ಡಾ.ಅಂಬೇಡ್ಕರ್ ಹೆಸರೇಳಿ ಗೆದ್ದವರು ಈಗ  ಚಡ್ಡಿ ಹಾಕುತ್ತಿದ್ದಾರೆ! ಉಡುದಾರವನ್ನು ಜನಿವಾರ ಮಾಡಿಕೊಳ್ಳುತ್ತಿದ್ದಾರೆ!!
ಮೈಸೂರು

ಡಾ.ಅಂಬೇಡ್ಕರ್ ಹೆಸರೇಳಿ ಗೆದ್ದವರು ಈಗ ಚಡ್ಡಿ ಹಾಕುತ್ತಿದ್ದಾರೆ! ಉಡುದಾರವನ್ನು ಜನಿವಾರ ಮಾಡಿಕೊಳ್ಳುತ್ತಿದ್ದಾರೆ!!

August 17, 2021

ಮೈಸೂರು,ಆ.16(ಪಿಎಂ)-ಡಾ.ಅಂಬೇಡ್ಕರ್ ಹೆಸರು ಹೇಳಿ ಗೆದ್ದವರು ಈಗ ಚಡ್ಡಿ ಹಾಕಿಕೊಳ್ಳು ತ್ತಿದ್ದಾರೆ. ಉಡುದಾರವನ್ನು ಜನಿವಾರ ಮಾಡಿಕೊಳ್ಳು ತ್ತಿದ್ದಾರೆ ಎಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಟೀಕಿಸಿದರು.

ಮೈಸೂರಿನ ವಿಶ್ವಮೈತ್ರಿ ಬುದ್ಧವಿಹಾರದ ಸಭಾಂ ಗಣದಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ 75ನೇ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿ ಕೊಂಡಿದ್ದ `ಯಾರಿಗೆ ಬಂತು! ಎಲ್ಲಿಗೆ ಬಂತು! 47ರ ಸ್ವಾತಂತ್ರ್ಯ?’ ಕುರಿತ ವಿಚಾರ ಸಂಕಿರಣ ಉದ್ಘಾ ಟಿಸಿ, ನಂತರ ಅವರು ಮಾತನಾಡಿದರು.

ಕಳೆದ 7 ವರ್ಷಗಳಲ್ಲಿ ಯಾವುದೇ ವಿಷಯ ಸಂಸತ್ತಿ ನಲ್ಲಿ ಚರ್ಚೆಯಾಗಿಲ್ಲ. ಚರ್ಚೆಯೇ ಇಲ್ಲದೇ 22 ಮಸೂದೆ ಅಂಗೀಕರಿಸಲಾಗಿದೆ. ಈ ನಡುವೆ ಇತ್ತೀ ಚೆಗೆ ಹಿಂದುಳಿದ ವರ್ಗ ಗುರುತಿಸುವ ಸಂವಿಧಾನ ತಿದ್ದುಪಡಿಗೆ ಚುನಾವಣೆ ದೃಷ್ಟಿಯಿಂದ ಎಲ್ಲರೂ (ಪಕ್ಷ ಗಳು) ಒಂದಾದರು. ದೇಶದ ದೀನ ದಲಿತರ ಉದ್ಧಾರಕ್ಕೆ ಉದ್ಭವವಾಗಿದ್ದೇವೆ ಎಂದು ಆಡಳಿತಕ್ಕೆ ಬಂದಾಕ್ಷಣ ಹೇಳುತ್ತಾರೆ. ದೀನ ದಲಿತರು ಇವರಿಗೆ ಬಂಡವಾಳ ಆಗಿದ್ದಾರೆ. ಅಂಬೇಡ್ಕರ್ ಹೆಸರು ಹೇಳಿ ಗೆದ್ದವರು ಈಗ ಚಡ್ಡಿ ಹಾಕಿಕೊಳ್ಳುತ್ತಿದ್ದಾರೆ. ಉಡುದಾರವನ್ನು ಜನಿವಾರ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ನಿನ್ನೆಯಷ್ಟೇ ದೇಶದ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದೇವೆ. ಪ್ರಧಾನಿಗಳು ಏಳು ವರ್ಷಗಳಿಂದ ಮಾಡಿದ ಅದೇ ಭಾಷಣವನ್ನೇ ನಿನ್ನೆಯೂ ಮುಂದುವರೆಸಿದರು. ಈಗ ನಮ್ಮನ್ನು ಆಳ್ವಿಕೆ ಮಾಡುತ್ತಿರುವವರು ಒಂದು ದೇಶ, ಒಂದು ಜನಾಂಗ ಮತ್ತು ಒಂದು ಧರ್ಮ ಎಂದು ಘೋಷಣೆ ಮಾಡುತ್ತಿದ್ದಾರೆ. ಶೇ.3ರಷ್ಟಿರುವ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದೇ ಜನ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದನ್ನು ಖಂಡಿಸಿ ಉಗ್ರ ಹೋರಾಟ ನಡೆಸಿದರು ಎಂದು ಬಸವಲಿಂಗಯ್ಯ ವಿಷಾದಿಸಿದರು.

`ಜನರಿಂದ, ಜನರಿಗೊಸ್ಕರ, ಜನರಿಗಾಗಿ’ ಎಂಬುದು ಈಗ ಬದಲಾಗಿದೆ. ವ್ಯಾಪಾರಿಗಳಿಂದ ಕೊಳ್ಳುವವರಿಗೆ ಎನ್ನುವಂತಾಗಿದೆ. ನಾಲ್ಕು ಮಂದಿ ಗುಜರಾತಿಗಳಲ್ಲಿ ಇಬ್ಬರು ದೇಶ ಮಾರುತ್ತಿದ್ದರೆ, ಇನ್ನಿಬ್ಬರು ಖರೀದಿ ಮಾಡುತ್ತಿದ್ದಾರೆ. ದೇಶವನ್ನು ಹಿಮ್ಮುಖವಾಗಿ ತಳ್ಳ ಲಾಗುತ್ತಿದೆ. ಎಲ್ಲವನ್ನೂ ಮಾರಿಯಾಗಿದ್ದು ಬಾಕಿ ಇರುವುದು ಸಂಸತ್ತು ಮಾತ್ರವೇ. ಗಾಂಧಿಯೂ ವ್ಯಾಪಾರಿ ಸಮುದಾಯವೇ ಆದರೂ ಅವರು ದೇಶ ಮಾರಲಿಲ್ಲ. ಬದಲಿಗೆ ಕಟ್ಟಿದರು. ಸಂವಿಧಾನದ ಮೂಲಕ ನಾವೆಲ್ಲ ಸ್ವಾತಂತ್ರರೇ ಆದರೂ ಆಡಳಿತ ಪಕ್ಷ ವಿರೋಧಿಸಿದರೆ ಜೈಲೇ ಗತಿ ಎನ್ನುವಂತಾಗಿದೆ ಎಂದರು.
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮಾಡಿದ ಒಂದು ತಪ್ಪು ಎಂದರೆ ತುರ್ತು ಪರಿಸ್ಥಿತಿ ಹೇರಿದ್ದು. ಅದರಿಂದಾಗಿಯೇ ಇಂದು ಎಲ್ಲಾ ಹುಳ ಗಳು ಮುಂದೆ ಬಂದಿವೆ. ಕೇವಲ ಎರಡು ಸ್ಥಾನ ಗೆಲ್ಲುತ್ತಿದ್ದವರು, ಈಗ 350 ಸ್ಥಾನ ಗೆಲ್ಲುವಂತಾಗಿದೆ. ಅದಕ್ಕೆ ಕಾರಣ ಒಡೆದಾಳುವ ನೀತಿ. ಈ ನೀತಿಯನ್ನು ಬ್ರಿಟಿಷರು ಕಲಿತಿದ್ದು ಇವರಿಂದಲೇ. ವಿದ್ಯಾವಂತರೂ ಚೆರಿತ್ರೆಯನ್ನು ತಪ್ಪಾಗಿ ಓದುಕೊಳ್ಳುವುದು ಹೆಚ್ಚುತ್ತಿದೆ. ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆಯಾದರೂ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ದೊರೆಯದಿದ್ದರೆ 1947ರ ಸ್ವಾತಂತ್ರ್ಯಕ್ಕೆ ಅರ್ಥವೇ ಇಲ್ಲ. ಇದನ್ನು ಅಂದೇ ಡಾ.ಅಂಬೇಡ್ಕರ್ ಹೇಳಿದ್ದಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಉಳಿಯುವುದು ಕಷ್ಟವಿದೆ. ಇಂತಹದ್ದೇ ಬಟ್ಟೆ ಹಾಕಬೇಕು. ಸಾಹಿತ್ಯ ಓದಬೇಕು ಎಂಬಿತ್ಯಾದಿಯಾಗಿ ನಿರ್ಬಂಧ ಹೇರಲಾಗು ತ್ತಿದೆ. ಇಲ್ಲವಾದರೆ ದೇಶದ್ರೋಹಿ ಪಟ್ಟ ಕಟ್ಟಲಾಗು ತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕಾದರೆ ನಾವು ಜಾಗೃತರಾಗಬೇಕು. ಪ್ರಸ್ತುತದ ಪರಿಸ್ಥಿತಿ 1975 ತುರ್ತು ಪರಿಸ್ಥಿತಿಗಿಂತಲೂ ಅಪಾಯಕಾರಿಯಾಗಿದೆ. ತುರ್ತು ಪರಿಸ್ಥಿತಿ ಘೋಷಣೆಯಾಗಿಲ್ಲಷ್ಟೇ. ಪ್ರಶ್ನೆ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಹಿಂದಿನ ಸರ್ಕಾರದ ಇಂದಿರಾ ಗಾಂಧಿ ಕ್ಯಾಂಟಿನ್ ಅನ್ನು ಈಗಿನವರು `ಅನ್ನಪೂರ್ಣೇಶ್ವರಿ’ ಮಾಡುತಾರಂತೆ. ಇದು ಜನತೆ ದಿಕ್ಕು ತಪ್ಪಿಸುವ ತಂತ್ರ ಎಂದರು.

ಅಂಬೇಡ್ಕರ್ ಅವರು ಸಂವಿಧಾನ ರಚನೆಗೂ ಮೊದಲು ಈ ದೇಶದ ಚರಿತ್ರೆಯ ಅಧ್ಯಯನ ನಡೆಸಿ, ವಿಶ್ಲೇಷಣೆ ಮಾಡಿದರು. ಹೊರಗಿನಿಂದ ಬಂದವರು ಈ ದೇಶದ ಮೂಲನಿವಾಸಿಗಳನ್ನು ಮೂಲೆ ಗುಂಪು ಮಾಡಿದರು ಎಂಬ ಅಂಶ ಬೆಳಕಿಗೆ ತಂದರು. ಈ ದೇಶದ ಮೂಲ ನಿವಾಸಿಗಳು ಅರಿವು ಹೊಂದ ಬೇಕು. ನೈಜ ಚೆರಿತ್ರೆಯನ್ನು ಅರಿತುಕೊಳ್ಳಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ದಲಿತರು, ಬುಡಕಟ್ಟು, ಕಾರ್ಮಿಕರು ಸೇರಿದಂತೆ ಒಟ್ಟಾರೆ ಬಡವ ರಿಗೆ ಸ್ವಾತಂತ್ರ್ಯ ಬಂದಿದೆಯೇ? ಎಂಬುದು ಸಿದ್ದ ಲಿಂಗಯ್ಯನವರ `ಯಾರಿಗೆ ಬಂತು! ಎಲ್ಲಿಗೆ ಬಂತು! 47ರ ಸ್ವಾತಂತ್ರ್ಯ?’ ಕ್ರಾಂತಿಗೀತೆಯಲ್ಲಿ ಮೂಡಿ ಬಂದಿರುವ ಪ್ರಶ್ನೆಯಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಬುದ್ಧ, ಬಸವ ಮತ್ತು ಡಾ.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಎಐಡಿವೈಓ ರಾಜ್ಯಾಧ್ಯಕ್ಷೆ ಎಂ.ಉಮಾದೇವಿ ವಿಷಯ ಮಂಡಿಸಿದರು.

ಸ್ವರಾಜ್ ಇಂಡಿಯಾ ಮೈಸೂರು ಘಟಕದ ಅಧ್ಯಕ್ಷ ಉಗ್ರನರಸಿಂಹೇಗೌಡ, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಪದಾಧಿಕಾರಿ ಕೆ.ವಿ.ದೇವೇಂದ್ರ ಮತ್ತಿತರರು ಹಾಜರಿದ್ದರು.

Translate »