ಪೌರಕಾರ್ಮಿಕರು, ಕೋವಿಡ್ ವಾರಿಯರ್ಸ್‍ಗೆ ದಿನಸಿ ಕಿಟ್ ವಿತರಣೆ
ಮೈಸೂರು

ಪೌರಕಾರ್ಮಿಕರು, ಕೋವಿಡ್ ವಾರಿಯರ್ಸ್‍ಗೆ ದಿನಸಿ ಕಿಟ್ ವಿತರಣೆ

July 21, 2021

ಮೈಸೂರು,ಜು.20(ಪಿಎಂ)-ಪೌರಕಾರ್ಮಿಕರು ಮತ್ತು ಕೋವಿಡ್ ವಾರಿಯರ್ಸ್‍ಗಳಿಗೆ ದಿನಸಿ ಕಿಟ್‍ಗಳನ್ನು ವಿತರಿಸುವ ಮೂಲಕ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್) ಮಾಜಿ ಅಧ್ಯಕ್ಷರೂ ಆದ ಉದ್ಯಮಿ ಕೆ.ವಿವೇಕಾನಂದ ತಮ್ಮ ಜನ್ಮದಿನವನ್ನು ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಮೈಸೂರಿನ ವಿಜಯನಗರದ ತಮ್ಮ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪೌರಕಾರ್ಮಿ ಕರು ಮತ್ತು ಇತರ ಕೊರೊನಾ ವಾರಿಯರ್ಸ್‍ಗಳಿಗೆ ದಿನಸಿ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸುವ ಮೂಲಕ ಕೆ.ವಿವೇಕಾನಂದ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೈಸೂರು ಮಹಾ ನಗರ ಪಾಲಿಕೆ ಸದಸ್ಯೆ ಪ್ರೇಮಾ ಶಂಕರೇಗೌಡ ಮಾತನಾಡಿ, ಕೋವಿಡ್ ಸಂಕಷ್ಟದಲ್ಲಿ ಉಳ್ಳವರು ಉದಾರವಾಗಿ ದಾನ ಮಾಡಿ ಕೆ.ವಿವೇಕಾನಂದ ಅವರಂತೆ ಮಾದರಿಯಾಗಬೇಕು. ಕೆ.ವಿವೇಕಾನಂದರು ವಿಜೃಂಭಣೆಯಿಂದ ಜನ್ಮದಿನ ಆಚರಿಸಿ ಕೊಂಡು ದುಂದುವೆಚ್ಚ ಮಾಡುವ ಬದಲು ನೊಂದವ ರಿಗೆ ಸಹಾಯ ಹಸ್ತಚಾಚುವ ಮಾದರಿ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ನಗರಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು ಮಾತನಾಡಿ, ಕೋವಿಡ್ ಮತ್ತು ಅದರ ತಡೆಗಾಗಿ ಜಾರಿ ಮಾಡಿದ ಲಾಕ್ ಡೌನ್‍ನಿಂದ ಸಾಕಷ್ಟು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ ಯಾರೇ ಆದರೂ ವಿಜೃಂಭಣೆ ಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ. ಆಚರಣೆಗೆ ವಿನಿಯೋಗಿಸುವ ಹಣವನ್ನು ಸಂಕಷ್ಟದಲ್ಲಿದ್ದ ವರ ನೆರವಿಗೆ ಬಳಸುವುದು ಸಾಮಾಜಿಕ ಜವಾಬ್ದಾರಿ. ಅಂತಹ ಹೊಣೆಗಾರಿಕೆಗೆ ವಿವೇಕಾನಂದರು ಬದ್ಧರಾಗಿದ್ದಾರೆ ಎಂದರು.

ಕೆ.ವಿವೇಕಾನಂದ ಮಾತನಾಡಿ, ನಾನು ಸದಾ ಸಮಾಜ ಸೇವೆಗೆ ಬದ್ಧನಾಗಿದ್ದು, ನೊಂದವರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಹೇಳಿದರು. ನಗರಪಾಲಿಕೆ ಸದಸ್ಯೆ ಲಕ್ಷ್ಮೀ ಶಿವಣ್ಣ, ಜೆಡಿಎಸ್ ಮುಖಂಡರಾದ ಮೋಹನ್, ತಮ್ಮೇಗೌಡ, ವಿಜಯೇಂದ್ರ ಮತ್ತಿತರರು ಹಾಜರಿದ್ದರು.\

Translate »