ಮರೆಗುಳಿತನ: ಅರಿವು ಮೂಡಿಸಲು ಜಾಗೃತಿ ಜಾಥಾ
ಮೈಸೂರು

ಮರೆಗುಳಿತನ: ಅರಿವು ಮೂಡಿಸಲು ಜಾಗೃತಿ ಜಾಥಾ

September 22, 2021

ಮೈಸೂರು,ಸೆ.21(ಎಂಟಿವೈ)- ಮರೆಗುಳಿ ದಿನದ ಹಿನ್ನೆಲೆಯಲ್ಲಿ ಮೈಸೂರಲ್ಲಿ ಅಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸ್‍ಆರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಶಾಖೆ ವತಿಯಿಂದ ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡು, ಗಮನ ಸೆಳೆದರು.

ಮೈಸೂರು ಅರಮನೆಯ ಉತ್ತರ ದ್ವಾರದ ಕೋಟೆ ಆಂಜ ನೇಯಸ್ವಾಮಿ ದೇವಾಲಯದ ಬಳಿ ಮಂಗಳವಾರ ಬೆಳಗ್ಗೆ ಅಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸ್‍ಆರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಶಾಖೆ ಏರ್ಪಡಿಸಿದ್ದ ಜಾಥಾವನ್ನು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮರೆಗುಳಿ ಸಮಸ್ಯೆ ಹಲವ ರನ್ನು ಕಾಡುತ್ತಿದೆ. ಮರೆವು ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮರೆಗುಳಿತನದ ಬಗ್ಗೆ ಜಾಗೃತಿ ಮೂಡಿ ಸುತ್ತಿರುವುದು ಶ್ಲಾಘನೀಯ. ಮರೆವಿನ ರೋಗ ವೃದ್ಧರಲ್ಲದೇ ಯುವಕರನ್ನೂ ಕಾಡುತ್ತಿದೆ. ದೇಶದ ಶೇ.5 ಜನರಲ್ಲಿ ರೋಗ ಕಂಡುಬಂದಿದೆ. ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೂಕ್ತ ತಪಾಸಣೆ ಹಾಗೂ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಅಪಾಯ ಎಂದು ಎಚ್ಚರಿಸಿದರು.

ದೈಹಿಕ, ಮಾನಸಿಕ ವ್ಯಾಯಾಮದಿಂದ ಮರೆವಿನ ರೋಗವನ್ನು ತಡೆಯಬಹುದಾಗಿದೆ. ಆರೋಗ್ಯಕರ ಆಹಾರ ಸೇವನೆ, ಮಿದುಳನ್ನು ಆರೋಗ್ಯಕರವಾಗಿಸಲು ಫ್ಯಾಟಿ ಆಸಿಡ್ ಇರುವ ಆಹಾರ ಸೇವನೆ ಅವಶ್ಯ ಎಂದು ಅರಿವು ಮೂಡಿಸಲಾಯಿತು. ಮೆಮೊರಿ ವಾಕ್ ಹೆಸರಿನಲ್ಲಿ ಆಯೋಜಿಸಿದ್ದ ಜಾಥಾದಲ್ಲಿ ವೈದ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭವಾದ ಜಾಥಾ ದೇವರಾಜ ಅರಸ್ ರಸ್ತೆ ಮೂಲಕ ಡಿಸಿ ಕಚೇರಿವರೆಗೆ ನಡೆಯಿತು. ಜಾಥಾದಲ್ಲಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಪಿ.ನಂಜರಾಜ್, ಶಾರದಾ ವಿಲಾಸ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಬಿ.ಎಂ.ಸುಬ್ರಾಯ, ಕಾರ್ಯದರ್ಶಿ ಎನ್.ಚಂದ್ರಶೇಖರ್, ಜಿಎಸ್‍ಎಸ್ ಫೌಂಡೇಷನ್ ಶ್ರೀಹರಿ, ಅಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸ್ ಆರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಶಾಖೆ ಅಧ್ಯಕ್ಷಡಾ.ಹನುಮಂತಾಚಾರ್ ಜೋಶಿ ಇನ್ನಿತರರು ಪಾಲ್ಗೊಂಡಿದ್ದರು.

Translate »