ಮದ್ದೂರಲ್ಲಿಂಖಿಒ ತುಂಡರಿಸಿ  20.62 ಲಕ್ಷ ದೋಚಿದ್ದ ಖದೀಮ  ಉತ್ತರ ಪ್ರದೇಶದಲ್ಲಿ ಬಂಧನ
ಮಂಡ್ಯ

ಮದ್ದೂರಲ್ಲಿಂಖಿಒ ತುಂಡರಿಸಿ 20.62 ಲಕ್ಷ ದೋಚಿದ್ದ ಖದೀಮ ಉತ್ತರ ಪ್ರದೇಶದಲ್ಲಿ ಬಂಧನ

June 11, 2022

ಮದ್ದೂರು, ಜೂ.10- ಗ್ಯಾಸ್ ಕಟ್ಟರ್ ನಿಂದ ಎಟಿಎಂ ಯಂತ್ರ ಕತ್ತರಿಸಿ 20.62 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಓರ್ವ ಡಕಾಯಿತನನ್ನು ಬಂಧಿಸುವಲ್ಲಿ ಮದ್ದೂರು ಠಾಣೆ ಪೊಲೀಸ ರು ಯಶಸ್ವಿಯಾಗಿದ್ದಾರೆ.

ಉತ್ತರಪ್ರದೇಶದ ಗಾಜಿಯಾ ಬಾದ್‍ನ ದೀಪಕ್ ತೋಮರ್ ಅಲಿ ಯಾಸ್ ಕುಲ್ಲು(29) ಬಂಧಿತನಾಗಿದ್ದು, ಇನ್ನುಳಿದ ಗಾಜಿಯಾಬಾದ್‍ನ ರವೀಂದ್ರ ಯಾದವ್ ಅಲಿಯಾಸ್ ಮಂಗಲ್, ಹರಿ ಯಾಣದ ಮೇವಾತ್‍ನ ಸಲೀಂ ಅಲಿಯಾಸ್ ಚೀಪಾ, ಫೌಜಿ ಮತ್ತು ರಾಜ ಎಂಬುವವರಿಗಾಗಿ ಹುಡುಕಾಟ ನಡೆದಿದೆ.

ವಿವರ: ಮದ್ದೂರು ಕೆಎಸ್‍ಆರ್‍ಟಿಸಿ ಡಿಪೋ ರಸ್ತೆಯಲ್ಲಿರುವ ಎಸ್‍ಬಿಐ ಎಟಿಎಂ ಯಂತ್ರವನ್ನು ಕಳೆದ ಏ.11 ರಂದು ರಾತ್ರಿ ಗ್ಯಾಸ್ ಕಟ್ಟರ್‍ನಿಂದ ಕತ್ತರಿಸಿ 20,62,800 ರೂ.ಗಳನ್ನು ದರೋಡೆ ಮಾಡಲಾಗಿತ್ತು. ಸ್ವಿಫ್ಟ್ ಕಾರಿನಲ್ಲಿ ಬಂದ ಐವರು ದುಷ್ಕರ್ಮಿ ಗಳು ಎಟಿಎಂ ಮುಂದೆ ಇಳಿದಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ನಂತರ ದುಷ್ಕರ್ಮಿಗಳು ಸಿಸಿ ಕ್ಯಾಮರಾಗಳಿಗೆ ಕಲರ್ ಸ್ಪ್ರೇ ಮಾಡಿದ್ದರಿಂದ ದೃಶ್ಯಗಳು ದಾಖಲಾಗಿರಲಿಲ್ಲ.

ಸಿಸಿ ಕ್ಯಾಮರಾದಲ್ಲಿ ಕಾರು ಸೆರೆ ಯಾಗಿದ್ದರೂ ಕೂಡ ಅದರ ಸಂಖ್ಯೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಕಾರಿನ ಇಂಡಿಕೇಟರ್‍ಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದು ಸ್ವಿಫ್ಟ್ ಕಾರು ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದರು. ಮದ್ದೂರಿನ ಕೊಲ್ಲಿ ಸರ್ಕಲ್‍ನ ಎಸ್‍ಬಿಐ ಎಟಿಎಂ ಅನ್ನು ಇದೇ ರೀತಿ ಕತ್ತರಿಸಿ 2021ರ ಮೇ 22 ರಂದು ದರೋಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಎಸ್ಪಿ ಯತೀಶ್ ಅವರು, ಈ ಪ್ರಕರಣದ ಪತ್ತೆಗಾಗಿ ಮದ್ದೂರು ಠಾಣೆ ಇನ್ಸ್‍ಪೆಕ್ಟರ್ ಕೆ.ಎನ್. ಹರೀಶ್ ನೇತೃತ್ವದಲ್ಲಿ ಮೂವರು ಸಬ್ ಇನ್ಸ್‍ಪೆಕ್ಟರ್‍ಗಳು ಒಳಗೊಂಡಂತೆ 8 ಮಂದಿಯ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡಕ್ಕೆ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ರವಿಕಿರಣ್ ಮತ್ತು ಲೋಕೇಶ್ ಅವರನ್ನು ಕೂಡ ಸೇರ್ಪಡೆಗೊಳಿಸಲಾಗಿತ್ತು. ಕಾರಿನ ಬಣ್ಣ ಮತ್ತು ಇಂಡಿಕೇಟರ್ ಹೊರತುಪಡಿಸಿ ಬೇರೆ ಯಾವುದೇ ಸುಳಿವು ಇಲ್ಲದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್‍ಪೆಕ್ಟರ್ ಹರೀಶ್ ನೇತೃತ್ವದ ತಂಡ ಕಾರು ಮೈಸೂರು ಕಡೆ ಚಲಿಸಿದೆ ಎಂಬ ಸುಳಿವನ್ನಾಧರಿಸಿ ಮದ್ದೂರಿನಿಂದ ಮೈಸೂರಿನವರೆಗೆ ಸುಮಾರು 150 ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದರೂ ಕೂಡ ಯಾವುದೇ ಸುಳಿವು ಲಭ್ಯವಾಗಿಲ್ಲ. ತನಿಖೆ ಆರಂಭಿಸಿ 15 ದಿನದ ನಂತರ ಸದರಿ ಕಾರು ಮದ್ದೂರಿನ ಎಳನೀರು ಮಾರುಕಟ್ಟೆ ಹಿಂಭಾಗ ಚಲಿಸಿದೆ ಎಂಬ ಸುಳಿವು ದೊರೆತಾಗ ವಿಶೇಷ ತಂಡವು ಆ ಭಾಗದಲ್ಲಿ ವಿಚಾರಣೆ ಆರಂಭಿಸಿತು. ಅಲ್ಲಿನ 1 ಮನೆಯನ್ನು ಬಾಡಿಗೆಗೆ ಪಡೆದಿದ್ದ ಐವರ ತಂಡ ಏ.12ರಂದು ಮುಂಜಾನೆ ಮನೆ ಖಾಲಿ ಮಾಡಿತ್ತು. ಈ ತಂಡ ಎಳನೀರು ವ್ಯಾಪಾರ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಮನೆ ಬಾಡಿಗೆಗೆ ಪಡೆದು ಕೇವಲ 10 ದಿನ ಮಾತ್ರ ವಾಸವಿತ್ತು ಎಂಬ ಮಾಹಿತಿ ಲಭಿಸಿದಾಗ ಈ ತಂಡದ ಬಗ್ಗೆ ಮತ್ತಷ್ಟು ವಿವರಗಳನ್ನು ಪೊಲೀಸರ ವಿಶೇಷ ತಂಡ ಕಲೆ ಹಾಕಿದಾಗ ಅವರಿಗೆ 1 ಮೊಬೈಲ್ ನಂಬರ್ ಮಾತ್ರ ದೊರೆಯಿತು.

ಕೇವಲ ಮೊಬೈಲ್ ನಂಬರ್ ವಿಳಾಸ ಹಾಗೂ ಅದರ ಟವರ್ ಲೋಕೇಶನ್ ಜಾಡು ಹಿಡಿದು ಪೊಲೀಸರ ತಂಡ ದೆಹಲಿ, ಉತ್ತರ ಪ್ರದೇಶ, ಉತ್ತರ ಖಂಡ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿತು. ಕೊನೆಗೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ಟವರ್ ಲೋಕೇಶನ್ ಲಭ್ಯವಾದಾಗ 10 ದಿನಗಳ ಕಾಲ ಆ ವ್ಯಾಪ್ತಿಯಲ್ಲೇ ಬೀಡು ಬಿಟ್ಟಿದ್ದ ಇನ್ಸ್‍ಪೆಕ್ಟರ್ ಹರೀಶ್ ನೇತೃತ್ವದ ತಂಡ ಕೊನೆಗೂ ಮೇ 29ರಂದು ಡಕಾಯಿತರಲ್ಲೊಬ್ಬನಾದ ದೀಪಕ್ ತೋಮರ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆದ ಮದ್ದೂರು ನ್ಯಾಯಾಲಯದಲ್ಲೂ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ 3 ದಿನಗಳ ಕಾಲ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತನಿಂದ ಇತರೆ ಆರೋಪಿಗಳ ಬಗ್ಗೆ ವಿವರಗಳನ್ನು ಪಡೆದಿದ್ದಾರೆ. ದರೋಡೆ ಮಾಡಿದ ಹಣ ಉಳಿದ ಆರೋಪಿಗಳ ಬಳಿ ಇರುವುದಾಗಿ ಸೆರೆ ಸಿಕ್ಕಿರುವ ದೀಪಕ್ ತೋಮರ್ ತಿಳಿಸಿದ್ದಾನೆ.

ಈ ಕಾರ್ಯಾಚರಣೆಯಲ್ಲಿ ಮದ್ದೂರು ಠಾಣೆ ಇನ್ಸ್‍ಪೆಕ್ಟರ್ ಹರೀಶ್ ನೇತೃತ್ವದಲ್ಲಿ ಮದ್ದೂರು ಸಂಚಾರ ಠಾಣೆ ಎಸ್‍ಐ ಐಯ್ಯನಗೌಡ, ಕಾನೂನು ಸುವ್ಯವಸ್ಥೆ ಎಸ್‍ಐ ಆರ್.ಬಿ.ಉಮೇಶ್, ಅಪರಾಧ ವಿಭಾಗದ ಎಸ್‍ಐ ಪಿ.ರವಿ. ಬೆಸಗರಹಳ್ಳಿ ಠಾಣೆ ಎಸ್‍ಐ ಮಹೇಶ್, ಸಿಬ್ಬಂದಿಗಳಾದ ಮಹೇಶ್, ರಿಯಾಜ್ ಪಾಷ, ಗುರು ಪ್ರಸಾದ್, ಪ್ರಶಾಂತ್, ಓಂಕಾರಪ್ಪ, ಶರತ್, ಗಿರೀಶ್, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ರವಿಕಿರಣ್ ಮತ್ತು ಲೋಕೇಶ್ ಭಾಗವಹಿಸಿದ್ದರು. ಈ ತಂಡದ ಸಾಹಸ ಕಾರ್ಯವನ್ನು ಜಿಲ್ಲಾ ಎಸ್ಪಿ ಎನ್.ಯತೀಶ್ ಶ್ಲಾಘಿಸಿದ್ದಾರೆ.

 

Translate »