ಮೈಸೂರಲ್ಲಿ ಡಾ.ಚದುರಂಗ ಜನ್ಮದಿನಾಚರಣೆ ದಲಿತ ಬಂಡಾಯ ಸಾಹಿತ್ಯ ಸ್ವೀಕರಿಸಿದ್ದ ಡಾ.ಚದುರಂಗ
ಮೈಸೂರು

ಮೈಸೂರಲ್ಲಿ ಡಾ.ಚದುರಂಗ ಜನ್ಮದಿನಾಚರಣೆ ದಲಿತ ಬಂಡಾಯ ಸಾಹಿತ್ಯ ಸ್ವೀಕರಿಸಿದ್ದ ಡಾ.ಚದುರಂಗ

January 2, 2022

ಮೈಸೂರು,ಜ.1(ಪಿಎಂ)- ರಾಷ್ಟ್ರಕವಿ ಕುವೆಂಪು ಅವರಂತೆಯೇ ಸಾಹಿತಿ ಡಾ.ಚದುರಂಗರು ಕೂಡ ಪುರಾಣ ಪಾತ್ರಗಳನ್ನು ಸಮಕಾಲೀನಕ್ಕೆ ಪೂರಕವಾಗಿ ತಮ್ಮ ಸಾಹಿತ್ಯದಲ್ಲಿ ಚಿತ್ರಿಸಿದ್ದು, ಚದುರಂಗರು ದಲಿತ ಬಂಡಾಯ ಸಾಹಿತ್ಯ ಚಳವಳಿಯನ್ನು ತಮ್ಮದೇ ಚಳವಳಿ ಎನ್ನುವರಷ್ಟರ ಮಟ್ಟಿಗೆ ಸ್ವೀಕರಿಸಿದ್ದರು ಎಂದು ಸಾಹಿತಿಯೂ ಆದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

ಮೈಸೂರಿನ ಇಂಜಿನಿಯರ್‍ಗಳ ಸಂಸ್ಥೆ ಸಭಾಂಗಣ ದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಡಾ.ಚದುರಂಗರ (ಡಾ.ಸುಬ್ರಹ್ಮಣ್ಯರಾಜೇ ಅರಸ್) 107ನೇ ಜನ್ಮದಿನದ ಸಂಸ್ಮರಣೆಯಲ್ಲಿ ಚದುರಂಗರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ನಮ್ಮ ಪುರಾಣಗಳು ಬಹಳ ಪವಿತ್ರ. ಅವುಗಳನ್ನು ಮರು ಸೃಷ್ಟಿ ಮೂಲಕ ಭಿನ್ನಗೊಳಿಸುವುದು ಅಕ್ಷಮ್ಯ ಅಪರಾಧ ಎಂಬ ಅಭಿಪ್ರಾಯವಿದೆ. ಇದರೊಂದಿಗೆ ಪ್ರಪಂಚದ ಯಾವುದೇ ಪುರಾಣವಾದರೂ ಪರಮ ಪವಿತ್ರ ಎಂದು ಭಾವಿಸಬೇಕಿಲ್ಲ. ಕಾಲಕ್ಕೆ ತಕ್ಕಂತೆ ಅವುಗಳನ್ನು ಮರು ಕಟ್ಟುವ ಅಗತ್ಯವಿದೆ ಎಂಬ ಮತ್ತೊಂದು ಅಭಿಪ್ರಾಯವಿದೆ. ಕುವೆಂಪು ಅವರು ಪುರಾಣಗಳನ್ನು ಪ್ರಸ್ತುತಕ್ಕೆ ಪೂರಕವಾಗಿ ವೈಜ್ಞಾನಿಕ ನೆಲೆಯಲ್ಲಿ ಸಾಹಿತ್ಯ ಮರು ಸೃಷ್ಟಿ ಮಾಡಿದವರು. ಆದರೆ ಇತರೆ ಕೆಲ ಸಾಹಿತಿಗಳನ್ನು ಇದನ್ನು ಅಪಮಾನ ಎಂದು ಭಾವಿಸಿದ್ದೂ ಉಂಟು. ಕುವೆಂಪು ಅವರ ದಾರಿಯಲ್ಲೇ ಡಾ.ಚದುರಂಗರು ಹೆಜ್ಜೆ ಇಟ್ಟು ಸಾಹಿತ್ಯ ರಚನೆ ಮಾಡಿದವರು ಎಂದು ತಿಳಿಸಿದರು.

ಡಾ.ಚದುರಂಗ ತಮ್ಮ ಬಿಂಬ ನಾಟಕದ ಮೂಲಕ ಪುರಾಣಗಳ ಮರು ಸೃಷ್ಟಿ ಸೂಕ್ತ ಎಂದು ಪ್ರತಿಪಾದಿ ಸಿದ್ದಾರೆ. ಇಂದಿನ ಹೊಸ ತಲೆಮಾರಿನ ಲೇಖಕರಿಗೆ ಅವರ ಸಾಹಿತ್ಯ ಮಾರ್ಗದರ್ಶಕ ಎಂದರು.

ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಚದುರಂಗರ ಸಾಹಿತ್ಯ ಓದದಿದ್ದರೆ ಅಪೂರ್ಣರಾಗುತ್ತಾರೆ. ಚದುರಂಗ ಅವರು ಎಲ್ಲಾ ಅವಕಾಶಗಳಿದ್ದೂ ಸಿರಿವಂತಿಕೆಯನ್ನು ಬದಿಗೆ ಸರಿಸಿ ಸಾಮಾನ್ಯರಂತೆ ಬದುಕು ಮಾಡಿದವರು. ಅವರ ಕಾಲದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಾಡಿನ ರಾಜಕಾರಣವೇ ಬದಲಾವಣೆ ಮಾಡಬಹುದಾದ ದಲಿತ ಬಂಡಾಯ ಸಾಹಿತ್ಯ ಚಳವಳಿ ಆರಂಭಗೊಂಡಿತ್ತು. ಪ್ರಗತಿಶೀಲ ಸಾಹಿತ್ಯ ಚಳವಳಿ ಕಾಲದಲ್ಲಿ ಚದುರಂಗ ಬರವಣಿಗೆ ಮಾಡುತ್ತಿದ್ದರು. ಅವರನ್ನು ನೀವು ಪ್ರಗತಿಶೀಲ ಸಾಹಿತಿಗಳೇ ಎಂದರೆ ಹೌದು ಮತ್ತು ಇಲ್ಲ ಎಂದು ಎರಡನ್ನೂ ಒಟ್ಟಿಗೆ ಹೇಳುತ್ತಿದ್ದರು. ಅಂದರೆ ಅವರು ಪ್ರಗತಿಶೀಲದಿಂದ ಪ್ರಭಾವಿತರಾದರೂ ಆನಂತರದಲ್ಲಿ ಬಂದ ದಲಿತ ಬಂಡಾಯ ಸಾಹಿತ್ಯ ಚಳವಳಿ ಸ್ವೀಕರಿಸಿದ್ದರು ಎಂದು ಸ್ಮರಿಸಿದರು. ಅವರ ಸಾಹಿತ್ಯ ಅಧ್ಯಯನ ಮಾಡಿದವರಿಗೆ ಅದು ಬಂಡಾಯ ಸಾಹಿತ್ಯ ಕ್ಕಿಂತ ಭಿನ್ನ ಎನ್ನಿಸುವುದಿಲ್ಲ. ಬಂಡಾಯ ಸಾಹಿತ್ಯ ಕೇವಲ 70ರ ದಶಕಕ್ಕೆ ಸೀಮಿತ ಎಂದು ನಾನು ಭಾವಿಸುವುದಿಲ್ಲ. ಬದಲಿಗೆ ಅದು ಬಸವಣ್ಣನ ಕಾಲದಲ್ಲೇ ಕನ್ನಡ ಸಾಹಿತ್ಯದಲ್ಲಿ ಆರಂಭಗೊಂಡಿದೆ. ಹೊಸಗನ್ನಡ ಸಾಹಿತ್ಯ ಕಾಲದಲ್ಲಿ ಕುವೆಂಪು ಅವರಿಂಗಿತ ದೊಡ್ಡ ಬಂಡಾಯ ಸಾಹಿತಿ ಸಿಗುವುದಿಲ್ಲ ಎಂದರು.

ಉಳ್ಳವರಿಗೆ ಮಾತ್ರ ಬದುಕುವ ಹಕ್ಕಿದೆ. ಇಲ್ಲದವರಿಗೆ ಬದುಕಿನ ಹಕ್ಕಿನ ನಿರಾಕರಣೆ ಆಗುತ್ತಿದೆ. ಇದು ವಾಸ್ತವ ಎನ್ನುವುದು ಚದುರಂಗ ಅವರ `ಶವದ ಮನೆ’ ಕಥೆಯ ಬಹಳ ಮುಖ್ಯವಾದ ಅಂಶ. ಅರಮನೆ ರಾಜರು, ಸಮಾಜದ ಮೇಲ್ವರ್ಗದ ಜೀವನ ಕುರಿತು ಅವರ ಸಾಹಿತ್ಯ ರಚನೆಯಾಗಿಲ್ಲ. ಬದಲಿಗೆ ಅಸಹಾಯಕರು, ಸಾಮಾನ್ಯರು ಮತ್ತು ಶೋಷಿತರ ಬದುಕು ಅವರ ಸಾಹಿತ್ಯದಲ್ಲಿ ಅನಾ ವರಣಗೊಂಡಿದೆ ಎಂದು ತಿಳಿಸಿದರು.
ಡಾ.ಚದುರಂಗರ ಸೊಸೆ ವಿಜಯಲಕ್ಷ್ಮೀ ಅರಸ್ ಮಾತನಾಡಿ, ಇಂದು ಚದುರಂಗ ಅವರ 107ನೇ ಜನ್ಮದಿನ. ಚದುರಂಗ ಅವರ ವ್ಯಕ್ತಿತ್ವ ತೆರೆದ ಪುಸ್ತಕದಂತೆ. ಒಂದು ದಿನವೂ ಅವರಲ್ಲಿ ಕೋಪ ಕಂಡಿಲ್ಲ. ಒಂದು ಸಣ್ಣ ಕಥೆ ಬರೆದರೂ ನನ್ನೊಂದಿಗೆ ಚರ್ಚೆ ಮಾಡಿದ್ದರು. ನನ್ನನ್ನು ಮಗಳಂತೆ ಕಾಣು ತ್ತಿದ್ದರು ಎಂದು ಸ್ಮರಿಸಿದರು.

ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್. ಅರಸ್ ಮಾತನಾಡಿ, ಚದುರಂಗರು ಬುದ್ಧನ ಅಂತಃಕರಣ ಅಳವಡಿಸಿಕೊಂಡಿದ್ದರು. ಅವರು ಕುವೆಂಪು ಕುರಿತಂತೆ ಸಾಕ್ಷ್ಯಚಿತ್ರ ಕೂಡ ನಿರ್ಮಿಸಿದ್ದರು ಎಂದು ಹೇಳಿ ದರು. ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಹಿರಿಯ ಪತ್ರಕರ್ತ ರವೀಂದ್ರ ಭಟ್, ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ, ಅನ್ವೇಷಣಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ಹೆಚ್.ಎಂ.ಟಿ.ಲಿಂಗರಾಜೇಅರಸ್, ಸಂಸ್ಥಾಪಕ ಅಮರ್‍ನಾಥ್ ರಾಜೇಅರಸ್, ಚದುರಂಗರ ಪುತ್ರ ಡಾ.ಎಸ್.ಎನ್.ವಿಕ್ರಮರಾಜ್ ಅರಸ್ ಮತ್ತಿತರರು ಹಾಜರಿದ್ದರು.

Translate »