ಆಗಸ್ಟ್ ಕಡೇ ವಾರ ಮೈಸೂರಲ್ಲಿ ದಸರಾ ಸಭೆ
ಮೈಸೂರು

ಆಗಸ್ಟ್ ಕಡೇ ವಾರ ಮೈಸೂರಲ್ಲಿ ದಸರಾ ಸಭೆ

August 17, 2021

ಮೈಸೂರು, ಆ. 16(ಆರ್‍ಕೆ)- ದಸರಾ ಆಚರಣೆ ಸಂಬಂಧ ಆಗಸ್ಟ್ ಕಡೇ ವಾರ ಮೈಸೂರಲ್ಲಿ ಸಭೆ ನಡೆಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್ ತಿಳಿಸಿದ್ದಾರೆ. ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕೋವಿಡ್ ಸೋಂಕು ಇನ್ನೂ ಸಂಪೂರ್ಣ ವಾಗಿ ನಿರ್ನಾಮವಾಗದ ಹಿನ್ನೆಲೆಯಲ್ಲಿ ಈ ಬಾರಿಯೂ ನಾಡಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗ ದಿರಬಹುದು. ಈ ಸಂಬಂಧ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ಅಭಿಪ್ರಾಯ, ಸಲಹೆಗಳನ್ನು ಪಡೆದು ಅದರಂತೆ ಕಾರ್ಯಕ್ರಮದ ರೂಪು-ರೇಷೆ ಸಿದ್ಧಪಡಿಸಲಾಗುವುದು ಎಂದರು.

ಕಳೆದ ಬಾರಿಯೂ ಕೊರೊನಾ ಹಿನ್ನೆಲೆಯಲ್ಲಿ ನಿಯಮಿತ ಆಹ್ವಾನಿತರೊಂದಿಗೆ ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಳಿಸಿ ಸರಳವಾಗಿ ಮೈಸೂರು ದಸರಾ ಮಹೋತ್ಸವವನ್ನು ಆಚರಿಸಲಾಯಿತು. ಈಗಲೂ ಕೊರೊನಾ ಎರಡನೇ ಅಲೆಯ ಪ್ರಕರಣಗಳಿರುವುದರಿಂದ ಹಾಗೂ 3ನೇ ಅಲೆಯ ಭೀತಿ ಇರುವ ಕಾರಣ 2021-22ನೇ ಸಾಲಿನ ನಾಡಹಬ್ಬವನ್ನು ಆಡಂಬರವಿಲ್ಲದೇ ಕಡಿಮೆ ಖರ್ಚಿನಲ್ಲಿ ಆಚರಿಸಬೇಕಾಗಬಹುದು ಎಂದು ಸಚಿವರು ನುಡಿದರು.

ಕೋವಿಡ್-19 ಮಾರ್ಗಸೂಚಿ ಅನುಸರಿಸಿ ಯಾವ ರೀತಿಯಲ್ಲಿ ದಸರಾ ಆಚರಿಸ ಬಹುದು ಎಂಬುದರ ಬಗ್ಗೆ ಸಂಸದ, ಶಾಸಕರು, ಹಿರಿಯರ ಸಲಹೆ ಪಡೆದು ನಿರ್ಧಾರ ಕೈಗೊಂಡ ನಂತರ ಬೆಂಗಳೂರಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಅಂತಿಮ ರೂಪು-ರೇಷೆ ರೂಪಿಸಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ನುಡಿದರು.

Translate »