ಮೈಸೂರು ಸುತ್ತೂರು ಶಾಖಾ ಮಠದಲ್ಲಿ ದಿನಸಿ ಕಿಟ್ ವಿತರಣೆ
ಮೈಸೂರು

ಮೈಸೂರು ಸುತ್ತೂರು ಶಾಖಾ ಮಠದಲ್ಲಿ ದಿನಸಿ ಕಿಟ್ ವಿತರಣೆ

June 7, 2020

ಮೈಸೂರು, ಜೂ.6(ಪಿಎಂ)- ಸುತ್ತೂರು ಮಠ, ಅಮೇರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆಯ ಕಾವೇರಿ ಕನ್ನಡ ಸಂಘ, ಶ್ರೀ ದೇವರಾಜ್ ಮೂಲ್ ಚಂದ್ ನಾಹರ್ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯ ದಲ್ಲಿ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್‍ಗಳನ್ನು ಶನಿವಾರ ವಿತ ರಣೆ ಮಾಡಲಾಯಿತು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದ ಆವರಣದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ಕಲಾವಿದರು, ಅರ್ಚಕರು ಹಾಗೂ ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಲಾಕ್ ಡೌನ್‍ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ ಗಳಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.

600ಕ್ಕೂ ಹೆಚ್ಚು ಕುಟುಂಬಗಳನ್ನು ಗುರುತಿಸಿ ಕಿಟ್ ವಿತರಣೆ ಮಾಡುತ್ತಿದ್ದು, ಸಾಂಕೇತಿಕವಾಗಿ 100ಕ್ಕೂ ಹೆಚ್ಚು ಕುಟುಂಬಗಳಿಗೆ ಕಿಟ್‍ಗಳನ್ನು ವಿತರಿಸುವ ಮೂಲಕ ಚಾಲನೆ ನೀಡಲಾಯಿತು.

ಅಕ್ಕಿ 3 ಕೆಜಿ, ರವೆ 1 ಕೆಜಿ, ಬೇಳೆ 1 ಕೆಜಿ, ಪುಡಿ ಉಪ್ಪು 1 ಕೆಜಿ, ಈರುಳ್ಳಿ 1 ಕೆಜಿ, ಬೆಳ್ಳುಳ್ಳಿ 250 ಗ್ರಾಂ, ಟೀ ಪುಡಿ 100 ಗ್ರಾಂ, ಬೆಲ್ಲ 1 ಕೆಜಿ, ಹರಿಸಿನ ಪುಡಿ 100 ಗ್ರಾಂ, ಸಾಂಬರ್ ಪುಡಿ 250 ಗ್ರಾಂ, ಸಾಸುವೆ 100 ಗ್ರಾಂ, ಕಡಲೆಬೇಳೆ 100 ಗ್ರಾಂ, ಮೆಣಸು 50 ಗ್ರಾಂ, ಜೀರಿಗೆ 100 ಗ್ರಾಂ, ಕಾಬೂಲ್ ಕಾಳು 250 ಗ್ರಾಂ, ಅಡುಗೆ ಎಣ್ಣೆ 1 ಲೀ., ಬಟ್ಟೆ ಸಾಬೂನು 1 ಒಳಗೊಂಡ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೊರೊನಾ ಸೋಂಕು ನಿವಾರಣೆಗೆ ದೇಶದಾದ್ಯಂತ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಲಾಕ್‍ಡೌನ್ ನಿರ್ಬಂಧ ಸಡಿಲಿಕೆ ಆಗುತ್ತಿದ್ದಂತೆ ಸೋಂಕು ಹೆಚ್ಚಾಗುತ್ತಿದ್ದು, ಇದು ಆತಂಕಕಾರಿ ಬೆಳ ವಣಿಗೆ. ಹೀಗಾಗಿ ಜನತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸ ಬೇಕು ಎಂದು ಸಲಹೆ ನೀಡಿದರು.

ಲಾಕ್‍ಡೌನ್ ವಿನಾಯಿತಿ ದುರ್ಬಳಕೆ ಮಾಡಿ ಕೊಳ್ಳದೇ ಸರ್ಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ಕೊರೊನಾ ಸೋಂಕು ತೊಡೆಯಲು ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರಲ್ಲದೆ, ನಾಟಕ, ಸಂಗೀತ ಸೇರಿ ವಿವಿಧ ಕಲಾ ಪ್ರಕಾರದ ಕಲಾವಿದರು, ಅರ್ಚಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಲಾಕ್ ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳನ್ನು ಗುರುತಿಸಿ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಿರಿಯ ಶ್ರೀಗಳಾದ ಜಯ ರಾಜೇಂದ್ರ ಸ್ವಾಮೀಜಿ, ವಯೋಲಿನ್ ವಿದ್ವಾಂಸ ಮೈಸೂರು ಮಂಜುನಾಥ್, ಶ್ರೀದೇವರಾಜ್ ಮೂಲ್‍ಚಂದ್ ನಾಹರ್ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿಗಳಾದ ವಿಕಾಸ್ ನಾಹರ್, ಮುಖೇಶ್ ನಾಹರ್, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ವೈದ್ಯಕೀಯ ಶಿಕ್ಷಣ ವಿಭಾಗದ ಆರ್.ಮಹೇಶ್ ಮತ್ತಿತರರು ಹಾಜರಿದ್ದರು.

Translate »