ಮಾಜಿ ಶಾಸಕ ವಾಸು ಅವರಿಂದ ಬಡವರಿಗೆ ಬೃಹತ್ ಪ್ರಮಾಣದಲ್ಲಿ ದಿನಸಿ ಕಿಟ್ ವಿತರಣೆ
ಮೈಸೂರು

ಮಾಜಿ ಶಾಸಕ ವಾಸು ಅವರಿಂದ ಬಡವರಿಗೆ ಬೃಹತ್ ಪ್ರಮಾಣದಲ್ಲಿ ದಿನಸಿ ಕಿಟ್ ವಿತರಣೆ

May 16, 2020

ಮೈಸೂರು, ಮೇ 15(ಆರ್‍ಕೆ)- ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರು ಹಾಗೂ ವಲಸೆ ಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ಬೃಹತ್ ಪ್ರಮಾಣದಲ್ಲಿ ವಿತರಿಸಲು ಮಾಜಿ ಶಾಸಕ ವಾಸು ಮುಂದಾಗಿದ್ದಾರೆ.

ಮೈಸೂರಿನ ಜಯಲಕ್ಷ್ಮಿಪುರಂನ ತಮ್ಮ ನಿವಾಸ ದಲ್ಲಿ ಕರೆಯಲಾಗಿದ್ದ ಪ್ರತಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ಮೇ 17ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಪಡುವಾರಹಳ್ಳಿಯ ಮಲೈಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಕಿಟ್ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀನಿರ್ಮಲಾನಂದ ಮಹಾಸ್ವಾಮೀಜಿ ಅವರು ಬಡವರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ವಾಸು ತಿಳಿಸಿದರು.

ಯಾವುದೇ ಜಾತಿ, ಪಕ್ಷ ಅಥವಾ ಕ್ಷೇತ್ರವೆಂದು ಬೇಧ-ಭಾವವಿಲ್ಲದೆ ಯಾರು ಬಡ ವರು, ನಿರ್ಗತಿಕರೆಂದು ಕಂಡು ಬರುತ್ತದೋ ಅಂತಹವರಿಗೆ ನಾವು ವೈಯಕ್ತಿಕವಾಗಿ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸುತ್ತೇವೆ. ಇಲ್ಲಿ ಯಾವ ಪಕ್ಷ, ಸಂಸ್ಥೆ ಅಥವಾ ಟ್ರಸ್ಟ್ ಹೆಸರನ್ನು ಬಳಸಿಕೊಳ್ಳುವುದಿಲ್ಲ ಎಂದ ಅವರು, ಅದೇ ಉದ್ದೇಶದಿಂದ ನಾನು ನನ್ನ ಮನೆಯಲ್ಲೇ ಪತ್ರಿಕಾ ಗೋಷ್ಠಿ ಕರೆದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಲಾಕ್‍ಡೌನ್ ನಿರ್ಬಂಧ ಆರಂಭವಾದಾಗಿನಿಂದಲೂ ನಾನು ಮತ್ತು ನನ್ನ ಮಕ್ಕಳು ನೈಜ ಫಲಾನುಭವಿಗಳಿಗೆ ಅವಶ್ಯವಿರುವ ಆಹಾರ ಪದಾರ್ಥಗಳ ಕಿಟ್, ಔಷಧ ಹಾಗೂ ಕೈಲಾದಷ್ಟು ಧನ ಸಹಾಯವನ್ನು ಮಾಡುತ್ತಾ ಬಂದಿದ್ದೇವಾದರೂ, ಪ್ರಚಾರ ಬಯಸಿರಲಿಲ್ಲ. ಇದೀಗ ಬೃಹತ್ ಪ್ರಮಾಣದಲ್ಲಿ ಕಿಟ್ ವಿತರಣೆ ಮಾಡುತ್ತಿರುವ ಕಾರಣ. ಬಡವರು, ನಿರ್ಗತಿಕರಿಗೆ ಮಾಹಿತಿ ದೊರೆಯಲಿ ಎಂಬ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದರು.

ಕೊರೊನಾ ವೈರಸ್ ಎಂಬ ಮಹಾಮಾರಿ ಸೋಂಕು ಹಿಂದೆಂದೂ ಕಂಡರಿಯದ ಆತಂಕವನ್ನು ಜಗತ್ತಿನಾ ದ್ಯಂತ ತಂದೊಡ್ಡಿರುವುದರಿಂದ ತೀವ್ರ ಸಂಕಷ್ಟದಲ್ಲಿರುವ ಟೈಲರ್‍ಗಳು, ಕುಂಬಾರರು, ಅಕ್ಕಸಾಲಿಗ, ಕೂಲಿ ಕಾರ್ಮಿ ಕರ ನೆರವಿಗೆ ಸಿಎಂ ಮತ್ತು ಪಿಎಂ ಕೇರ್ ಅನುದಾನವನ್ನು ಬಳಸಬೇಕು. ಸುತ್ತೂರು ಮಠ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಸೇರಿದಂತೆ ಹಲವು ಮಠ ಮಾನ್ಯ ಈ ಹಿಂದಿನಿಂದಲೂ ಇಂತಹ ಸಂಕಷ್ಠ ಎದುರಾದಾಗ ಜನರಿಗೆ ನೆರವು ನೀಡುತ್ತಾ ಬಂದಿದ್ದು, ಕೋವಿಡ್-19 ಲಾಕ್‍ಡೌನ್ ಪರಿಸ್ಥಿತಿಯಲ್ಲೂ ಸಹಾಯ ಹಸ್ತ ನೀಡುತ್ತಿ ರುವುದು ಶ್ಲಾಘನೀಯ ಎಂದು ವಾಸು ನುಡಿದರು.

Translate »