ನೇರ ಪಾವತಿ, ಗುತ್ತಿಗೆ ರದ್ದು ಭರವಸೆ ಪೌರಕಾರ್ಮಿಕರ ಮುಷ್ಕರ ಅಂತ್ಯ
ಮೈಸೂರು

ನೇರ ಪಾವತಿ, ಗುತ್ತಿಗೆ ರದ್ದು ಭರವಸೆ ಪೌರಕಾರ್ಮಿಕರ ಮುಷ್ಕರ ಅಂತ್ಯ

July 5, 2022

ಮೈಸೂರು,ಜು.4(ಪಿಎಂ)- ಸಮಿತಿ ರಚಿಸಿ ಅದರ ವರದಿ ಅನುಸಾರ ನೇರ ಪಾವತಿ ಪೌರಕಾರ್ಮಿಕರನ್ನು 3 ತಿಂಗ ಳೊಳಗೆ ಖಾಯಂ ಪ್ರಕ್ರಿಯೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ನೇರಪಾವತಿ ಪೌರಕಾರ್ಮಿಕರು ಸೇರಿ ದಂತೆ ಸ್ವಚ್ಛತಾ ಕಾರ್ಮಿಕರು ರಾಜ್ಯಾದ್ಯಂತ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ ಅಂತ್ಯಗೊಂಡಿದೆ.

ವರದಿ ನೀಡಲು ಸದರಿ ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಲು ನಿರ್ಣಯಿಸಿದ್ದು, ಸಮಿತಿ ವರದಿ ನೀಡಿದ ಬಳಿಕ ಅದರ ಅನುಸಾರ ನೇರ ಪಾವತಿ ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ಮತ್ತೆ 3 ತಿಂಗಳಲ್ಲಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ನೇಮಕಾತಿ ನಿಯಮಗಳಲ್ಲಿ ಮಾರ್ಪಾಡು ಹಾಗೂ ಸಚಿವ ಸಂಪುಟ ಸೇರಿದಂತೆ ಉಭಯ ಸದನಗಳ ಅನುಮೋದನೆಯನ್ನು ಮೂರು ತಿಂಗಳಲ್ಲಿ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ಅಂತ್ಯಕ್ಕೆ ಪೌರಕಾರ್ಮಿಕ ಮುಖಂಡರು ತೀರ್ಮಾನ ಮಾಡಿದರು. ಇದರಿಂದ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಆತಂಕ ದೂರವಾಗಿದೆ. ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಆಶ್ರಯದಲ್ಲಿ ಇಡೀ ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ನೇರಪಾವತಿ ಪೌರಕಾರ್ಮಿಕರು, ಒಳಚರಂಡಿ ಸಹಾಯಕರು ಮತ್ತು ಕಸ ಸಾಗಾಣಿಕೆ ವಾಹನ ಚಾಲಕರು ಸೇರಿದಂತೆ ಇನ್ನಿತರ ಸ್ವಚ್ಛತಾ ಕಾರ್ಮಿಕರು ಜು.1ರಂದು ಅನಿಷ್ರ್ಟಾವಧಿ ಮುಷ್ಕರ ಆರಂಭಿಸಿದ್ದರು.

ಅಂತೆಯೇ ಮೈಸೂರು ನಗರ ಪಾಲಿಕೆ ಖಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘ, ಮೈಸೂರು ಮಹಾನಗರ ಪಾಲಿಕೆ ಸ್ವಚ್ಛತೆ ವಾಹನ ಚಾಲಕರ ಸಂಘದ ಜಂಟಿ ಆಶ್ರಯದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಸದರಿ ಸ್ವಚ್ಛತಾ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು ಸವಾಲಾಗಿ ಪರಿಣಮಿಸಿತ್ತು.

ಸಯ್ಯಾಜಿರಾವ್ ರಸ್ತೆಯ ಮೈಸೂರು ಮಹಾನಗರ ಪಾಲಿಕೆ ಮುಖ್ಯದ್ವಾರದ ಎದುರು ಬೆಳಗ್ಗೆಯಿಂದ ಸಂಜೆಯವರೆಗೆ ಮುಷ್ಕರನಿರತ ಸ್ವಚ್ಛತಾ ಕಾರ್ಮಿಕರು ಪ್ರತಿಭಟನೆ ನಡೆಸಿದರೆ, ಖಾಯಂ ಪೌರಕಾರ್ಮಿಕರ ಮೂಲಕ ಹಿಂದೆ ಪ್ರತಿದಿನ ಮಾಡುತ್ತಿದ್ದಂತೆ ಪರಿಪೂರ್ಣವಾಗಿ ಇಡೀ ನಗರದ ಸ್ವಚ್ಛತಾ ಕೆಲಸ ಮಾಡಿಸಲು ಸಾಧ್ಯವಾದ ಪರಿಸ್ಥಿತಿ ಪಾಲಿಕೆಗೆ ಎದುರಾಗಿತ್ತು. ಪಾಲಿಕೆಯ ನೇರಪಾವತಿ ಮತ್ತು ಹೆಚ್ಚುವರಿ ಪೌರಕಾರ್ಮಿಕರು ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿದ್ದ ಹಿನ್ನೆಲೆಯಲ್ಲಿ 530 ಖಾಯಂ ಪೌರಕಾರ್ಮಿಕರ ಮೇಲೆ ಹೆಚ್ಚಿನ ಕೆಲಸ ಹೊರೆ ಬಿದ್ದಿತ್ತು. ದೇವರಾಜ ಮಾರುಕಟ್ಟೆ, ಬೋಟಿ ಬಜಾರ್, ಸಂತೆಪೇಟೆ ಸೇರಿದಂತೆ ನಗರದ ಹೃದಯ ಭಾಗವೂ ಸೇರಿದಂತೆ ಎಲ್ಲಾ 65 ವಾರ್ಡ್‍ಗಳಲ್ಲಿ ರಸ್ತೆಬದಿಯಲ್ಲಿ ಕಸದ ರಾಶಿ ಗುಡ್ಡೆ ಹಿಡಿದು ದುರ್ವಾಸನೆ ಬೀರುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇಂದು ಬೈಕ್‍ಗಳ ಮೂಲಕ ಎಲ್ಲಾ ವಾರ್ಡ್‍ಗಳಿಗೆ ಭೇಟಿ ನೀಡಿದ್ದ ಮುಷ್ಕರನಿರತರ ಮುಖಂಡರು, ನಾಳೆಯಿಂದ (ಮಂಗಳವಾರದಿಂದ) ಕೆಲಸ ಸ್ಥಗಿತಗೊಳಿಸಿ ಬೆಂಬಲ ನೀಡುವಂತೆ ಖಾಯಂ ಪೌರಕಾರ್ಮಿಕರಲ್ಲಿ ಮನವಿ ಮಾಡಿದ್ದರು. ಸೋಮವಾರ ಸಂಜೆ ವೇಳೆಗೆ ಬೇಡಿಕೆ ಈಡೇರಿಸುವ ಸಂಬಂಧ ಸರ್ಕಾರ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಾಳೆಯಿಂದ ಎಂದಿನಂತೆ ಮುಷ್ಕರನಿರತ ಸ್ವಚ್ಛತಾ ಕಾರ್ಮಿಕರು ಕರ್ತವ್ಯಕ್ಕೆ ಮರಳಲಿದ್ದಾರೆ. ಅಂತೆಯೇ ಮುಷ್ಕರದೊಂದಿಗೆ ಪ್ರತಿಭಟನಾನಿರತರಾಗಿದ್ದ ನಗರ ಪಾಲಿಕೆಯ ಸ್ವಚ್ಛತಾ ಕಾರ್ಮಿಕರು ನಾಳೆ ಕೆಲಸ ಆರಂಭಿಸಲು ಸಜ್ಜಾಗಿದ್ದಾರೆ. ಮುಷ್ಕರ ಆರಂಭಿಸಿದ ಜು.1ರಂದೇ ಪೌರಕಾರ್ಮಿಕರ ಮುಖಂಡರೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಪೌರಕಾರ್ಮಿಕರ ಮುಖಂಡರು ಬೇಡಿಕೆಗಳ ಸಂಬಂಧ ಸರ್ಕಾರ ನೀಡಿದ್ದ ಭರವಸೆಯಲ್ಲಿ ಕೆಲ ಮಾರ್ಪಾಡು ಮಾಡುವಂತೆ ಪಟ್ಟು ಹಿಡಿದು ಮುಷ್ಕರ ಮುಂದುವರೆಸಿದ್ದರು.

ಮುಷ್ಕರದ 4ನೇ ದಿನವಾದ ಸೋಮವಾರ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು, ಪೌರಕಾರ್ಮಿಕರ ಮುಖಂಡರೊಂದಿಗೆ ಸಭೆ ನಡೆಸಿದರಲ್ಲದೆ, ಜು.1ರ ಸಭಾ ನಡಾವಳಿಯನ್ನು ಪೌರಕಾರ್ಮಿಕರ ಮುಖಂಡರ ಬೇಡಿಕೆಯಂತೆ ಪರಿಷ್ಕರಿಸಿದ ಹಿನ್ನೆಲೆಯಲ್ಲಿ ಮುಷ್ಕರ ಅಂತ್ಯಗೊಳಿಸಲಾಯಿತು.

Translate »