ಮೈಸೂರು, ಜೂ.7(ಎಸ್‍ಬಿಡಿ)- ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದಲ್ಲಿರುವ ಗೊಂದಲ ನಿವಾರಣೆ ಉದ್ದೇಶ ದಿಂದ ಆಯೋಜಿಸಿದ್ದ ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮಾನಿಗಳ ನಡೆಯಿಂದ ಮುಜು ಗರಕ್ಕೀಡಾದ ವಸತಿ ಸಚಿವ ವಿ.ಸೋಮಣ್ಣ, ಆಕ್ರೋಶ ದಿಂದ ಶಿಸ್ತಿನ ಪಾಠ ಹೇಳಿದ ಪ್ರಸಂಗ ನಡೆಯಿತು.
ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ವಿ. ರವಿಶಂಕರ್ ಪರವಾಗಿ ಮತಯಾಚನೆ ಜೊತೆಗೆ ವೀರ ಶೈವ ಲಿಂಗಾಯತ ಮುಖಂಡರ ಬಗ್ಗೆ ಸಮುದಾಯದವ ರಲ್ಲಿರುವ ವೈರುಧ್ಯ ನಿವಾರಣೆಗಾಗಿ ಮೈಸೂರಿನ ಸಯ್ಯಾಜಿ ರಾವ್ ರಸ್ತೆ, ಹೈವೇ ವೃತ್ತದ ಬಳಿ ಇರುವ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಸಭೆ ಆಯೋಜಿಸ ಲಾಗಿತ್ತು. ಗಣ್ಯರ ಆಗಮನಕ್ಕೂ ಮುನ್ನವೇ ಬಿಜೆಪಿ ಮುಖಂಡ ಕಾ.ಪು.ಸಿದ್ದಲಿಂಗಸ್ವಾಮಿ, ಸಾಮಾಜಿಕ ಜಾಲ ತಾಣದಲ್ಲಿ ಇಲ್ಲಸಲ್ಲದ ವಿಚಾರಗಳನ್ನು ಹರಿಬಿಟ್ಟು ಸಮು ದಾಯದಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಹಾಗಾಗಿ ಸಚಿವ ವಿ.ಸೋಮಣ್ಣನವರು ಹಾಗೂ ಬಿ.ವೈ.ವಿಜಯೇಂದ್ರ ಇಬ್ಬರೂ ಅಭ್ಯರ್ಥಿ ಎಂ.ವಿ.ರವಿಶಂಕರ್ ಪರ ಮತ ಯಾಚನೆ ಮಾಡಲಿದ್ದಾರೆ. ದಯಮಾಡಿ ಯಾರೂ ವೈಯಕ್ತಿಕ ಘೋಷಣೆ ಕೂಗಬಾರದು, ಸಭೆ ಉತ್ತಮ ಸಂದೇಶ ರವಾನಿಸಲು ಅನುವು ಮಾಡಿಕೊಡಬೇಕೆಂದು ಕಿಕ್ಕಿರಿದಿದ್ದ ಸಭಿಕರಲ್ಲಿ ಮನವಿ ಮಾಡಿದರು.
ಆದರೆ ಬಿ.ವೈ.ವಿಜಯೇಂದ್ರ ಸಭಾಂಗಣಕ್ಕೆ ಆಗಮಿಸು ತ್ತಿದ್ದಂತೆ ಅಭಿಮಾನಿಗಳ ಜೈಕಾರ ಆರಂಭವಾಯಿತು. ವೇದಿಕೆ ಯಲ್ಲಿದ್ದ ಗಣ್ಯರನ್ನು ಸ್ವಾಗತಿಸುವ ವೇಳೆ, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಅವರ ಭಾಷಣ, ಕಾ.ಪು. ಸಿದ್ದಲಿಂಗಸ್ವಾಮಿ ಪ್ರಾಸ್ತಾವಿಕ ನುಡಿ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಅವರ ಹೆಸರೇಳುತ್ತಿ ದ್ದಂತೆ ಜೈಕಾರ, ಶಿಳ್ಳೆ, ಚಪ್ಪಾಳೆ ಜೋರಾಗಿತ್ತು. ಸಭೆಗೆ ಸ್ವಲ್ಪ ತಡವಾಗಿ ಆಗಮಿಸಿದ ಸಚಿವ ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಭಾಷಣದ ಸಂದರ್ಭದಲ್ಲೂ ಹಾಗೆಯೇ ಮುಂದುವರೆದಿತ್ತು.
ಶಿಸ್ತು ಕಲಿತುಕೊಳ್ಳಿ:ಈ ಎಲ್ಲಾ ಬೆಳವಣಿಗೆಯಿಂದ ಇರಿಸು ಮುರಿಸಿನಿಂದಲೇ ಭಾಷಣ ಆರಂಭಿಸಿದ ಸಚಿವ ವಿ.ಸೋಮಣ್ಣ, ದಯವಿಟ್ಟು ಎಲ್ಲಾ ಆರಾಮಾಗಿರಿ, ನಾನು 45 ವರ್ಷದಿಂದ ರಾಜಕೀಯದಲ್ಲಿದ್ದೇನೆ. ದಯಮಾಡಿ ಇದೆಲ್ಲಾ ಬಿಡಿ, ಒಳ್ಳೆಯ ಸಂದೇಶಕ್ಕಾಗಿ ಸಮುದಾಯದ ಪ್ರಮುಖರ ಸಭೆ ಆಯೋಜಿಸಿದ್ದಾರೆ ಎಂದರು. ಈ ವೇಳೆಯೇ ವೇದಿಕೆ ಯಲ್ಲಿದ್ದ ವಿಜಯೇಂದ್ರಗೆ ಅವರ ಅಭಿಮಾನಿಗಳಿಬ್ಬರು ಹೂಗುಚ್ಛ ನೀಡುವುದನ್ನು ಗಮನಿಸಿ, ರೀ ಸ್ವಾಮಿ ಇವೆಲ್ಲಾ ಬಿಡ್ರೀ, ಶಿಸ್ತು ಕಲಿತುಕೊಳ್ಳಿ ಸ್ವಲ್ಪ ಎಂದು ಕಿಡಿಕಾರಿದರು.
ಚಿಕ್ಕವರನ್ನಾಗಿ ಮಾಡಬೇಡಿ: ವಿಜಯೇಂದ್ರ ಮತ್ತು ಸೋಮಣ್ಣ ಬಂದರೆ ಏನೋ ಆಗುತ್ತದೆ ಎಂದಲ್ಲ. ಒಂದು ಕಡೆ ಕಾಂಗ್ರೆಸ್-ಜೆಡಿಎಸ್ ನಾಯಕರ ಹೇಳಿಕೆ, ಮತ್ತೊಂದು ಕಡೆ ಮುಖವನ್ನೇ ಕಾಣದ ಯಾರೋ ಒಬ್ಬನಿಗೆ ಮತ ಹಾಕುತ್ತಾರೆಂಬ ಅಪಪ್ರಚಾರ ದಿಂದ ಗೊಂದಲ ಸೃಷಿಯಾಗಿದೆ. ಗೊಂದಲ ನಿವಾರಣೆಗೆ ಈ ಭಾಗದ ಮುಖಂಡರು ಸಭೆ ಆಯೋಜಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗೆಯೇ ಒಳ್ಳೆಯ ಕೆಲಸ ಮುಂದು ವರೆಸಿ. ರೈಲು ಹತ್ತಿಸುವುದುನ್ನು ಬಿಡಿ, ವಿಜಯೇಂದ್ರನ ಹಣೆ ಬರಹದಲ್ಲಿ ಇದ್ದರೆ ಏನಾಗ ಬೇಕೋ ಅದಾಗುತ್ತಾನೆ ಎಂದು ಹೇಳುತ್ತಿದ್ದಂತೆÉ ಶಿಳ್ಳೆ, ಕೇಕೆ ಹೆಚ್ಚಾಗಿ ಗದ್ದಲ ಉಂಟಾ ಯಿತು. ಇದು ಪಕ್ಷದ ಚುನಾವಣಾ ಪ್ರಚಾರ ಸಭೆ, ತನ್ನದೇ ಆದ ನೀತಿ ನಿಯಮಗಳಿವೆ. ದಯವಿಟ್ಟು ವಿನಂತಿ ಮಾಡುತ್ತೀನಿ ಯಾರನ್ನೂ ಚಿಕ್ಕವರನ್ನಾಗಿ ಮಾಡಬೇಡಿ. ಇದರ ಹಿಂದಿರುವ ವಾಸ್ತವಾಂಶವನ್ನು ಅರ್ಥ ಮಾಡಿಕೊಳ್ಳಬೇಕು. ಏನಾದರೂ ಚರ್ಚೆ ಮಾಡುವುದಾದರೆ ಪ್ರತ್ಯೇಕ ಸಭೆ ಸೇರೋಣ ಎಂದು ಸಿಟ್ಟಿನಿಂದ ನುಡಿದರು.
ಹರಕೆಯ ಕುರಿ ಮಾಡಬೇಡಿ: ನಾನು ಬೆಂಗಳೂರು ಮಹಾನಗರದದಲ್ಲಿ 5 ಬಾರಿ ಶಾಸಕ, 2 ಬಾರಿ ಎಂಎಲ್‍ಸಿ, 6 ಬಾರಿ ಸಚಿವನಾಗಿದ್ದೇನೆ. ಸ್ವತಂತ್ರವಾಗಿಯೂ ಚುನಾವಣೆ ಎದುರಿಸಿ ಗೆದ್ದಿದ್ದೇನೆ ಎಲ್ಲೋ ಒಂದು ಕಡೆ ವಿಜಯೇಂದ್ರ ಅವರನ್ನು ಹರಕೆಯ ಕುರಿ ಮಾಡಬೇಡಿ ಎಂದು ಏರುಧ್ವನಿಯಲ್ಲಿ ಎಚ್ಚರಿಕೆ ನೀಡಿದರು. ಈ ವೇಳೆ ಮೈಕ್ ಬಳಿ ಬಂದ ವಿಜಯೇಂದ್ರ, ಸೋಮಣ್ಣನವರು ಸಮಾಜದ ಹಿರಿಯರು ನನ್ನ ಬಗ್ಗೆ ನಾಲ್ಕು ಒಳ್ಳೆ ಮಾತನ್ನಾಡುತ್ತಿದ್ದಾರೆ ಅನ್ಯತಾ ಭಾವಿಸಬೇಡಿ ಎಂದು ಮನವಿ ಮಾಡಿದರು.
ನಾಯಕತ್ವ ಕೊರತೆ ಇದೆ: ಮಾತು ಮುಂದುವರೆಸಿದ ಸಚಿವ ಸೋಮಣ್ಣ, ನಮ್ಮಲ್ಲೇ ವಿಷ ಬೀಜ ಬಿತ್ತುವ ಹುನ್ನಾರಕ್ಕೆ ಈ ವೇದಿಕೆ ಮೂಲಕ ತೆರೆ ಎಳೆಯಬೇಕು. ಲಕ್ಷಾಂತರ ಜನ ನೋಡುತ್ತಿದ್ದಾರೆ, ಅವಲೋಕನ ಮಾಡುತ್ತಿದ್ದಾರೆ. ಬೇರೆ ಸಮುದಾಯದಲ್ಲಿರುವ ಒಗ್ಗಟ್ಟು ನಮ್ಮಲ್ಲೂ ಬರಬೇಕು. ಈ ಭಾಗದಲ್ಲಿ ಸಮಾಜದ ನಾಯಕತ್ವದ ಕೊರತೆ ಇದೆ. ನಾನು 72ನೇ ವರ್ಷಕ್ಕೆ ಕಾಲಿಡುತ್ತಿದೇನೆ. ನೀವು ಅರ್ಥ ಮಾಡಿಕೊಳ್ಳಬೇಕು. ನಾನು ಸ್ವತಂತ್ರ ವಾಗಿ ಚುನಾವಣೆ ಎದುರಿಸಿ 36 ಸಾವಿರ ಮತಗಳಲ್ಲಿ ಗೆದ್ದಿದ್ದೇನೆ. ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಯಾರು ಯಾವ ರೀತಿ ಬಳಸಿಕೊಂಡರು ಎನ್ನುವುದು ಚೆನ್ನಾಗಿ ಗೊತ್ತಿದೆ. ನಾನು ಬೇರೆ ಪಕ್ಷದಲ್ಲಿದ್ದರೂ ಯಡಿಯೂರಪ್ಪನವರ 65 ವರ್ಷ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದೇನೆ. ವಿಜಯೇಂದ್ರ ಆಗಿನ್ನೂ ಓದುತ್ತಿದ್ದರು. ಅದನ್ನೆಲ್ಲಾ ನಿಮ್ಮೆದುರು ಹೇಳುವ ಅವಶ್ಯಕತೆ ಇಲ್ಲ ಎಂದು ಸಿಡಿಮಿಡಿಗೊಂಡರು.
ವಿಜಯೇಂದ್ರಗೆ ಸಾಟಿ ಅಲ್ಲ: ವಿಜಯೇಂದ್ರ ಅವರಿಗೆ ಕಪ್ಪುಚುಕ್ಕೆ ಆಗಬಾರದು, ದೂರು ಬರಬಾರದು ಎನ್ನುವ ಕಾರಣಕ್ಕೆ ಬಂದಿದ್ದೇನೆ. ನಾಯಕನಾಗಿ ಬೆಳೆಯುವ ಲಕ್ಷಣವಿರುವ ವಿಜಯೇಂದ್ರ ಪರಿಷತ್‍ಗೆ ಹೋದರೆ ನಿಮಗೇನು ಹೊಟ್ಟೆಕಿಚ್ಚು ಎಂದು ಮೊದಲು ಪ್ರಶ್ನಿಸಿದ್ದು ನಾನು. ಒಬ್ಬರ ಬಗ್ಗೆ ಮಾತನಾಡುವಾಗ ಇನ್ನೊಬ್ಬರ ದುಡಿಮೆಯನ್ನು ಕಡೆಗಾಣಿಸಬೇಡಿ. ನಾನು ವಿಜಯೇಂದ್ರನಿಗೆ ಸಾಟಿ ಅಲ್ಲ. ಅವನಿಗೆ 40 ವರ್ಷ, ನನಗೆ 71 ವರ್ಷ. ಪಕ್ಷದಲ್ಲಿ ಜವಾಬ್ದಾರಿ ನಿರ್ವಹಿಸಲು ಇನ್ನು 4 ವರ್ಷ ಮಾತ್ರ ಅವಕಾಶವಿದೆ. ಬಿಜೆಪಿಯಲ್ಲಿ ಯಡಿ ಯೂರಪ್ಪನವರು ಮಾತ್ರ 75ರ ನಂತರವೂ ಜವಾಬ್ದಾರಿ ನಿರ್ವಹಿಸಿದವರು. ವಿಜಯೇಂದ್ರ ಪಕ್ಷದ ತೀರ್ಮಾನವೇ ಅಂತಿಮ ಅವರು ಎಲ್ಲಿಗೆ ಟಿಕೆಟ್ ಕೊಡುತ್ತಾರೋ ಅಲ್ಲಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ವರುಣಾ ಅಥವಾ ಹನೂರು ಕ್ಷೇತ್ರ ಎಲ್ಲಿಯಾದರೂ ನಿಲ್ಲಲಿ, ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು. ಗೋವಿಂದರಾಜನಗರ, ವಿಜಯನಗರ ಕ್ಷೇತ್ರದ ಜನ ನನ್ನನ್ನು ತಲೆ ಮೇಲೆ ಮೆರೆಸುತ್ತಿದ್ದಾರೆ. ಇಂತಹವನ್ನೆಲ್ಲಾ ದಯಮಾಡಿ ಬಿಡಿ, ಮೊದಲು ನೀವು ಸರಿಹೋಗಿ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿ, ಎಂ.ವಿ.ರವಿ ಶಂಕರ್ ಗೆಲ್ಲಿಸಲು ಮನವಿ ಮಾಡಿದರು. ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಎಂ.ರಾಜೇಂದ್ರ, ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಎಲ್.ನಾಗೇಂದ್ರ, ನಿರಂಜನ್ ಕುಮಾರ್, ಎಂ.ಪಿ.ಕುಮಾರಸ್ವಾಮಿ, ಮೇಯರ್ ಸುನಂದಾ ಪಾಲನೇತ್ರ, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಅಭ್ಯರ್ಥಿ ಮೈ.ವಿ.ರವಿಶಂಕರ್, ಮುಖಂಡರಾದ ರಘು ಆರ್.ಕೌಟಿಲ್ಯ, ಎಲ್.ಆರ್.ಮಹದೇವಸ್ವಾಮಿ, ಕಾರ್ಪೊರೇಟರ್ ಬಿ.ವಿ.ಮಂಜುನಾಥ್, ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.