ಕೊಡಗಿನಲ್ಲಿ ಶಿಸ್ತುಬದ್ಧವಾಗಿ ಮದ್ಯ ಖರೀದಿ
ಕೊಡಗು

ಕೊಡಗಿನಲ್ಲಿ ಶಿಸ್ತುಬದ್ಧವಾಗಿ ಮದ್ಯ ಖರೀದಿ

May 5, 2020

ಮಡಿಕೇರಿ, ಮೇ 4- ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಯಿತು. ಮದ್ಯ ಪ್ರಿಯರು ನಿಗದಿತ ಸಮಯಕ್ಕೆ ಮುಂಚಿತವಾಗಿ ಮದ್ಯದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು. ಬೆಳಿಗ್ಗೆ 9 ಗಂಟೆ ವೇಳೆಗೆ ಮದ್ಯದ ಅಂಗಡಿಗಳು ತೆರೆಯುತ್ತಿ ದ್ದಂತೆ ತಮಗೆ ಇಷ್ಟ ಬಂದ ಬ್ರಾಂಡ್‍ಗಳ ಮದ್ಯಗಳನ್ನು ಗ್ರಾಹಕರು ಖರೀದಿಸಿದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಕೊಡಗು ಜಿಲ್ಲೆಯಲ್ಲಿ ಎಲ್ಲಾ ಮದ್ಯದ ಅಂಗಡಿಗಳ ಮುಂದೆ ಶಿಸ್ತು ಬದ್ಧವಾಗಿ ನಿಂತು ಮದ್ಯ ಖರೀದಿಸಿದ್ದು, ಕಂಡು ಬಂತು. ಇನ್ನು ಬಹುತೇಕ ಎಲ್ಲಾ ಮದ್ಯದ ಅಂಗಡಿಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಕೂಡ ಇಟ್ಟಿದ್ದು ವಿಶೇಷವಾಗಿತ್ತು. ಮಧ್ಯಾಹ್ನದ ಬಳಿಕ ಮದ್ಯದ ಅಂಗಡಿಗಳ ಮುಂದೆ ಜನರಿಲ್ಲದೇ ಮಳಿಗೆಗಳು ಬಿಕೋ ಎನ್ನುತ್ತಿ ದ್ದವಲ್ಲದೇ, ಜಿಲ್ಲೆಯ ಎಲ್ಲಿಯೂ ಕೂಡ ಜನದಟ್ಟಣೆ ಕಂಡು ಬರಲಿಲ್ಲ.

ಪೊಲೀಸ್, ಅಬಕಾರಿ ಇಲಾಖಾ ಸಿಬ್ಬಂದಿ ಗಳು ಕೂಡ ಸ್ಥಳದಲ್ಲಿ ಹಾಜರಿದ್ದು, ಜನರು ಗುಂಪು ಸೇರದಂತೆ ಮತ್ತು ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿದ್ದರು. ಬಹುತೇಕ ಮದ್ಯ ಮಳಿಗೆಗಳಲ್ಲಿ ಮಧ್ಯಾಹ್ನದ ವೇಳೆಗೆ ವಿವಿಧ ಮಧ್ಯಮ ದರದ ಬ್ರಾಂಡ್ ಮದ್ಯಗಳು ಖಾಲಿಯಾದವು. ತದನಂತರ ಜನರು ಕೂಡ ವಿಧಿ ಇಲ್ಲದೇ, ಬೇರೆ ಬ್ರಾಂಡ್ ಗಳ ಮದ್ಯಗಳನ್ನು ಖರೀದಿಸುತ್ತಿದ್ದರು.

ಇನ್ನು ಸಿದ್ದಾಪುರ ಸಮೀಪದ ನೆಲ್ಯ ಹುದಿಕೇರಿಯಲ್ಲಿ ಯುವತಿಯೊಬ್ಬಳು ಮದ್ಯದ ಅಮಲಿನಲ್ಲಿ ನಡು ರಸ್ತೆಯಲ್ಲೇ ರಂಪಾಟ ನಡೆಸಿದ ಘಟನೆಯೂ ನಡೆದಿದೆ. ಜೊತೆ ಯಲ್ಲಿದ್ದ ಯುವಕನೊಬ್ಬ ಆಕೆಯನ್ನು ಸಮಾಧಾನಪಡಿಸಿದರೂ ಕೂಡ ಮಾತು ಕೇಳದ ಆ ಯುವತಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ಎಸೆಯು ತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಇನ್ನು ಕೊಡಗು ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಮೊದಲ ದಿನ ಅಬಕಾರಿ ಇಲಾಖೆಗೆ ಉತ್ತಮ ಆದಾ ಯವೂ ಹರಿದು ಬಂದಿದೆ ಎನ್ನಲಾಗುತ್ತಿದೆ.

ಸೋಮವಾರಪೇಟೆ ವರದಿ: ಲಾಕ್ ಡೌನ್ ಹಿನ್ನೆಲೆಯಲ್ಲಿ 45 ದಿನಗಳಿಂದ ಮದ್ಯದಂಗಡಿ ಬಂದ್ ಆಗಿದ್ದು, ಸೋಮ ವಾರ ಅನುಮತಿ ನೀಡಿದ್ದ ತಕ್ಷಣವೇ ಮಳಿಗೆ ಎದುರು ಜನಜಂಗುಳಿ ಕಂಡುಬಂತು.

ಸಂತೆ ದಿನವಾದ ಸೋಮವಾರ ಪಟ್ಟಣಕ್ಕೆ ಗ್ರಾಮೀಣ ಭಾಗದಿಂದಲೂ ಹೆಚ್ಚಿನ ಜನರು ಬಂದಿದ್ದರು. ಬೆಳಿಗ್ಗೆ 8.30 ರ ವೇಳೆಗೆ ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಎಂಎಸ್‍ಐಎಲ್ ಸೇರಿದಂತೆ 22 ಮದ್ಯ ದಂಗಡಿಗಳ ಎದುರು ಅರ್ಧ ಕಿ.ಮಿ.ನಷ್ಟು ಸರತಿ ಸಾಲಿನಲ್ಲಿ ಮದ್ಯಪ್ರಿಯರು ಸಾಮಾ ಜಿಕ ಅಂತರ ಪಾಲಿಸಿ, ಶಿಸ್ತುಬದ್ಧವಾಗಿ ಮದ್ಯ ಖರೀದಿಸಿದರು. ಆದರೆ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಕೆಲವರು ಅಸಮಾ ಧಾನ ವ್ಯಕ್ತಪಡಿಸಿದರು. ಪ್ರತಿ ಮದ್ಯದಂಗಡಿ ಎದುರು ಜನಸಂದಣಿ ಹೆಚ್ಚು ಇದ್ದುದ್ದ ರಿಂದ ಕೆಲವೊಮ್ಮೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ಗೊಂಡಿತು. ಆದರೂ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದ ಹಿನ್ನೆಲೆ ಯಾವುದೇ ಅನಾಹುತ ಸಂಭವಿಸಲಿಲ್ಲ.

Translate »