ಮೈಸೂರಲ್ಲಿ ವಿದ್ಯುತ್ ಕಂಬಗಳಲ್ಲಿ  ಭಾರೀ ಪ್ರಮಾಣದಲ್ಲಿ ಜೋತು  ಬಿದ್ದಿದ್ದ ಕೇಬಲ್‍ಗಳಿಗೆ ಸರ್ಜರಿ
ಮೈಸೂರು

ಮೈಸೂರಲ್ಲಿ ವಿದ್ಯುತ್ ಕಂಬಗಳಲ್ಲಿ ಭಾರೀ ಪ್ರಮಾಣದಲ್ಲಿ ಜೋತು ಬಿದ್ದಿದ್ದ ಕೇಬಲ್‍ಗಳಿಗೆ ಸರ್ಜರಿ

June 11, 2022

ಮೈಸೂರು, ಜೂ.10- ನಿಯಮಾನುಸಾರ ನಿಗದಿತ ಶುಲ್ಕ ಪಾವತಿಸದೆ ವಿದ್ಯುತ್ ಕಂಬಗಳಲ್ಲಿ ಅಳವಡಿ ಸಿರುವ ಕೇಬಲ್ ವೈರ್‍ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಚೆಸ್ಕಾಂ ಆರಂಭಿಸಿದೆ. ಮೈಸೂರಿನ ಹೃದಯಭಾಗ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಅಕ್ರಮವಾಗಿ ಅಳವಡಿಸಿದ್ದ ಕೇಬಲ್ ವೈರ್‍ಗಳನ್ನು ಶುಕ್ರವಾರ ತುಂಡರಿಸುವ ಮೂಲಕ ಕೆಲ ಇಂಟರ್‍ನೆಟ್ ಹಾಗೂ ಕೇಬಲ್ ನೆಟ್‍ವರ್ಕ್ ದಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ಇತ್ತೀಚೆಗಷ್ಟೇ ಟ್ರಾನ್ಸ್‍ಫಾರ್ಮರ್‍ಗಳ ತ್ವರಿತ ದುರಸ್ತಿ ಹಾಗೂ ನಿರ್ವಹಣಾ ಅಭಿಯಾನದ ಮೂಲಕ ಸೇವೆ ಸುಧಾರಣೆಗೆ ಪ್ರಯತ್ನಿಸಿದ್ದ ಸೆಸ್ಕ್, ಇದೀಗ ಕಂಬಗಳಲ್ಲಿ ಯದ್ವಾತದ್ವಾ ಕೇಬಲ್ ಅಳವಡಿಸಿರುವ ಕೇಬಲ್ ತೆರವು ಗೊಳಿಸುವ ಮೂಲಕ ವಿದ್ಯುತ್ ಪೂರೈಕೆಗೆ ಅಡ್ಡಿಯಾಗ ದಂತೆ, ಅನಾಹುತಗಳು ಸಂಭವಿಸದಂತೆ ನಿಗಾ ವಹಿಸಿದ್ದಾರೆ. ಜೊತೆಗೆ ಪೂರ್ವಾನುಮತಿಯೊಂದಿಗೆ ವ್ಯವಸ್ಥಿತ ಕೇಬಲ್ ಅಳವಡಿಸಲು ಎಚ್ಚರಿಕೆಯನ್ನೂ ನೀಡಿದ್ದಾರೆ. ನಿಯಮಾನುಸಾರ ಶುಲ್ಕ ಪಾವತಿಸಿದರೆ ಸೆಸ್ಕ್ ಆದಾಯ ಕ್ರೋಢೀಕರಣವೂ ಹೆಚ್ಚಾಗಲಿದೆ.

ಸೆಸ್ಕ್ ವ್ಯಾಪ್ತಿಗೆ ಒಳಪಡುವ ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಇನ್ನಿತರೆಡೆ ವಿದ್ಯುತ್ ಕಂಬದಲ್ಲಿ ಅಳವಡಿಸಿದ್ದ ಕೇಬಲ್ ವೈರ್‍ಗಳಿಗೆ ಕತ್ತರಿ ಪ್ರಯೋಗಿಸುವ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ. ಕಾರ್ಯಾಚರಣೆಯ ಮೊದಲ ದಿನವಾದ ಗುರು ವಾರ ಮಂಡ್ಯ ಜಿಲ್ಲೆಯ ಕೆಲವೆಡೆ ಕೇಬಲ್ ವೈರ್ ಗಳಿಗೆ ಕತ್ತರಿಸಿದ್ದ ಸೆಸ್ಕ್ ತಂಡ ಇಂದು ಬೆಳಗ್ಗೆ ಮೈಸೂರಿನ ಹೃದಯಭಾಗದಲ್ಲಿ ಕಾರ್ಯಾಚರಣೆ ಮುಂದು ವರೆಸಿತು. ಮೈಸೂರಿನ ಪ್ರಮುಖ ಡಿ.ದೇವರಾಜ ಅರಸ್ ರಸ್ತೆ, ಶಿವರಾಮ್‍ಪೇಟೆ, ವಿನೋಬಾ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಡಿ.ಸುಬ್ಬಯ್ಯ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿ, ಕಂಬದಿಂದ ಕಂಬಕ್ಕೆ ಅಳವಡಿಸಲಾಗಿದ್ದ ಟಿವಿ ಕೇಬಲ್ ಹಾಗೂ ಇಂಟರ್‍ನೆಟ್ ಕೇಬಲ್ ವೈರ್‍ಗಳನ್ನು ತುಂಡರಿಸಿದರು. ನಗರದಲ್ಲಿ ಸಾವಿರಾರು ವಿದ್ಯುತ್ ಕಂಬಗಳಲ್ಲಿ ಹೀಗೆ ಕೇಬಲ್ ವೈರ್‍ಗಳನ್ನು ಅಳವಡಿಸಲಾಗಿದ್ದು, ಕೆಲವರನ್ನು ಹೊರತುಪಡಿಸಿ ಬಹುತೇಕರು ನಿಗಧಿತ ಶುಲ್ಕ ಪಾವತಿಸದೆ ಅಕ್ರಮವಾಗಿ ಕಂಬಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಇಂತಹ 49 ಕೇಬಲ್ ನೆಟ್‍ವರ್ಕ್‍ದಾರರಿಗೆ ಒಂದು ತಿಂಗಳ ಹಿಂದೆಯೇ ನೋಟಿಸ್ ನೀಡಿ, ನಿಗಧಿತ ಶುಲ್ಕ ಪಾವತಿಗೆ ಗಡುವು ನೀಡಿ, ಎಚ್ಚರಿಕೆ ನೀಡಲಾಗಿತ್ತು.

ಶುಲ್ಕ ಎಷ್ಟು?: ನಗರ ಪ್ರದೇಶದಲ್ಲಿ ಒಂದು ಕಂಬಕ್ಕೆ 150 ರೂ. ಹಾಗೂ ಗ್ರಾಮೀಣ ಪ್ರದೇಶಲ್ಲಿ 100 ರೂ. ದರ ನಿಗಧಿ ಮಾಡಲಾಗಿದ್ದು, ಯಾವುದೇ ಕೇಬಲ್ ವೈರ್‍ಗಳನ್ನು ವಿದ್ಯುತ್ ಕಂಬಕ್ಕೆ ಅಳವಡಿಸುವ ಮುನ್ನ ಸೆಸ್ಕ್‍ಗೆ ಶುಲ್ಕ ಪಾವತಿಸಬೇಕಾಗಿದೆ. ಇದರಿಂದ ಸೆಸ್ಕ್‍ಗೆ(ಮೈಸೂರು ವಿಭಾಗದಲ್ಲಿ) ವಾರ್ಷಿಕ 50 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ಆದರೆ ಇದುವರೆಗೆ ಕೇಬಲ್‍ದಾರರು ನಿಗಧಿತ ಸಮಯದಲ್ಲಿ ಶುಲ್ಕ ಪಾವತಿಸುವುದಕ್ಕೆ ಹಿಂದೇಟು ಹಾಕುತ್ತಿದ್ದರು.

70 ತಂಡ: ಮೈಸೂರು ನಗರದಲ್ಲಿ ಶುಲ್ಕ ಪಾವತಿಸದ ಕೇಬಲ್ ವೈರ್‍ಗಳನ್ನು ತುಂಡರಿ ಸಲು ಮೈಸೂರಿನ ಕೇಂದ್ರ ಹಾಗೂ ಎನ್.ಆರ್.ಮೊಹಲ್ಲಾ ವಿಭಾಗದ ವ್ಯಾಪ್ತಿಗೆ ಬರುವ ಡಿ.ದೇವರಾಜ ಅರಸ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‍ಬಿ ರಸ್ತೆ, ಶಿವರಾಮ ಪೇಟೆ, ವಿನೋಬಾ ರಸ್ತೆ, ಶಿವಾಜಿ ರಸ್ತೆ, ಬನ್ನಿಮಂಟಪ, ಹನುಮಂತನಗರ, ಎನ್.ಆರ್. ಮೊಹಲ್ಲಾ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಲು ಅಧಿಕಾರಿಗಳ ನೇತೃತ್ವದ 70 ತಂಡ ರಚಿಸಲಾಗಿದೆ. ಈಗಾಗಲೇ ಕಾರ್ಯಾಚರಣೆ ಆರಂಭಿಸಿರುವ ತಂಡಗಳು, ಇನ್ನೆರಡು ದಿನದಲ್ಲಿ ಕೇಬಲ್‍ಗಳ ಸರ್ಜರಿ ಪೂರ್ಣಗೊಳಿಸುವ ಸಾಧ್ಯತೆ ಇದೆ.

ಕೇಬಲ್‍ದಾರರಿಗೆ ನಷ್ಟ:ಈ ಕಾರ್ಯಾಚರಣೆಯಿಂದಾಗಿ ಕೇಬಲ್ ನೆಟ್‍ವರ್ಕ್‍ದಾರರಿಗೆ ಭಾರೀ ನಷ್ಟವಾಗುತ್ತಿದೆ. ಮತ್ತೆ ಹೊಸದಾಗಿ ಸಂಪರ್ಕ ನೀಡಬೇಕಾದರೆ ಹೊಸ ವೈರ್ ಅಳವಡಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ವೈರ್‍ಗಳನ್ನು ಮರು ಜೋಡಣೆ ಮಾಡುವು ದಕ್ಕೂ ಆಗದ ರೀತಿ ಕತ್ತರಿಸಿರುವುದರಿಂದ ಹೊಸ ವೈರ್‍ಗೆ ಲಕ್ಷಾಂತರ ರೂ. ಭರಿಸಬೇಕಿದೆ.

ಅವೈಜ್ಞಾನಿಕ ಕಾರ್ಯಾಚರಣೆ:ವಿದ್ಯುತ್ ಕಂಬದಲ್ಲಿದ್ದ ಕೇಬಲ್ ವೈರ್‍ಗಳನ್ನು ತುಂಡರಿಸಿ ಕೆಳಗೆ ಬಿಸಾಡುತ್ತಿದ್ದು, ಇವು ಪಾದಚಾರಿ ಮಾರ್ಗದಲ್ಲಿ ಎಲ್ಲೆಂದರಲ್ಲಿ ಬಿದ್ದಿವೆ. ಇದರಿಂದ ಓಡಾಡುವ ಸಾರ್ವಜನಿಕರು ಎಡವಿ ಬೀಳುವ ಅಪಾಯವಿದೆ. ಅಲ್ಲದೆ ದ್ವಿಚಕ್ರ ವಾಹನಗಳ ಚಕ್ರಗಳಿಗೆ ಸುತ್ತಿಕೊಂಡರೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಹಾಗಾಗಿ ಕಾರ್ಯಾಚರಣೆ ಬೆನ್ನಲ್ಲೇ ವೈರ್‍ಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಕ್ಷೇಪ:ವಿನೋಬಾ ರಸ್ತೆ ಹಾಗೂ ಶಿವರಾಮಪೇಟೆಯಲ್ಲಿ ಕೇಬಲ್ ವೈರ್‍ಗಳ ತುಂಡರಿಸು ವಾಗ ಸ್ಥಳೀಯರು ಹಾಗೂ ಮಳಿಗೆದಾರರು ಆಕ್ಷೇಪ ವ್ಯಕ್ತಪಡಿಸಿದರು. ಇಂಟರ್‍ನೆಟ್ ವೈರ್ ಕಡಿತಗೊಳಿಸಿದರೆ ಕಚೇರಿ ಕೆಲಸ ಸ್ಥಗಿತಗೊಳ್ಳುತ್ತದೆ, ಕಾಲಾವಕಾಶ ನೀಡಿ ಎಂದು ಒತ್ತಾಯಿಸಿದರು. ಕೇಬಲ್ ಅಳವಡಿಸಿರುವವರು ವೈರ್‍ಗಳನ್ನು ತುಂಡಿರಿಸದಂತೆ ಮನವಿ ಮಾಡಿದರು. ಆದರೆ, ಸೆಸ್ಕ್ ಸಿಬ್ಬಂದಿ ಯಾವುದಕ್ಕೂ ಕಿವಿಗೊಡದೆ ಕಾರ್ಯಾಚರಣೆ ಮುಂದುವರೆಸಿ ದರಲ್ಲದೆ, ಕೆಲಸಕ್ಕೆ ಅಡ್ಡಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

 

Translate »