ಕರ್ತವ್ಯಕ್ಕೆ ಅಡ್ಡಿ: ದೂರು ದಾಖಲು
ಮೈಸೂರು

ಕರ್ತವ್ಯಕ್ಕೆ ಅಡ್ಡಿ: ದೂರು ದಾಖಲು

November 3, 2018

ಬೆಟ್ಟದಪುರ: ಅಪಘಾತ ಸ್ಥಳದಿಂದ ವಾಹನಗಳನ್ನು ತೆರವುಗೊಳಿಸಲು ಬಂದ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಸ್ಥಳೀಯ ವ್ಯಕ್ತಿಗಳು ಅಡ್ಡಿಪಡಿಸಿರುವ ಘಟನೆ ಬೆಟ್ಟದಪುರ ಸಮೀಪದ ಕಿತ್ತೂರಿನಲ್ಲಿ ನಡೆದಿದೆ. ಕಿತ್ತೂರು-ಕಲ್ಯಾಣಿಕೊಪ್ಪಲು ರಸ್ತೆಯಲ್ಲಿ ಬುಧವಾರ ಸಂಜೆ ಟಿಪ್ಪರ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಬೆಟ್ಟದಪುರ ಪೊಲೀಸ್ ಠಾಣೆ ಎಎಸ್‍ಐ ರುದ್ರಪ್ಪಗೌಡ, ಸಿಬ್ಬಂದಿ ಗಣೇಶ್ ಸ್ಥಳಕ್ಕೆ ಬಂದು ವಾಹನಗಳನ್ನು ತೆರವುಗೊಳಿಸಲು ಮುಂದಾದಾಗ, ಕಾರಿನ ದುರಸ್ತಿ ವೆಚ್ಚ ಮತ್ತು ಪರಿಹಾರವನ್ನು ಲಾರಿ ಮಾಲೀಕರು ಸ್ಥಳದಲ್ಲಿಯೇ ನೀಡಬೇಕೆಂದು ಗಾಮಸ್ಥರು ಪಟ್ಟು ಹಿಡಿದರು.

ಪೊಲೀಸರ ಸೂಚನೆಯಂತೆ ಬೆಟ್ಟದಪುರ ಠಾಣೆಗೆ ಟಿಪ್ಪರ್ ಕೊಂಡೊಯ್ಯಲು ಮುಂದಾದ ಚಾಲಕನನ್ನು ಗ್ರಾಮಸ್ಥರು ಮನಬಂದಂತೆ ಥಳಿಸಿದ್ದು, ರಕ್ಷಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೂ ಗಲಾಟೆ ಮಾಡಿದ್ದಾರೆ. ನಂತರ ಎಸ್‍ಐ ಲೋಕೇಶ್ ಸ್ಥಳಕ್ಕೆ ಧಾವಿಸುತ್ತಿದ್ದತೆಯೇ ಗಲಾಟೆ ಮಾಡುತ್ತಿದ್ದ ವ್ಯಕ್ತಿಗಳು ಪರಾರಿಯಾಗಿದ್ದಾರೆ. ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕಾಶ್, ಅಭಿ ಹಾಗೂ ರಂಗಸ್ವಾಮಿ ಮತ್ತಿತರರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Translate »