ಮೂಗೂರಿನಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ
ಮೈಸೂರು ಗ್ರಾಮಾಂತರ

ಮೂಗೂರಿನಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ

May 7, 2020

ತಿ.ನರಸೀಪುರ, ಮೇ 6(ಎಸ್‍ಕೆ)-ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಮೂಗೂರು ಗ್ರಾಮದ ಬಡವರಿಗೆ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗದಿಂದ ನೀಡಲಾದ ತರಕಾರಿ, ದಿನಸಿ ಕಿಟ್‍ಗಳನ್ನು ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ಡಿ.ಬಸವರಾಜು ವಿತರಿಸಿದರು.

ತಾಲೂಕಿನ ಮೂಗೂರು ಗ್ರಾಮದಲ್ಲಿರುವ ಗ್ರಾಪಂ ಮುಂಭಾಗ ಬುಧವಾರ ಬಡವರಿಗೆ ಮಾಜಿ ಸಚಿವ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಬಡವರ ಬಗ್ಗೆ ಅತೀವ ಕಾಳಜಿ ಹಾಗೂ ಅಭಿವೃದ್ಧಿ ಬಗ್ಗೆ ಬದ್ಧತೆ ಇದ್ದುದ್ದರಿಂದ ಅಔಋ ಅಭಿಮಾನಿಗಳ ಬಳಗದಿಂದ ಬಡವರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ ಎಂದು ಹೇಳಿದರು.

ನಲವತ್ತಾರು ದಿನಗಳಿಂದಲೂ ಕೂಲಿ, ದುಡಿಮೆ ಇಲ್ಲದೆ ತೊಂದರೆಗೆ ಸಿಲುಕಿದ ಕಡು ಬಡವರನ್ನು ಮೂಗೂರು ಗ್ರಾಮದಲ್ಲಿನ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಗುರುತಿಸಿದ್ದು, ಇನ್ನೇರಡು ದಿನಗಳ ಕಾಲ ಎಲ್ಲಾ ವಿಧದ ಕಾಳುಗಳು ಸೇರಿದಂತೆ ಆಹಾರ ಪದಾರ್ಥಗಳು ಹಾಗೂ ತರಕಾರಿಗಳನ್ನು ವಿತರಿಸಲಾಗುವುದು. ಔಷಧಗಳ ಅಗತ್ಯವಿರುವವರು ತಮ್ಮ ಗಮನಕ್ಕೆ ತಂದರೆ ಅವರಿಗೆ ಔಷಧಗಳನ್ನು ಕೊಡಿಸಲು ಸಿದ್ಧರಿದ್ದೇವೆ. ಒಟ್ಟಾರೇ ಮಹದೇವಪ್ಪ ಅವರ ಒತ್ತಾಸೆಯನ್ನು ಅಭಿಮಾನಿಗಳು ಅರಿತು ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಎಂ.ಡಿ.ಬಸವರಾಜು ತಿಳಿಸಿದರು.

ತಾಪಂ ಅಧ್ಯಕ್ಷ ಹೆಚ್.ಎನ್.ಉಮೇಶ್ ಮಾತನಾಡಿ, ಲಾಕ್‍ಡೌನ್‍ನಿಂದ ತೊಂದರೆಗೆ ಸಿಲುಕಿರುವ ಜನರಿಗೆ ಸ್ಪಂದಿಸಬೇಕಾದದ್ದು ಜನಪ್ರತಿನಿಧಿಗಳು ಹಾಗೂ ಮುಖಂಡರ ಜವಾಬ್ದಾರಿ. ಮೂಗೂರು ಗ್ರಾಮದಲ್ಲಿನ ಬಡವರನ್ನು ಗುರುತಿಸಿರುವ ಎಂ.ಡಿ.ಬಸವರಾಜು, ಅಗತ್ಯವಿರುವ ಆಹಾರ ಪದಾರ್ಥಗಳನ್ನು ಅಭಿಮಾನಿಗಳ ಬಳಗದಿಂದ ನೀಡುತ್ತಿರುವ ಕಾರ್ಯದಲ್ಲಿ ನಾವು ಭಾಗಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎಂ.ಎಸ್.ಶಿವಮೂರ್ತಿ, ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಬಸವಣ್ಣ, ಕಾರ್ಯದರ್ಶಿ ಎಂ.ನಾಗೇಂದ್ರ, ಪ್ರಧಾನ ಅರ್ಚಕ ಎಂ.ಡಿ.ಸುಂದರಪ್ಪ, ಪಾರು ಪತ್ತೇಗಾರ್ ಎಂ.ಬಿ.ಸಾಗರ್, ಗ್ರಾಪಂ ಉಪಾಧ್ಯಕ್ಷ ಎಂ.ಎಸ್.ಕಿರಣ, ಸದಸ್ಯರಾದ ಎಂ.ಪಿ.ನಿಂಗಪ್ಪ, ಎಂ.ಶಿವಮೂರ್ತಿ, ದಿಲೀಪ್‍ಕುಮಾರ್, ಹೊಸಹಳ್ಳಿ ಮಾದೇಶ, ಮಾಜಿ ಸದಸ್ಯ ಮಹದೇವಸ್ವಾಮಿ, ಮುಖಂಡರಾದ ಪ್ರಧಾನ ಅರ್ಚಕ ಎಂ.ಡಿ.ಸುಂದರಪ್ಪ, ಪ್ರಕಾಶ್, ಸತೀಶ್ ಗೌಡ, ಪುಟ್ಟಮಾದನಾಯಕ, ಸ್ವಾಮಿ, ಎಸ್.ಸಿದ್ದರಾಜು, ಎಂ.ಎನ್.ಚೇತನ್, ಹೊಸಹಳ್ಳಿ ಮಹದೇವ, ಶಮೀರ್ ಅಹಮ್ಮದ್ ಹಾಗೂ ಗ್ರಾಮಸ್ಥರಿದ್ದರು.

Translate »