ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಡಾ.ರಾಜ್
ಚಾಮರಾಜನಗರ

ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಡಾ.ರಾಜ್

April 27, 2021

ಚಾಮರಾಜನಗರ,ಏ.26-ಕನ್ನಡದ ಕಣ್ಮಣಿ, ಜಿಲ್ಲೆಯ ಹೆಮ್ಮೆಯ ಪುತ್ರ, ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್‍ಕುಮಾರ್ ಅವರು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ನಗರದ ಜನಾರ್ಧನ ಪ್ರತಿಷ್ಠಾನದ ಆಧ್ಯಕ್ಷ ಅರ್ಚಕ ಅನಂತಪ್ರಸಾದ್ ಹೇಳಿದರು.
ಜನಾರ್ಧನ ಪ್ರತಿಷ್ಠಾನದ ವತಿಯಿಂದ ಡಾ.ರಾಜ್ ಅವರ ಹುಟ್ಟೂರು ದೊಡ್ಡಗಾಜನೂರಿನ ಅವರ ತೋಟದ ಮನೆಯಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಡಾ.ರಾಜ್‍ಕುಮಾರ್ ಅವರ 93ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರಾಜ್ ಅವರ ಸೋದರಳಿಯ ಗೋಪಾಲ್ ದಂಪತಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಮ್ಮ ಜೀವಿತಾವಧಿಯ ಕೊನೆಯ ವರೆಗೂ ಕನ್ನಡಕ್ಕಾಗಿ, ಕನ್ನಡತನಕ್ಕಾಗಿ ಶ್ರಮಿಸಿದ ಡಾ.ರಾಜ್ ಅವರು ತಮ್ಮ ಉತ್ತಮ ಅಭಿನಯದೊಂದಿಗೆ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕನ್ನಡ ಚಲನಚಿತ್ರಗಳನ್ನು ನೀಡಿ, ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.

ಚಾಮರಾಜನಗರ ಹಾಗೂ ತಮ್ಮ ಹುಟ್ಟೂರು ದೊಡ್ಡಗಾಜ ನೂರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಚಾಮರಾಜನಗರದ ಕಡೆಯವರು ಎಂದರೇ ಅವರನ್ನು ಪ್ರೀತಿಯಿಂದ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸುತ್ತಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಡಾ.ರಾಜ್ ನಮ್ಮ ಕಣ್ಮುಂದೆ ಇಲ್ಲದಿದ್ದರೂ ಮಾನಸದಲ್ಲಿ ಇದ್ದಾರೆ ಎಂದರು.

ಪ್ರತಿವರ್ಷ ಜನಾರ್ಧನ ಪ್ರತಿಷ್ಠಾನದಿಂದ ಡಾ.ರಾಜ್ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಕೊರೊನಾ ದಿಂದ ಈ ವರ್ಷ ರಾಜ್ ಅವರ ಹುಟ್ಟೂರು ದೊಡ್ಡಗಾಜನೂರಿನಲ್ಲಿ ಸರಳವಾಗಿ ಆಚರಿಸುತ್ತಿದ್ದು, ರಾಜ್ ಅವರ ಸೋದರಳಿಯ ಗೋಪಾಲ್ ದಂಪತಿಗೆ ಸನ್ಮಾನ ಮಾಡುತ್ತಿರುವುದು ಹೆಮ್ಮೆಯಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ರಾಜ್‍ಕುಮಾರ್ ಅವರ ಆಪ್ತ ಸ್ನೇಹಿತ ರಾದ ಕೃಷ್ಣ ಟಾಕೀಸ್ ಚಂದ್ರು, ಜೆಎಸ್‍ಎಸ್ ಆಸ್ಪತ್ರೆ ಎಂ.ಡಿ.ಕುಲ ದೀಪ್ ದಂಪತಿ, ನರಸಿಂಹ, ಶ್ರೀನಿವಾಸ್ ಇದ್ದರು.

Translate »