಟೆ ಅವಧಿಯಲ್ಲಿ ವಹಿವಾಟು ನಡೆಸಲು ಅವಕಾಶ ವಿದೆ. ಹೀಗಾಗಿ ಬೆಸ ಮತ್ತು ಸಮ ಸಂಖ್ಯೆ ಕೈಬಿಟ್ಟರೆ ಅನುಕೂಲವೆಂದು ಹಲವು ವ್ಯಾಪಾರಸ್ಥರು ಹೇಳುತ್ತಿದ್ದರೆ, ಇನ್ನು ಕೆಲವರು ಈ ಕ್ರಮ ಕೋವಿಡ್ ತಡೆಗೆ ಸೂಕ್ತ ಎಂದು ಪಾಲಿಸಲು ಒಲವು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್ ಸಂಖ್ಯೆ ವ್ಯಾಪಕ ವಾಗಿದ್ದರೂ ಅಲ್ಲಿನ ಮಾರುಕಟ್ಟೆಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಿಲ್ಲ. ಕಫ್ರ್ಯೂ ಹಿನ್ನೆಲೆಯಲ್ಲಿ ಮಾರು ಕಟ್ಟೆಗೆ ಜನರೇ ಬರುವುದು ಕಡಿಮೆ. ಹೀಗಿರುವಾಗ ಇದನ್ನು ಕೈಬಿಟ್ಟರೆ ನಮಗೆ ಅನುಕೂಲ ಆಗಲಿದೆ ಎಂಬುದು ಅನೇಕ ವ್ಯಾಪಾರಿಗಳ ವಾದ.
`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ದೇವ ರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಎಸ್.ಮಹದೇವ್, ದಿನಕ್ಕೆ ಕೇವಲ 4 ಗಂಟೆ ವಹಿ ವಾಟಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಬೆಸ ಮತ್ತು ಸಮ ಸಂಖ್ಯೆ ಆಧಾರದಲ್ಲಿ ಮಳಿಗೆ ತೆರೆಯುವ ವ್ಯವಸ್ಥೆ ಕೈಬಿಟ್ಟರೆ ವ್ಯಾಪಾರಸ್ಥರಿಗೆ ಅನುಕೂಲ. ಒಬ್ಬೊಬ್ಬ ವ್ಯಾಪಾರಿ ದಿನ ಬಿಟ್ಟು ಮತ್ತೊಂದು ದಿನ ದಲ್ಲಿ ಕೇವಲ 4 ಗಂಟೆ ವ್ಯಾಪಾರ ಮಾಡಿದರೆ, ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ಕೋವಿಡ್ ಕಫ್ರ್ಯೂ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಆಗುವುದೂ ಇಲ್ಲ. ಆದ್ದರಿಂದ ಬೆಸ ಮತ್ತು ಸಮ ಸಂಖ್ಯೆ ವ್ಯವಸ್ಥೆ ಕೈಬಿಡಬೇಕು ಎಂದು ಕೋರಿದರು.

ಮಂಡಿ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಪ್ರೇಮ್‍ಕುಮಾರ್ ಮಾತನಾಡಿ, ಬೆಸ ಮತ್ತು ಸಮ ಸಂಖ್ಯೆ ವ್ಯವಸ್ಥೆಯಿಂದ ವರ್ತಕರಿಗೆ ನಷ್ಟವೇ ಆಗಲಿದೆ. ಈಗಾಗಲೇ ವ್ಯಾಪಾರಸ್ಥರು ಇದರಿಂದ ತೊಂದರೆ ಆಗುತ್ತಿದೆ ಎಂದು ಅಳಲು ತೋಡಿ ಕೊಳ್ಳುತ್ತಿದ್ದಾರೆ ಎಂದರು.

ವಾಣಿವಿಲಾಸ ಮಾರುಕಟ್ಟೆ ಬಾಡಿಗೆದಾರರ ಸಂಘದ ಕಾರ್ಯದರ್ಶಿ ಶಿವಕುಮಾರ್ `ಮಿತ್ರ’ನೊಂದಿಗೆ ಮಾತ ನಾಡಿ, ಬೆಸ ಮತ್ತು ಸಮ ಸಂಖ್ಯೆ ವ್ಯವಸ್ಥೆ ಸಂಬಂಧ ಆಯುಕ್ತರ ಆದೇಶದ ಬಗ್ಗೆ ವ್ಯಾಪಾರಿಗಳಿಗೆ ತಿಳುವಳಿಕೆ ನೀಡಿದ್ದೇವೆ. ಸೋಂಕು ನಿಯಂತ್ರಣದ ಸದುದ್ದೇಶದಿಂದ ವ್ಯವಸ್ಥೆ ಜಾರಿ ಮಾಡಲಾಗಿದೆ. ಕೋವಿಡ್ ತಡೆಗೆ ಈ ಕ್ರಮ ಸೂಕ್ತ. ಈ ಹಿನ್ನೆಲೆಯಲ್ಲಿ ಇದು ಸ್ವಾಗತಾರ್ಹ ಎಂದು ಹೇಳಿದರು.

Translate »