ಮೈಸೂರಲ್ಲಿ ಇಂದು ಬಿಜೆಪಿ ಜನಾಶೀರ್ವಾದ ಯಾತ್ರೆ
ಮೈಸೂರು

ಮೈಸೂರಲ್ಲಿ ಇಂದು ಬಿಜೆಪಿ ಜನಾಶೀರ್ವಾದ ಯಾತ್ರೆ

August 17, 2021

ಮೈಸೂರು,ಆ.16(ಆರ್‍ಕೆ)-ಬಿಜೆಪಿ ದೇಶಾದ್ಯಂತ ಕೈಗೊಂಡಿರುವ ಜನಾಶೀರ್ವಾದ ಯಾತ್ರೆ ಕಾರ್ಯಕರ್ತರ ಸಭೆಯು ನಾಳೆ (ಆ.17) ಮೈಸೂರಿನ ಹೈವೇ ಸರ್ಕಲ್ ಬಳಿಯ ರಿಯೋ ಮೆರಿಡಿಯನ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಅವರು, ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯ ಲಿರುವ ಬಿಜೆಪಿ ಕಾರ್ಯಕರ್ತರ ಸಭೆ (ಜನಾಶೀರ್ವಾದ ಯಾತ್ರೆ)ಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸುವರು ಎಂದರು.

ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಡೆಯುವ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಇಂದು ರಾತ್ರಿ 8 ಗಂಟೆಗೆ ಮೈಸೂರಿಗೆ ಆಗಮಿಸುವ ಸಚಿವೆ ಶೋಭಾ ಕರಂದ್ಲಾಜೆ ಅವರು, ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ಮೈಸೂರಲ್ಲಿ ರಾತ್ರಿ ವಾಸ್ತವ್ಯ ಹೂಡುವರು.
ನಾಳೆ (ಆ.17) ಬೆಳಗ್ಗೆ 7.30 ಗಂಟೆಗೆ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇ ಶ್ವರಿ ದೇವಿಯ ದರ್ಶನ ಪಡೆದ ನಂತರ ಬೆಳಗ್ಗೆ 8.30 ಗಂಟೆಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುವರು. ಬೆಳಗ್ಗೆ 10 ಗಂಟೆಗೆ ಕೆ.ಆರ್. ಸರ್ಕಲ್‍ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬೆಳಗ್ಗೆ 10.15 ಗಂಟೆಗೆ ಬಿಜೆಪಿ ಕಚೇರಿಗೆ ತೆರಳಿ ಸುದ್ದಿಗೋಷ್ಠಿ ನಡೆಸುವ ಸಚಿವರು, ಬೆಳಗ್ಗೆ 11 ಗಂಟೆಗೆ ರಿಯೋ ಮೆರಿಡಿಯನ್ ಹೋಟೆಲ್‍ನಲ್ಲಿ ನಡೆಯುವ ಬಿಜೆಪಿ ಜನಾಶೀರ್ವಾದ ಯಾತ್ರೆ ಸಭೆಯಲ್ಲಿ ಭಾಗವಹಿಸಿದ ನಂತರ ಮಧ್ಯಾಹ್ನ 12.30 ಗಂಟೆಗೆ ರಸ್ತೆ ಮೂಲಕ ಹಾಸನ ಜಿಲ್ಲೆಗೆ ತೆರಳುವರು ಎಂದು ಶ್ರೀವತ್ಸ ತಿಳಿಸಿದರು.

ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಪಕ್ಷದ ಜನಪ್ರತಿನಿಧಿಗಳು, ಕಾರ್ಯಕರ್ತರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದ್ದಾರೆ.

Translate »