ಹುಣಸೂರು, ಮಾ.9(ಹೆಚ್‍ಎಸ್‍ಎಂ)- ಹನಗೋಡು ಹೋಬಳಿಯ ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೋಮವಾರ ಭೇಟಿ ನೀಡಿ, ಆದಿವಾಸಿಗಳ ಸಮಸ್ಯೆ ಆಲಿಸಿದರು.
ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರದ ನಿವಾಸಿ ಗಳು ಕಳೆದ 3-4 ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ತಮ್ಮ ಪುರ್ನವಸತಿ ಕೇಂದ್ರದಲ್ಲಿ ರುವ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ ತಮ್ಮ ಪುನರ್ವಸತಿ ಯೋಜನೆಯ ಪ್ಯಾಕೇಜ್‍ನಲ್ಲಿರುವ ಉಳಿತಾಯ ಹಣದಲ್ಲಿ ಪುನರ್ವಸತಿ ಕೇಂದ್ರ, ಜಮೀನಿನ ಸುತ್ತ ತಂತಿಬೇಲಿ ನಿರ್ಮಾಣ ಹಾಗೂ ಕೇಂದ್ರದಲ್ಲಿ ವಾಸವಿರುವ 33 ಮಂದಿ ಆದಿವಾಸಿಗಳಿಗೆ ಪುನ ರ್ವಸತಿ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದರು. ಮನವಿ ಮೇರೆಗೆ ಕೇಂದ್ರಕ್ಕೆ ಇಂದು ತಹಸಿಲ್ದಾರ್ ಬಸವರಾಜ್, ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಮಹೇಶ್‍ಕುಮಾರ್ ಅವರೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆದಿವಾಸಿಗಳೊಂದಿಗೆ ಚರ್ಚೆ ನಡೆಸಿದರು.
ಶೀಘ್ರವೇ ಜಮೀನುಗಳ ಪಕ್ಕಾ-ಪೋಡು: ಹೆಬ್ಬಾಳ ಹಾಗೂ ಶೆಟ್ಟಹಳ್ಳಿ-ಲಕ್ಕಪಟ್ಟಣ ಗಿರಿಜನರ ಪುನ ರ್ವಸತಿ ಕೇಂದ್ರದ ಜಮೀನುಗಳಿಗೆ ಸಾಗುವಳಿ ಪತ್ರ ಮತ್ತು ಆರ್‍ಟಿಸಿ ಮಾತ್ರ ನೀಡಿದ್ದು, ಇನ್ನು ನಮ್ಮ ಜಮೀನು ಗಳು ಪಕ್ಕಾ-ಪೋಡು ಆಗಿಲ್ಲ. ಇದರಿಂದ ಆಜು-ಬಾಜಿನ ಪ್ರಭಾವಿ ವ್ಯಕ್ತಿಗಳು ನಮ್ಮ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ, ಪ್ರಶ್ನಿದರೆ ಬೆದರಿಸುತ್ತಾರೆ. ಎಂದು ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದ ಮಾಜಿ ಆಧ್ಯಕ್ಷ ಹಾಗೂ ಆದಿವಾಸಿ ಮುಖಂಡ ಜೆ.ಟಿ.ರಾಜಪ್ಪರ ಅಲವತ್ತು ಕೊಂಡರು. ಈಗಾಗಲೇ ಕೇಂದ್ರದ ಎಲ್ಲಾ ಜಮೀನು (1-5)ಗಳನ್ನು ಜೂನ್ ಅಂತ್ಯದೊಳಗೆ ಪಕ್ಕಾ ಪೋಡು ಮಾಡಿಕೊಡುವುದಾಗಿ ತಹಸೀಲ್ದಾರ್ ಬಸವರಾಜ್ ಭರವಸೆ ನೀಡಿದರು.
ಅಣಬೆ ಬೇಸಾಯ ಅಡಿಕೆ ತಟ್ಟೆ ತಯಾರಿಸಿ: ಮೈಸೂರು ಮತ್ತು ಕೊಡಗು ಜಿಲ್ಲೆಗಳು ಪ್ರಸಿದ್ಧ ಪ್ರವಾಸಿ ತಾಣಗಳಾಗಿರುವುದರಿಂದ ದೇಶ ವಿದೇಶಗಳಿಂದ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಆಗಾಗಿ 2 ಜಿಲ್ಲೆಗಳಲ್ಲಿ ಅಣಬೆಗೆ ಉತ್ತಮ ಬೇಡಿಕೆ ಇದೆ. ಪುನ ರ್ವಸತಿ ಕೇಂದ್ರದಲ್ಲಿ ಅಣಬೆ ಬೇಸಾಯ ಜೊತೆಗೆ ಅಡಿಕೆ ತಟ್ಟೆ ತಯಾರಿಕೆಗೂ ಮುಂದಾದರೆ ಸಂಬಂಧÀಪಟ್ಟ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
33 ಮಂದಿಗೆ ಪುನರ್ವಸತಿ ಕಲ್ಪಿಸಿ: 2013-14ರಲ್ಲಿ ನಾಗರಹೊಳೆ ಅರಣ್ಯದಿಂದ ಹೆಬ್ಬಾಳ ಗಿರಿಜನ ಪುನ ರ್ವಸತಿ ಕೇಂದ್ರಕ್ಕೆ ಒಟ್ಟು 130 ಕುಟುಂಬ ಸ್ಥಳಾಂತರ ಗೊಂಡಿದ್ದ ವೇಳೆ ತಮ್ಮ ಕುಟುಂಬಗಳಲ್ಲಿರುವ 18 ವರ್ಷ ವಯಸ್ಸಿನ 39 ಮಂದಿಗೆ ಮುಂದಿನ ದಿನಗಳಲ್ಲಿ ಪುನರ್ವಸತಿ ಕೊಡಿಸಲಾಗುವುದೆಂಬ ಭರವಸೆಯೊಂದಿಗೆ ನಾವುಗಳು ಸ್ಥಳಾಂತರಗೊಂಡಿದ್ದೇವು. 2016-17ರಲ್ಲಿ 6 ಮಂದಿಯನ್ನು ಯೋಜನೆಗೆ ಸೇರಿಸಲಾಗಿದೆ. ಇನ್ನುಳಿದ 33 ಮಂದಿಯನ್ನು ಪುರ್ನ ವಸತಿ ಯೋಜನೆಗೆ ಸೇರ್ಪಡೆ ಮಾಡಬೇಕೆಂಬ ಮನವಿಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಎಸಿಎಫ್ ಪ್ರಸನ್ನಕುಮಾರ್, ಪರಿಶಿಷ್ಟ ವರ್ಗಗಳ ತಾಲೂಕು ಅಧಿಕಾರಿ ಚಂದ್ರ ಶೇಖರ್, ವಿಸ್ತಣಾಧಿಕಾರಿ ಶಂಕರ್, ಆರ್‍ಐ ರಾಜ್ ಕುಮಾರ್, ಲಿಪ್ಟ್ ಸಂಸ್ಥೆಯ ಲೋಕೇಶ್, ಪುರ್ನ ವಸತಿ ಕೇಂದ್ರದ ಅಧ್ಯಕ್ಷ ಚಂದ್ರು, ಮಾಜಿ ಅಧ್ಯಕ್ಷ ಜೆ.ಟಿ. ರಾಜಪ್ಪ, ಮುಖಂಡರಾದ ಪುಟ್ಟಸ್ವಾಮಿ, ಗವಿಮಾಧು, ಪಿಡಿಓ ಷಡಕ್ಷರಿ ಸೇರಿದಂತೆ ಇತರರಿದ್ದರು.