ನಿವೇಶನ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಘರ್ಷಣೆ
ಮೈಸೂರು ಗ್ರಾಮಾಂತರ

ನಿವೇಶನ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಘರ್ಷಣೆ

May 7, 2020

ನಾಲ್ಕು ದೂರು- ಪ್ರತಿ ದೂರು ದಾಖಲು
ಹುಣಸೂರು, ಮೇ 6-ನಿವೇಶನ ವಿಚಾರವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ಹುಣಸೂರಿನ ಕಲ್ಕುಣಿಕೆಯಿಂದ ವರದಿಯಾಗಿದ್ದು, ಈ ಸಂಬಂಧ ಪಟ್ಟಣ ಪೊಲೀಸರು ನಾಲ್ಕು ದೂರು ಹಾಗೂ ಪ್ರತಿ ದೂರುಗಳನ್ನು ದಾಖಲಿಸಿಕೊಂಡಿದ್ದಾರೆ.

ನಗರಸಭೆಯ ಮಾಜಿ ಸದಸ್ಯ ಶಿವರಾಜು ಕುಟುಂಬದವರ ವಿರುದ್ಧ ವಕೀಲ ಚಂದ್ರಶೇಖರ್ ಮತ್ತು ಅವರ ಕುಟುಂಬದವರೇ ಆದ ರಾಘು ಅಲಿಯಾಸ್ ರಾಘವೇಂದ್ರ ಪ್ರತ್ಯೇಕ ಎರಡು ದೂರುಗಳನ್ನು ಸಲ್ಲಿಸಿದ್ದು, ಇವರಿಬ್ಬರ ವಿರುದ್ಧ ಶಿವರಾಜು ಪ್ರತಿ ದೂರು ಸಲ್ಲಿಸಿದ್ದಾರೆ.

ನಿವೇಶನಕ್ಕೆ ಬೇಲಿ ಹಾಕುವ ವಿಚಾರವಾಗಿ ಸೋಮವಾರ ಮಧ್ಯಾಹ್ನ ಶಿವರಾಜು ಕುಟುಂಬ ಮತ್ತು ರಾಘು ಕುಟುಂಬದ ನಡುವೆ ಹೊಡೆದಾಟ ನಡೆದಿದೆ. ಈ ಪ್ರಕರಣದಲ್ಲಿ ರಾಘು ಮತ್ತವರ ಕುಟುಂಬದ ಕೆಲವರು ಆಸ್ಪತ್ರೆಗೆ ದಾಖಲಾಗಿ ಶಿವರಾಜು ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದರೆ, ರಾಘು ಮತ್ತವರ ಕುಟುಂಬದ ವಿರುದ್ಧ ಶಿವರಾಜು ದೂರು ಸಲ್ಲಿಸಿದರು.

ಅದೇ ದಿನ ರಾತ್ರಿ ವಕೀಲ ಚಂದ್ರಶೇಖರ್ ಮತ್ತಿತರರ ವಿರುದ್ಧ ಶಿವರಾಜು ಹಲ್ಲೆ ನಡೆಸಿದ್ದಾಗಿ ಒಂದು ದೂರು ದಾಖಲಾದರೆ, ವಕೀಲ ಚಂದ್ರ ಶೇಖರ್ ಮತ್ತಿತರರು ಶಿವರಾಜು ಮನೆಗೆ ನುಗ್ಗಿ ಗಲಾಟೆ ಮಾಡಿರುವುದಾಗಿ ಪ್ರತಿ ದೂರು ದಾಖಲಾಗಿದೆ.

ನಾಲ್ಕು ದೂರುಗಳನ್ನು ದಾಖಲಿಸಿಕೊಂಡಿರುವ ಹುಣಸೂರು ಪಟ್ಟಣ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ಪಿ ಸ್ನೇಹಾ, ಡಿವೈಎಸ್‍ಪಿ ಸುಂದರ್‍ರಾಜ್, ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಸಿ.ಪುವಯ್ಯ, ಪಟ್ಟಣ ಠಾಣೆ ಸಬ್‍ಇನ್ಸ್‍ಪೆಕ್ಟರ್ ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು.

Translate »