ಆಧಾರಸ್ತಂಭವೂ ಸೇರಿ ಒಂದೇ ಕುಟುಂಬದ  ಐವರ ಬಲಿ ಪಡೆದ ‘ಕ್ರೂರಿ ಕೊರೊನಾ’
ಮೈಸೂರು

ಆಧಾರಸ್ತಂಭವೂ ಸೇರಿ ಒಂದೇ ಕುಟುಂಬದ ಐವರ ಬಲಿ ಪಡೆದ ‘ಕ್ರೂರಿ ಕೊರೊನಾ’

April 29, 2021

ಮೈಸೂರು,ಏ.28(ಎಂಕೆ)- ಕರುಣೆಯೇ ಇಲ್ಲದ ಕ್ರೂರಿ ಕೊರೊನಾ ಗಾರೆ ಕೆಲಸವನ್ನೇ ನಂಬಿ ಬದುಕುತ್ತಿದ್ದ ಒಂದೇ ಕುಟುಂಬ ಐವರನ್ನು ಬಲಿಪಡೆದುದಲ್ಲದೆ, ಕುಟುಂಬದ ಆಧಾರಸ್ತಂಭವನ್ನೇ ಕೆಡವಿದೆ.

ಮೊನ್ನೆ(ಸೋಮವಾರ) ತಡ ರಾತ್ರಿ ಕೊರೊನಾ ಹೆಮ್ಮಾರಿಗೆ ಬಲಿಯಾದ ಮೈಸೂರಿನ ಕ್ಯಾತ ಮಾರನಹಳ್ಳಿ ನಿವಾಸಿ ಷಣ್ಮುಗಂ (51) ಅವರ ಕುಟುಂಬವನ್ನು ಪಿಶಾಚಿಯಂತೆ ಕಾಡಿದ ಕ್ರೂರಿ ಕೊರೊನಾ ಅವರದ್ದೇ ಕುಟುಂ ಬದ ಐವರನ್ನು ಬಲಿಪಡೆದಿದೆ.

ಗಾರೆ ಕೆಲಸ ಮಾಡಿಕೊಂಡು ಸಂಸಾರಕ್ಕೆ ಆಧಾರಸ್ತಂಭವಾಗಿದ್ದ ಷಣ್ಮುಗಂ ಅವರ ಜೀವ ಕಿತ್ತುಕೊಂಡ ಕೊರೊನಾ, ಇಡೀ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ ಅವರ ತಾಯಿ, ಅಳಿಯ (ಅಣ್ಣನ ಮಗಳ ಗಂಡ), ಬಾವ (ಅಕ್ಕನ ಗಂಡ), ಅತ್ತಿಗೆ (ದೊಡ್ಡಣ್ಣನ ಹೆಂಡತಿ) ಅವರ ಪ್ರಾಣವನ್ನು ಒಬ್ಬರ ನಂತರ ಮತ್ತೊಬ್ಬರಂತೆ ಕೊರೊನಾ ಕಿತ್ತುಕೊಂಡಿತ್ತು.

ಮದುವೆ ಬಳಿಕ ಪ್ರತ್ಯೇಕವಾಗಿದ್ದ ಷಣ್ಮುಗಂ, 6 ವರ್ಷ ಗಳಿಂದ ಬೆಂಗಳೂರಿನಲ್ಲಿ ನೆಲೆಸಿ ಅಲ್ಲಿಯೇ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ 20 ದಿನಗಳ ಹಿಂದೆಯಷ್ಟೇ ಮೈಸೂರಿಗೆ ಬಂದಿದ್ದರು. ವಾರದ ಹಿಂದೆ ಷಣ್ಮುಗಂ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮನೆಯಲ್ಲಿ ಕ್ವಾರಂಟೈನ್ ಆಗಿರುವ ಅವರ ಪತ್ನಿ ಸದ್ಯಕ್ಕೆ ಗುಣಮುಖರಾಗಿದ್ದಾರೆ. ಆದರೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಷಣ್ಮುಗಂ, ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಾಲ್ಕು ದಿನ ಸೋಂಕಿ ನೊಂದಿಗೆ ಹೋರಾಟ ನಡೆಸಿ, ಕಡೆಗೂ ಅಸುನೀಗಿದ್ದಾರೆ.

ಮುಚ್ಚಿತು ಮನೆ ಬಾಗಿಲು, ಮೌನವಾದ ಸಂಸಾರ: ಮನೆಗೆ ಆಧಾರಸ್ತಂಭವಾಗಿದ್ದ ಷಣ್ಮುಗಂ, ಇಲ್ಲವಾಗು ತ್ತಿದ್ದಂತೆ ಅವರ ಮನೆಯ ಬಾಗಿಲು ಮುಚ್ಚಿದೆ. ಕೋವಿಡ್ ನಿಂದ ಚೇತರಿಕೆ ಕಂಡಿರುವ ಅವರ ಪತ್ನಿ, ಪತಿಯ ನೆನಪಿನಲ್ಲಿ ಮನೆಯೊಳಗೆ ದಿನಕಳೆಯುತ್ತಿದ್ದರೆ, ಇಬ್ಬರ ಮಕ್ಕಳ ಸ್ಥಿತಿಯಂತು ಅತಂತ್ರವಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರಿಗೆ ಮೈಸೂ ರಿನಲ್ಲಿ ಚಿಕ್ಕದಾಗಿ ಸ್ವಂತ ಮನೆ ಹೊರತು, ಇನ್ನಾವುದೇ ಆಸ್ತಿಯಿಲ್ಲ. ಕುಟುಂಬಕ್ಕೆ ಆಸ್ತಿಯೇ ಆಗಿದ್ದ ಪತಿಯನ್ನು ಕಳೆದುಕೊಂಡ ಪತ್ನಿ, ತಂದೆಯನ್ನು ಕಳೆದುಕೊಂಡ ಮಕ್ಕಳು ನಿತ್ಯ ಕಣ್ಣೀರಿಡುವಂತಾಗಿದೆ.

50 ಸಾವಿರ ರೂ. ಬೇಕಿತ್ತಂತೆ: ಡಿಪ್ಲೊಮಾ ಓದುತ್ತಿರುವ ಮಗಳ ಪರೀಕ್ಷೆ ಶುಲ್ಕ ಕಟ್ಟಲು 50 ಸಾವಿರ ರೂ. ಹಣ ಬೇಕೆಂದು ಹೇಳುತ್ತಿದ್ದರು. ಹಣ ಹೊಂದಿಸಲು ಸ್ನೇಹಿ ತರು, ಪರಿಚಯಿಸ್ಥರ ಬಳಿಯೂ ಕೇಳುತ್ತಿದ್ದರು. ಅಷ್ಟರಲ್ಲಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತು. 4 ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದು, ಇನ್ನೇನು ಗುಣಮುಖ ರಾಗುವಂತೆಯೂ ಕಾಣುತ್ತಿದ್ದರು. ಆದರೆ ಕೊರೊನಾ ಆಟವೇ ಬೇರೆಯಾಗಿತ್ತು ಎಂದು ಕಾಣುತ್ತದೆ ಎಂದು ಷಣ್ಮುಗಂ ಸಂಬಂಧಿ ಮನು ‘ಮೈಸೂರು ಮಿತ್ರ’ನೊಂದಿಗೆ ನಡೆದ ಘಟನೆಗಳನ್ನು ಹಳಿ ಹಳಿಯಾಗಿ ಬಿಚ್ಚಿಟ್ಟರು.

ಗಟ್ಟಿಮುಟ್ಟಾಗಿದ್ದರು: ಷಣ್ಮುಗಂ ಅಷ್ಟೇನೂ ದಪ್ಪವೂ ಇರಲಿಲ್ಲ. ಗಾರೆ ಕೆಲಸ ಮಾಡುತ್ತಿದ್ದರಿಂದ ನೋಡಲು ಗಟ್ಟಿ ಮುಟ್ಟಾಗಿದ್ದರು. ಆರೋಗ್ಯವಂತರಾಗಿ ಕಾಣುತ್ತಿದ್ದರು. ಕೊರೊನಾ ತಗುಲಿದ ಬಳಿಕ ಅವರಿಗೆ ಉಸಿರಾಡುವುದು ಕಷ್ಟವಾಗುತ್ತಿತ್ತು. ಉಸಿರಾಟ ತೊಂದರೆ ಬಿಟ್ಟರೆ ಇನ್ನಿತರೆ ಸಮಸ್ಯೆಗಳು ಇರಲಿಲ್ಲ. ಕಡೆಗೂ ಕೊರೊನಾ ಅವರನ್ನು ಇಲ್ಲದಂತೆ ಮಾಡಿತು ಎಂದು ತಮ್ಮ ಅಳಲು ತೋಡಿಕೊಂಡರು.
ಚಿಕಿತ್ಸೆಗೆ ಪರದಾಟ, ‘ಮೈಸೂರು ಮಿತ್ರ’ನ ಸಹಕಾರ: ಷಣ್ಮುಗಂ ಅವರಿಗೆ ಏ.21 ರಂದು ಕೊರೊನಾ ಸೋಂಕು ತಗುಲಿತ್ತು. ಅದೇ ದಿನ ಆಸ್ಪತ್ರೆಗೆ ದಾಖ ಲಿಸಲು ಖಾಸಗಿ ಆಸ್ಪತ್ರೆ ಸೇರಿದಂತೆ ಹಲವೆಡೆ ವಿಚಾರಿ ಸಿದರೂ ಐಸಿಯು ಬೆಡ್‍ಗಳು ಲಭ್ಯವಿರುವ ಮಾಹಿತಿ ದೊರೆಯಲಿಲ್ಲ. ಬಳಿಕ ‘ಮೈಸೂರು ಮಿತ್ರ’ನಿಗೆ ಕರೆ ಮಾಡಿ ಸಹಕಾರ ಪಡೆದ ಬಳಿಕ ಅಂದು ಸಂಜೆ ಜಿಲ್ಲಾ ಕೋವಿಡ್ ಆಸ್ಪತ್ರೆ ದಾಖಲಿಸಲಾಯಿತು.

ಮೊದಲ ದಿನವೇ ಐಸಿಯು ವ್ಯವಸ್ಥೆ ನೀಡಿದ್ದರೆ ಉಳಿಯ ಬಹುದಿತ್ತೇನೋ. ಆದರೆ ನಮ್ಮ ದುರದೃಷ್ಟ ಅಂದು ಐಸಿಯು ಬೆಡ್‍ಗಳು ಖಾಲಿ ಇರಲಿಲ್ಲ. ವೈದ್ಯರಿಗೆ ಸಾಕಷ್ಟು ಮನವಿ ಮಾಡಿದ ನಂತರ ಏ.22ರಂದು ಐಸಿಯು ಬೆಡ್ ಕಲ್ಪಿಸಿ, ಚಿಕಿತ್ಸೆಯನ್ನು ಆರಂಭಿಸಿದರು. ಬಳಿಕ ಚಿಕಿತ್ಸೆಗೆ ಚೆನ್ನಾಗಿಯೇ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ನಾನು ಕೂಡ ಏ.25ರಂದು ಅವರನ್ನು ದೂರವಾಣಿ ಮೂಲಕ ಮಾತನಾಡಿಸಿದ್ದೆ. ಆದರೆ, ಅಂದು ರಾತ್ರಿ 2 ಗಂಟೆಗೆ ಸುಮಾ ರಿಗೆ ವೈದ್ಯರು ನಮಗೆ ಕರೆ ಮಾಡಿ ಕರೆಸಿಕೊಂಡು, ನಿಮ್ಮ ಸಂಬಂಧಿಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ ಸ್ವಲ್ಪ ಹೊತ್ತಿನಲ್ಲೇ ಷಣ್ಮುಗಂ ನಮ್ಮನ್ನು ಅಗಲಿದರು ಎಂದು ತಾವು ಕಂಡ, ಅನುಭವಿಸಿದ ಸಂಕಷ್ಟವನ್ನು ಹೇಳಿದರು.

Translate »