ಜನರ ಕೆಲಸ ಮಾಡಿ, ಇಲ್ಲಾಂದ್ರೆ ಸ್ಥಾನ ಬಿಟ್ಟು ಹೋಗಿ…
News

ಜನರ ಕೆಲಸ ಮಾಡಿ, ಇಲ್ಲಾಂದ್ರೆ ಸ್ಥಾನ ಬಿಟ್ಟು ಹೋಗಿ…

October 18, 2022

ಬೆಂಗಳೂರು, ಅ. 17 (ಕೆಎಂಶಿ)- ಜನರ ಕೆಲಸ ಮಾಡಿ, ಇಲ್ಲಾಂದ್ರೆ ನಿಮ್ಮ ಬದಲು ಬೇರೊಬ್ಬರನ್ನು ಕೂರಿಸೋದು ಗೊತ್ತು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗ ಣದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಕಾರ್ಯನಿರ್ವಹಣಾಧಿ ಕಾರಿಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿದ ಮುಖ್ಯಮಂತ್ರಿ ಅವರು, ಭಾರಿ ಮಳೆ, ನೆರೆ, ಪ್ರವಾಹದಿಂದಾದ ಅವಾಂತರ ವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ನೀವು ವಿಫಲರಾ ಗಿದ್ದೀರಿ ಎಂದು ನೇರವಾಗಿ ದೂರಿದರು. ಸಂಕಷ್ಟಕ್ಕೆ ಸಿಲು ಕಿದ ಕುಟುಂಬಗಳಿಗೆ ಸಮರ್ಪಕವಾದ ಪರಿಹಾರ ವಿತರಣೆ ಮಾಡಿಲ್ಲ. ಪರಿಹಾರ ಹಂಚಿಕೆಯಲ್ಲೂ ವಿಳಂಬವಾಗುತ್ತಿದೆ. ಈ ಲೋಪಕ್ಕೆ ನೀವೇ ಹೊಣೆ. ನೀವು ಮಾಡುವ ತಪ್ಪಿಗೆ ನಾವು ಸಾರ್ವಜನಿಕವಾಗಿ ನಿಂದಿಸಿಕೊಳ್ಳಬೇಕಾಗಿದೆ. ನಿಮಗೆ ವಹಿಸಿರುವ ಕೆಲಸವನ್ನು ಮಾಡಲು ಏನಾಗಿದೆ. ನೀವು ಮಾಡಲಾಗದಿದ್ದರೆ, ಬಿಟ್ಟು ಹೋಗಿ, ಆ ಸ್ಥಾನಕ್ಕೆ ಬೇರೆಯವರನ್ನು ತರುತ್ತೇನೆ ಎಂದು ಖಾರವಾಗಿ ತಿಳಿಸಿದರು. ಜಿಲ್ಲಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕುಳಿತು ಕೆಲಸ ಮಾಡಿದರೆ ಆಗೋದಿಲ್ಲ. ತಾಲೂಕು ಕೇಂದ್ರಕ್ಕೆ ಹೋಗಿ ಕೆಲಸ ಮಾಡಿ, ಬಹುತೇಕರು ತಾಲೂಕು ಕೇಂದ್ರದ ಕಡೆ ತಲೆಯೇ ಹಾಕುವುದಿಲ್ಲ.

ಕಳೆದ ಮೂರು ವರ್ಷಗಳಿಂದ ಸತತ ಮಳೆ. ಅದರಲ್ಲೂ ಈ ವರ್ಷ ದೊಡ್ಡ ಪ್ರಮಾಣದ ಹಾನಿಯಾಗಿದೆ. ಈ ಸಮಯದಲ್ಲಿ ಸಾರ್ವಜನಿಕರ ಜೊತೆ ಬೆರೆತು ಕೆಲಸ ಮಾಡಿ, ಅವರ ಕಷ್ಟ ಸುಖಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿ ನಿಮ್ಮದಾಗಿತ್ತು.

ನಿಮಗೆ ನಾವು ಎಲ್ಲಾ ಸೌಕರ್ಯ ಕೊಡುತ್ತೇವೆ. ನೀವು ಮಾತ್ರ ರೈತರು ಮತ್ತು ಜನರಿಗೆ ಅದನ್ನು ವರ್ಗಾಯಿಸಲು ಯಾಕೆ ಮೀನಾಮೇಷ ಎಣಿಸುತ್ತಿದ್ದೀರಿ. ಜಾನುವಾರುಗಳಿಗೆ ಚರ್ಮರೋಗ ಹಬ್ಬುತ್ತಿದೆ. ಇದನ್ನು ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ. ಲಸಿಕೆ ಹಾಕುವುದು, ಪರಿಹಾರ ವಿತರಿಸುವ ಕೆಲಸ ನಡೆದಿಲ್ಲ. ನಿಮ್ಮ ನಿಮ್ಮ ಅಧಿಕಾರ, ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದರು. ನೀವು ಸಮಯೋಚಿತ ತೀರ್ಮಾನಗಳ ಮೂಲಕ ಜನರಿಗೆ ನೆರವಾಗಬೇಕು. ಸಮಯ ಪ್ರಜ್ಞೆ, ಸ್ಥಿತ ಪ್ರಜ್ಞತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಒಬ್ಬ ಐಎಎಸ್ ಅಧಿಕಾರಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಮಹತ್ವಪೂರ್ಣ ಅವಕಾಶ. ಜಿಲ್ಲೆಯಲ್ಲಿ ನೀವು ಯಾವ ರೀತಿ ಹೆಜ್ಜೆ ಗುರುತು ಬಿಡುತ್ತೀರಿ ಎನ್ನುವುದು ಮುಖ್ಯವಾದುದು. ಈಗ ಬಹಳಷ್ಟು ಅಧಿಕಾರಿಗಳು ಜಿಲ್ಲಾಧಿಕಾರಿ ಹುದ್ದೆಯ ಅಧಿಕಾರ ಭಾಗವನ್ನಷ್ಟೇ ನೋಡುತ್ತಾರೆ.
ಆ ಹುದ್ದೆಯ ಜವಾಬ್ದಾರಿ ಮತ್ತು ಆಡಳಿತದ ಪರಿಣಾಮವನ್ನು ಗಮನಕ್ಕೆ ತೆಗೆದು ಕೊಳ್ಳುವುದಿಲ್ಲ. ಆದರೆ ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು. ನೀವು ಆಡಳಿತದ ಭಾಗವಾಗಿದ್ದೀರಿ. ನಿಮಗೆ ಹೆಚ್ಚಿನ ಅಧಿಕಾರವೂ ಇದೆ. ನೀವು ಕೈಗೊಳ್ಳುವ ನಿರ್ಣಯಗಳು ಆಡಳಿತ ನಿರ್ವಹಣೆಯಲ್ಲಿ ಬಹಳ ಮುಖ್ಯ ಎಂದು ತಿಳಿಸಿದರು. ಯಾವುದೇ ಕೆಲಸ ಮಾಡಬಾರದು ಅಂದುಕೊಂಡರೆ, 101 ಕಾರಣ ದೊರೆಯುತ್ತದೆ. ಒಂದು ಒಳ್ಳೆಯ ಕೆಲಸ ಮಾಡಬೇಕೆಂದರೆ ಒಂದೇ ಕಾರಣ ಸಾಕು. ಆದ್ದರಿಂದ ಸಕಾಲಿಕ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಆಡಳಿತ ನೀಡಬೇಕು. ಸಮಸ್ಯೆಗಳಿದ್ದರೆ, ಕೂಡಲೇ ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ ಪಡೆಯಿರಿ ಎಂದು ಸಲಹೆ ನೀಡಿದರು. ಆಯವ್ಯಯ ಅನುಷ್ಠಾನ ಕುರಿತಂತೆ ಸರ್ಕಾರಿ ಆದೇಶಗಳಾಗಿದೆ. ತಳಹಂತದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಂಡು, ವರ್ಷಾಂತ್ಯದಲ್ಲಿ ಗುರಿ ಸಾಧಿಸುವಂತೆ ಸೂಚಿಸಿದರು.

Translate »