ಕೊಡಗಲ್ಲಿ ಧಾರಾಕಾರ ಮಳೆ: ಕೆಆರ್‍ಎಸ್ ಅಣೆಕಟ್ಟೆಗೆ ಒಳಹರಿವು ಹೆಚ್ಚಳ
ಕೊಡಗು

ಕೊಡಗಲ್ಲಿ ಧಾರಾಕಾರ ಮಳೆ: ಕೆಆರ್‍ಎಸ್ ಅಣೆಕಟ್ಟೆಗೆ ಒಳಹರಿವು ಹೆಚ್ಚಳ

July 5, 2022

ಮೈಸೂರು, ಜು. 4(ಆರ್‍ಕೆ)- ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಕೃಷ್ಣರಾಜ ಸಾಗರ (ಕೆಆರ್‍ಎಸ್) ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಸೋಮವಾರ ಬೆಳಗ್ಗೆ 22,466 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ, ಸಂಜೆ ವೇಳೆಗೆ 24,000 ಕ್ಯೂಸೆಕ್‍ಗೇರಿತ್ತು. ಇಂದು ಕೆಆರ್‍ಎಸ್ ಅಣೆಕಟ್ಟೆಯಲ್ಲಿ 111.12 ಅಡಿ ನೀರು ಸಂಗ್ರಹವಾಗಿದ್ದು, ಒಳಹರಿವಿನ ಪ್ರಮಾಣ ಇನ್ನೂ ಅಧಿಕವಾಗುವ ನಿರೀಕ್ಷೆ ಇರುವುದರಿಂದ ಈ ಬಾರಿ ಅವಧಿಗೂ ಮುನ್ನವೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಕಾವೇರಿ ನೀರಾವರಿ ನಿಗಮ (ಸಿಎನ್‍ಎನ್)ದ ಎಗ್ಸಿಕ್ಯೂಟಿವ್ ಇಂಜಿನಿಯರ್ ರಾಮಮೂರ್ತಿ ತಿಳಿಸಿದ್ದಾರೆ.

ಗರಿಷ್ಠ 124.80 ಅಡಿ ನೀರು ಸಂಗ್ರಹ ಸಾಮಥ್ರ್ಯ (49.452 ಟಿಎಂಸಿ) ವಿರುವ ಅಣೆಕಟ್ಟೆಯಲ್ಲಿ ಸೋಮವಾರ 111.12 ಅಡಿ (32.370 ಟಿಎಂಸಿ) ತಲುಪಿದೆ. ಕಳೆದ ವರ್ಷ ಇದೇ ದಿನ 91.42 ಅಡಿ ಇದ್ದು, ಕೇವಲ 1,161 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಇಂದು 1,210 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಹರಿ ಬಿಡುತ್ತಿದ್ದು, ಕಳೆದ ವರ್ಷ ಇದೇ ದಿನ 1,415 ಕ್ಯೂಸೆಕ್ ಹೊರಹರಿವಿತ್ತು ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದು, ನಾಳೆಯಿಂದ ಒಳಹರಿವಿನ ಪ್ರಮಾಣವು ಜಾಸ್ತಿಯಾದಲ್ಲಿ ಜುಲೈ 3ನೇ ವಾರ ಅಥವಾ ಅಂತ್ಯದ ವೇಳೆಗೆ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 124.80 ಅಡಿ (ಗರಿಷ್ಠ ಮಟ್ಟ) ತಲುಪುವ ಸಾಧ್ಯತೆ ಇದೆ ಎಂದ ಅವರು, ಅವಧಿಗೂ ಮುಂಚೆಯೇ ಮುಖ್ಯಮಂತ್ರಿಗಳು ಕಾವೇರಿಗೆ ಬಾಗಿನ ಸಮರ್ಪಿಸುವರೆಂದು ಹೇಳಲಾಗುತ್ತಿದೆ ಎಂದರು.

ಮಳೆ ಕಾರಣದಿಂದಾಗಿ ಜೂನ್ ಮಾಹೆಯಲ್ಲಿ ಬೃಂದಾವನಕ್ಕೆ ನಿರೀಕ್ಷಿತ ಪ್ರಮಾಣದ ಪ್ರವಾಸಿಗರು ಭೇಟಿ ನೀಡದ ಕಾರಣ ಕೇವಲ 80 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಆದರೆ ಮೇ ಮಾಹೆಯಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ 1.10 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಈಗ ಸಾಮಾನ್ಯ ದಿನಗಳಲ್ಲಿ 2ರಿಂದ 2,500 ಮಂದಿ, ಶನಿವಾರ ಮತ್ತು ಭಾನುವಾರಗಳಂದು 4 ರಿಂದ 5000 ಮಂದಿ ಪ್ರವಾಸಿಗರು ಕೆಆರ್‍ಎಸ್‍ಗೆ ಭೇಟಿ ನೀಡುತ್ತಿದ್ದಾರೆ ಎಂದು ರಾಮಮೂರ್ತಿ ತಿಳಿಸಿದ್ದಾರೆ. ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರ ಬಿಟ್ಟರೆ, ಆ ಸಂದರ್ಭ ಅಣೆಕಟ್ಟೆ ಹಾಗೂ ಬೃಂದಾವನ ಗಾರ್ಡನ್‍ಗೆ ವಿದ್ಯುದ್ದೀಪಾಲಂಕಾರ ಮಾಡಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಪ್ರವಾಸಿಗರ ಸಂಖ್ಯೆಯೂ ಕಡಿಮೆ ಇದ್ದ ಕಾರಣ ವಿಶೇಷ ದೀಪಾಲಂಕಾರ ಮಾಡಿರಲಿಲ್ಲ ಎಂದು ತಿಳಿಸಿದರು.

Translate »