ಇಂದು ಆನ್‍ಲೈನ್ ಮೂಲಕ ಪಾಲಿಕೆ ಬಜೆಟ್ ಮಂಡನೆ
ಮೈಸೂರು

ಇಂದು ಆನ್‍ಲೈನ್ ಮೂಲಕ ಪಾಲಿಕೆ ಬಜೆಟ್ ಮಂಡನೆ

April 29, 2021

ಮೈಸೂರು, ಏ.28(ಆರ್‍ಕೆ)-ನಾಳೆ (ಏ.29) ಬೆಳಿಗ್ಗೆ 11.30 ಗಂಟೆಗೆ ಮೈಸೂರು ಮಹಾನಗರ ಪಾಲಿಕೆಯ 2021-22ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆಯಾಗಲಿದೆ.

ಪಾಲಿಕೆ ಕಚೇರಿ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ರುಕ್ಮಿಣಿ ಮಾದೇಗೌಡರು ಅಧ್ಯಕ್ಷತೆ ವಹಿಸಲಿರುವ ವಿಶೇಷ ಕೌನ್ಸಿಲ್ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಎಸ್.ಶೋಭಾ ಅವರು ಆನ್‍ಲೈನ್ ಮೂಲಕ ಆಯ-ವ್ಯಯ ಮಂಡಿಸುವರು.
ಯು-ಟ್ಯೂಬ್, ಫೇಸ್‍ಬುಕ್ ಲಿಂಕ್ ಮೂಲಕ ಬಜೆಟ್ ಮಂಡನೆಯ ಕಲಾಪಗಳನ್ನು ಬಿತ್ತರಿಸಲು ಪಾಲಿಕೆಯು ವ್ಯವಸ್ಥೆ ಮಾಡಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗಿರುವುದರಿಂದ ಸೋಂಕಿತರ ಚಿಕಿತ್ಸೆಗಾಗಿ ವೆಂಟಿಲೇಟರ್, ಎಂಆರ್‍ಐ ಮತ್ತು ಸಿಟಿ ಸ್ಕ್ಯಾನಿಂಗ್ ಯಂತ್ರ ಖರೀದಿಗೆ ಸುಮಾರು 10 ಕೋಟಿ ರೂ. ಅನುದಾನ ಒದಗಿಸಿ ಪಾಲಿಕೆಯು ಜಿಲ್ಲಾಡಳಿತಕ್ಕೆ ನೆರವಾಗಲಿದೆ ಎಂದು ಹೇಳಲಾಗಿದೆ.

ಕೊರೊನಾದಂತಹ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರಿನ ಪತ್ರಕರ್ತರ ಆರೋಗ್ಯ ಸುರಕ್ಷತೆಗಾಗಿಯೂ ಮೈಸೂರು ಮಹಾನಗರ ಪಾಲಿಕೆಯು ಆಯ-ವ್ಯಯದಲ್ಲಿ ಅನುದಾನ ಮೀಸಲಿಡುವ ಸಾಧ್ಯತೆ ಇದೆ. ಕೊರೊನಾ ವಾರಿಯರ್ಸ್‍ರಂತೆ ಕಾರ್ಯ ನಿರ್ವಹಿಸುತ್ತಿರುವ ಮುದ್ರಣ, ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳು ಹಾಗೂ ಪತ್ರಿಕಾ ಛಾಯಾಗ್ರಾಹಕರು ಅನಾ ರೋಗ್ಯಕ್ಕೆ ತುತ್ತಾದಾಗ ಅವರ ವೈದ್ಯಕೀಯ ಚಿಕಿತ್ಸೆಗಾಗಿ 50 ಲಕ್ಷ ರೂ. ಅನುದಾನ ವನ್ನು ಮೀಸಲಿರಿಸುವಂತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಮೇಯರ್, ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಉಳಿದಂತೆ ಸ್ವಚ್ಛತೆ, ಕುಡಿಯುವ ನೀರು, ರಸ್ತೆ, ಚರಂಡಿ ಅಭಿವೃದ್ಧಿ, ಪಾರ್ಕುಗಳ ನಿರ್ವಹಣೆಯಂತಹ ಮೂಲಸೌಕರ್ಯ ಕಲ್ಪಿಸುವುದೂ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಬಜೆಟ್‍ನಲ್ಲಿ ಪ್ರಕಟಿಸಬಹುದೆಂದು ನಿರೀಕ್ಷಿಸಲಾಗಿದೆ.

Translate »