ಮೈಸೂರು, ಜು.18(ಪಿಎಂ)- ಪಾಂಡವ ಪುರದ ಸಹಕಾರ ಕ್ಷೇತ್ರದ ಸಕ್ಕರೆ ಕಾರ್ಖಾನೆ `ಪಿಎಸ್‍ಎಸ್‍ಕೆ’ ಪುನಾರಂಭಕ್ಕೆ ಶಾಸಕ ಮುರುಗೇಶ್ ನಿರಾಣಿ ಒಡೆತನದ ಕಂಪನಿಗೆ ಗುತ್ತಿಗೆ ನೀಡಿರುವುದು ಸೂಕ್ತ ಹಾಗೂ ಕ್ರಮಬದ್ಧವಾಗಿದೆ. ಆದರೆ ಮತ್ತೊಂದು ಸಕ್ಕರೆ ಕಂಪನಿ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿ, ಕಾರ್ಖಾನೆ ಪುನಾರಂಭ ವಿಳಂಬಗೊಳ್ಳುವಂತೆ ಮಾಡುತ್ತಿದೆ ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ, ಕನ್ನಡ ಸಾಹಿತ್ಯ ಕಲಾಕೂಟ ಸಂಘಟನೆಗಳು ಮೈಸೂರಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿವೆ.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, 3 ವರ್ಷಗಳಿಂದ ಸ್ಥಗಿತಗೊಂಡಿದ್ದ ಪಾಂಡವಪುರದ ಸಕ್ಕರೆ ಕಾರ್ಖಾನೆಯನ್ನು ಇತ್ತೀಚೆಗೆ ನಿರಾಣಿ ಶುಗರ್ಸ್ ಲಿ. 40 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದುಕೊಂಡಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ತನ್ನನ್ನು ಅನರ್ಹಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಮತ್ತೊಂದು ಸಕ್ಕರೆ ಕಂಪನಿ ಕೋರ್ಟ್ ಮೆಟ್ಟಿಲೇರಿದೆ. ಮರು ಟೆಂಡರ್ ಕರೆ ಯಲು ಆದೇಶಿಸುವಂತೆ ದಾವೆ ಹೂಡಿದ್ದು, ಜು.20ರಂದು ವಿಚಾ ರಣೆ ನಡೆಯಲಿದೆ. ಕಾರ್ಖಾನೆ ಪುನಾರಂಭ ವಿಳಂಬಗೊಂಡಲ್ಲಿ ಈ ಭಾಗದ ಕಬ್ಬು ಬೆಳೆಗಾರರಿಗೆ ಬಹಳ ತೊಂದರೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ದರು. ಈಗಾಗಲೇ ಪಿಎಸ್‍ಎಸ್‍ಕೆ ಕಾರ್ಖಾನೆಯ ಹಳೆ ಯಂತ್ರೋಪ ಕರಣಗಳನ್ನು ವೇಗವಾಗಿ ದುರಸ್ತಿ ಮಾಡಲು ನಿರಾಣಿ ಶುಗರ್ಸ್ ಲಿ. ಮುಂದಾಗಿದೆ. ಯಾರಾದರೂ ಕಾರ್ಖಾನೆ ಪುನಾರಂಭಕ್ಕೆ ಅಡಚಣೆ ಮಾಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಂಘಟನೆಗಳ ಮುಖಂಡರಾದ ಮೂಗೂರು ನಂಜುಂಡಸ್ವಾಮಿ, ವಿಕ್ರಮ್ ಅಯ್ಯಂಗಾರ್, ಕೇಬಲ್ ಮಹೇಶ್, ಭಾನು ಮೋಹನ್ ಮತ್ತಿತರರು ಗೋಷ್ಠಿಯಲ್ಲಿದ್ದರು.