ಕೊಡಗಲ್ಲಿ ವರುಣನ ಆರ್ಭಟ: ಆರೆಂಜ್ ಅಲರ್ಟ್ ಘೋಷಣೆ
ಕೊಡಗು

ಕೊಡಗಲ್ಲಿ ವರುಣನ ಆರ್ಭಟ: ಆರೆಂಜ್ ಅಲರ್ಟ್ ಘೋಷಣೆ

July 5, 2022

ಮಡಿಕೇರಿ,ಜು.4-ಕೊಡಗು ಜಿಲ್ಲೆಯಾದ್ಯಂತ ಸೋಮ ವಾರ ಮಳೆ ಮತ್ತಷ್ಟು ಬಿರುಸು ಪಡೆದುಕೊಂಡಿದ್ದು, ಮಂಗಳವಾರ ಬೆಳಗ್ಗೆ 8.30ರವರೆಗೆ ಜಿಲ್ಲೆಯಾದ್ಯಂತ `ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ 64.5 ಮಿಮೀನಿಂದ 115.5 ಮಿಮೀ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚು ನೀರು ಹರಿಯುತ್ತಿರುವುದರಿಂದ ಇಲ್ಲಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿಯಲ್ಲಿರುವ ಎನ್‍ಡಿಆರ್‍ಎಫ್ ತಂಡ ಸಂಭಾವ್ಯ ಭೂ ಕುಸಿತ ಘಟಿಸಬಹುದಾದ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಮಂಗಳೂರು ರಸ್ತೆ ಸಮೀಪದ ತಾಳತ್ ಮನೆ ವ್ಯಾಪ್ತಿಗೆ ತೆರಳಿ ಪರಿಶೀಲನೆ ನಡೆಸಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ. ಅನನ್ಯ ವಾಸುದೇವ್, ಎನ್.ಡಿ.ಆರ್.ಎಫ್ ಇನ್ಸ್‍ಪೆಕ್ಟರ್ ರಾಮ್ ಭಜ್, ಸಬ್‍ಇನ್ಸ್‍ಪೆಕ್ಟರ್ ಶಾಂತಿ ಲಾಲ್ ಜಾಟಿಯ ಮತ್ತು ತಂಡ ರಕ್ಷಣಾ ಕಾರ್ಯ ತಂತ್ರಗಳ ಕುರಿತು ಚರ್ಚೆ ನಡೆಸಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಕೆಲವು ಕಡೆ ಪ್ರವಾಹ ಸೃಷ್ಟಿಯಾಗುವ ಆತಂಕ ಕಾಡುತ್ತಿದೆ. ಮೂರ್ನಾಡು ಸಮೀಪದ ಬಲಮುರಿ ಹಾಗೂ ಬೇತ್ರಿ ಸೇತುವೆ ಬಳಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಸಿದ್ದಾಪುರ ಸಮೀಪದ ಕರಡಿಗೋಡು ಮತ್ತು ನೆಲ್ಯಹುದಿಕೇರಿ ಬಳಿ ಪ್ರವಾಹ ಸ್ಥಿತಿ ಎದುರಾಗಿದೆ. ಕಂದಾಯ ಇಲಾಖೆ ನದಿ ತಟದ ನಿವಾಸಿಗಳಿಗೆ ನೋಟೀಸ್ ನೀಡಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಹಾರಂಗಿ ಜಲಾಶಯಕ್ಕೂ ಭಾರೀ ಪ್ರಮಾಣದಲ್ಲಿ ನೀರಿನ ಒಳಹರಿವು ಇರುವ ಪರಿಣಾಮ ನದಿ ಪಾತ್ರಕ್ಕೆ 12,700 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

ಗಾಳಿ ಸಹಿತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚೆಸ್ಕಾಂ ಇಲಾಖೆಗೆ ಭಾರೀ ಹಾನಿಯಾಗುತ್ತಿದೆ. ಜೂನ್ 1ರಿಂದ ಜುಲೈ 4ರವರೆಗೆ ಜಿಲ್ಲೆಯಾದ್ಯಂತ 480 ವಿದ್ಯುತ್ ಕಂಬಗಳು, 10 ಟ್ರಾನ್ಸ್‍ಫಾರ್ಮರ್‍ಗಳು ಹಾನಿಗೊಂಡಿವೆ. ಮಾತ್ರವಲ್ಲದೇ ಮರ ಮುರಿದು ಬಿದ್ದ ಪರಿಣಾಮ 2 ಕಿ.ಮೀ. ವಿದ್ಯುತ್ ತಂತಿಗಳು ತುಂಡಾಗಿವೆ. ಇದರಿಂದಾಗಿ ಚೆಸ್ಕಾಂಗೆ ಒಟ್ಟು 58.50 ಲಕ್ಷ ರೂ.ಗಳ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಮಳೆಯಿಂದಾಗಿ 5 ತಾಲೂಕುಗಳಲ್ಲಿ 9 ಮನೆಗಳಿಗೆ ಭಾಗಷಃ ಹಾನಿಯಾಗಿದೆ. 6 ಲಘು ಭೂ ಕುಸಿತ ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ ಕಂಡಿದ್ದು, ತ್ರಿವೇಣಿ ಸಂಗಮ ಜಲಾವೃತವಾಗಿದೆ. ಭಾಗಮಂಡಲ-ಅಯ್ಯಂಗೇರಿ ರಸ್ತೆ ಮೇಲೆ 3 ಅಡಿ ನೀರು ಹರಿಯುತ್ತಿದ್ದು, 2ನೇ ದಿನವೂ ವಾಹನ ಸಂಚಾರ ಸ್ಥಗಿತವಾಗಿದೆ. ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದ ಆವರಣಕ್ಕೆ ಕಾವೇರಿ ನದಿ ನೀರು ನುಗ್ಗಿದೆ. ಭಾಗಮಂಡಲದಲ್ಲಿರುವ ವಾಜಪೇಯಿ ವಸತಿ ಶಾಲೆಗೆ ವಿದ್ಯುತ್ ಪೂರೈಕೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ 8 ದಿನಗಳ ರಜೆಯನ್ನು ಘೋಷಿಸಲಾಗಿದೆ.

ವಿರಾಜಪೇಟೆ ತಾಲೂಕಿನ ತೋರಾ ಬಳಿ ಭಾರತಿ ಎಂಬುವರ ಮನೆಯ ಮೇಲೆ ಮರ ಮುರಿದು ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮನೆ ಹಾನಿಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿಯ ಚಾಮುಂಡೇಶ್ವರಿ ನಗರದಲ್ಲಿ ಅಲ್ಪ ಪ್ರಮಾಣದ ಭೂ ಕುಸಿತವಾಗಿರುವ ಬಗ್ಗೆ ವರದಿಯಾಗಿದೆ.

ಪೊನ್ನಂಪೇಟೆ ತೂಚಮಕೇರಿಯಲ್ಲಿ ಮರ ಮುರಿದು ಬಿದ್ದು, ಚಲಿಸುತ್ತಿದ್ದ ಜೀಪೊಂದು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಜೀಪು ಚಾಲಕ ಕೊಳ್ಳಿಮಾಡ ಜೀವನ್ ಎಂಬುವರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅಪಾಯವೂ ತಪ್ಪಿದೆ. ಮರ ಮುರಿದು ಬೀಳುವ ಸಂದರ್ಭ ವಿದ್ಯುತ್ ಕಂಬ ಕೂಡ ಮುರಿದು ಬಿದ್ದು, ವಿದ್ಯುತ್ ತಂತಿಗಳು ಜೀಪಿನ ಮೇಲೆ ಬಿದ್ದಿವೆ. ಲೈನ್‍ನಲ್ಲಿ ವಿದ್ಯುತ್ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ಭಾರೀ ಅಪಾಯವೂ ತಪ್ಪಿದಂತಾಗಿದೆ.
ಹಾಕತ್ತೂರು, ಸೋಮವಾರಪೇಟೆ ತಾಲೂಕಿನ ಗೌಡಳ್ಳಿ, ಶನಿವಾರಸಂತೆ ಸಮೀಪದ ಚಂಗಡಳ್ಳಿ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮರಗಳು ಮುರಿದು ಬಿದ್ದಿರುವ ಬಗ್ಗೆ ವರದಿಯಾಗಿದ್ದು, ಅರಣ್ಯ ಇಲಾಖೆ ಮರಗಳನ್ನು ತೆರವುಗೊಳಿಸಿದೆ. ವಿದ್ಯುತ್ ಕಂಬಗಳು, ತಂತಿಗಳಿಗೂ ಹಾನಿಯಾಗಿದ್ದು, ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ.

Translate »