ಹೆಬ್ಬಾಳಲ್ಲಿ ‘ಡಾ.ಸುಧಾಮೂರ್ತಿ ರಸ್ತೆ’ ಅನಾವರಣ
ಮೈಸೂರು

ಹೆಬ್ಬಾಳಲ್ಲಿ ‘ಡಾ.ಸುಧಾಮೂರ್ತಿ ರಸ್ತೆ’ ಅನಾವರಣ

March 27, 2022

ಮೈಸೂರು,ಮಾ.26(ಎಂಕೆ)-ನಗರದ ಹೆಬ್ಬಾಳಿನಲ್ಲಿ ನಿರ್ಮಿ ಸಿರುವ ‘ಹೆಬ್ಬಾಳಿನ ಹೆಬ್ಬಾಗಿಲು’ ಹಾಗೂ ‘ಡಾ.ಸುಧಾ ಮೂರ್ತಿ ರಸ್ತೆ’ಯನ್ನು ಶನಿವಾರ ಉದ್ಘಾಟಿಸಲಾಯಿತು.

ಹೆಬ್ಬಾಳಿನ ಮುಖ್ಯದ್ವಾರದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು ತಮ್ಮದೇ ಹೆಸರಿನ ರಸ್ತೆ ಹಾಗೂ ‘ಹೆಬ್ಬಾಳಿನ ಹೆಬ್ಬಾಗಿಲ’ನ್ನು ಉದ್ಘಾಟಿಸಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ರಾಜ್ಯದ ಹಲವೆಡೆ ಸಮಾಜ ಸೇವೆ ಮಾಡು ತ್ತಿದ್ದೇನೆ. ಆದರೆ ನನ್ನ ಸೇವೆಯನ್ನು ಗುರುತಿಸಿದ್ದು ಮೈಸೂರೇ ಮೊದಲು ಅನ್ನಿಸುತ್ತದೆ. ಹೆಬ್ಬಾಳಿನ ಮುಖ್ಯ ರಸ್ತೆಗೆ ನನ್ನ ಹೆಸರನ್ನು ಇಟ್ಟಿರುವುದನ್ನು ನೋಡಿ ನನಗೆ ಆಶ್ಚರ್ಯ ವಾಯಿತು. ಇದು ನಮ್ಮ ಊರಿನಲ್ಲಿ ನನಗೆ ಸಿಕ್ಕ ಉಡುಗೊರೆ ಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

‘ಎನಿತು ಜನರಿಗೆ ಎನಿತು ಜನ್ಮಗಳಿಗೆ ಎನಿತು ಋಣಿಯೇ ಹಾಗೇ ನೋಡಿದರೆ ಈ ಜನ್ಮವು ಒಂದು ಋಣದ ಗಣಿಯೇ…’ ಎಂಬಂತೆ ನಮ್ಮ ಊರಿಗೆ, ನಮ್ಮ ಭಾಷೆಗೆ, ನಾಡಿಗೆ ಸೇವೆ ಮಾಡ ಬೇಕು. ಹಣ ಬರುವುದು ವೈಭವಕ್ಕಲ್ಲ. ದೇವರು ಐಶ್ವರ್ಯ ಕೊಡುವುದು ಸೇವೆ ಮಾಡುವುದಕ್ಕಾಗಿ. ಈ ನಿಟ್ಟಿನಲ್ಲಿ ಮಾಡಿದ ಅಲ್ಪ ಸೇವೆಯನ್ನು ನೆನಪಿನಲ್ಲಿ ಇಟ್ಟುಕೊಂಡು ಪ್ರೀತಿ ತೋರಿಸಿ, ಧೈರ್ಯ, ವಿಶ್ವಾಸ ಮತ್ತು ಪ್ರೋತ್ಸಾಹಿಸಿದ್ದೀರಿ ಎಂದರು.

ಕೆರೆ ಸ್ವಚ್ಛವಾಗಿಟ್ಟುಕೊಳ್ಳಿ: ಕೆಲ ದಿನಗಳ ಹಿಂದೆ ಹೆಬ್ಬಾಳ ಕೆರೆ ನೋಡಲು ಬಂದಿದ್ದಾಗ ಯಾರೋ ಬೆಡ್‍ಶೀಟ್, ಮುರಿದ ಖುರ್ಚಿ, ಪ್ಲಾಸ್ಟಿಕ್ ಡಬ್ಬಗಳನ್ನು ಎಸೆದಿದ್ದರು. ಇದರಿಂದ ಕೆರೆಯ ಸ್ವಚ್ಛತೆ ಹಾಳಾಗುತ್ತದೆ. ಜೊತೆಗೆ ಮೀನುಗಳನ್ನು ಹಿಡಿಯುತ್ತಿ ದ್ದಾರೆ. ಒಂದೂವರೆ ಲಕ್ಷ ಮೀನುಗಳನ್ನು ಬಿಟ್ಟಿರುವುದು ಕೆರೆಯ ನೀರು ಸ್ವಚ್ಛವಾಗಿರಲೆಂದು. ಹೆಬ್ಬಾಳಿನ ಕೆರೆ ನಿಮ್ಮದು. ನಿಮ್ಮ ಕೆರೆಯ ಸ್ವಚ್ಛತೆಯ ಜವಾಬ್ದಾರಿಯನ್ನು ನೀವೇ ನೋಡಿಕೊಳ್ಳಬೇಕು. ಒಂದು ಕಾಲದಲ್ಲಿ 2 ಸಾವಿರ ಎಕರೆ ವಿಸ್ತಿರ್ಣವಿದ್ದ ಕೆರೆ ಈಗ ಕಡಿಮೆಯಾಗಿದೆ. ಇರುವ ಕೆರೆಯನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.

ಗರಡಿ ಮನೆಗಳ ಉಳಿವಿಗೆ ಸಹಾಯ: ರಾಜ್ಯದಲ್ಲಿ ಗರಡಿ ಮನೆಗಳ ಸಂಸ್ಕøತಿ ನಶಿಸಿ ಹೋಗುತ್ತಿದೆ. ಕುಸ್ತಿ ಹೇಳಿಕೊಡುವ ಗರಡಿ ಮನೆಗಳು ಇಲ್ಲದಂತಾಗುತ್ತಿವೆ. ಆದ್ದರಿಂದ ಗರಡಿ ಮನೆಗಳ ಉಳಿವಿಗೆ ಕೈಲಾದ ಸಹಾಯ ಮಾಡಲಾಗುವುದು. ಅದಕ್ಕಾಗಿ ತಾವುಗಳು ಕೈಜೋಡಿಸಬೇಕು ಎಂದು ಕೋರಿದರು.

ರಸ್ತೆ ಅಭಿವೃದ್ಧಿ: ಶಾಸಕ ಎಲ್.ನಾಗೇಂದ್ರ ಮಾತನಾಡಿ, ಹೆಬ್ಬಾಳಿನ ಮುಖ್ಯ ರಸ್ತೆಯನ್ನು ಸುಮಾರು ನಾಲ್ಕೂವರೆ ಕೋಟಿ ರೂ., ನಿಂದ ಅಭಿವೃದ್ಧಿ ಪಡಿಸಲಾಗಿದೆ. ಹಾಗೆಯೇ ಸುಮಾರು 25 ಲಕ್ಷ ರೂ. ಪಾಲಿಕೆ ಅನುದಾನದಿಂದ ಹೆಬ್ಬಾಳಿನ ಹೆಬ್ಬಾಗಿಲನ್ನು ನಿರ್ಮಿಸಲಾಗಿದೆ. ವಿಶ್ವದ ಗಮನ ಸೆಳೆದಿರುವ ಇನ್ಫೋಸಿಸ್ ಸಂಸ್ಥೆ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಇಂತಹ ಸಂಸ್ಥೆಯನ್ನು ಬೆಳೆಸಿದ ಡಾ.ಸುಧಾಮೂರ್ತಿಯವರ ಸಮಾಜ ಸೇವೆ ಅಪಾರ. ಪ್ರಕೃತಿ ವಿಕೋಪಕ್ಕೆ ಒಳಗಾಗಿ ಮನೆ ಕಳೆದುಕೊಂಡಿದ್ದ ಸಾವಿರಾರು ಜನರಿಗೆ ಸೂರು ಕಟ್ಟಿಕೊಟ್ಟಿರುವ ಅವರ ಸೇವೆ ಸಾಕಷ್ಟಿದೆ ಎಂದು ಗುಣಗಾನ ಮಾಡಿದರು.

ದೇವರ ಮೇಲೆ ಅಪಾರ ಭಕ್ತಿ: ಶಾಸಕ ಜಿ.ಟಿ.ದೇವೇಗೌಡರು ಮಾತನಾಡಿ, ಹೆಬ್ಬಾಳ ಕೆರೆಯ ಪಕ್ಕದಲ್ಲಿರುವ ಲಕ್ಷ್ಮಿಕಾಂತಸ್ವಾಮಿ ದೇವಸ್ಥಾನದ ಮೇಲೆ ಸುಧಾಮೂರ್ತಿ ಯವರಿಗೆ ಅಪಾರ ಭಕ್ತಿ. ಆದ್ದರಿಂದಲೇ ಹೆಬ್ಬಾಳ ಕೆರೆಯನ್ನು ಸ್ವಚ್ಛಗೊಳಿಸಿ ಅಭಿವೃದ್ಧಿ ಮಾಡಿಸಿದ್ದಾರೆ. 123 ಕೋಟಿ ರೂ.ನಲ್ಲಿ ಬೆಂಗಳೂರಿನಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣ ಮಾಡಿಸಿ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ನಾಡು ಒಪ್ಪುವ ಆದರ್ಶ ಮಹಿಳೆಯಾದ ಡಾ.ಸುಧಾಮೂರ್ತಿ ಅವರಿಂದ ನಾಡಹಬ್ಬ ದಸರಾ ಉದ್ಘಾಟನೆ ಮಾಡಿಸ ಬೇಕು ಎಂದು ಅಂದಿನ ಸಿಎಂ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದೆ. ದೇಶಕ್ಕೆ, ರಾಜ್ಯಕ್ಕೆ ಏನಾದರೂ ಸೇವೆ ಮಾಡಬೇಕೆಂತಲೇ ಸದಾ ಸಂಶೋಧನೆ ಮಾಡುವ ಸುಧಾಮೂರ್ತಿ ಅವರ ಸೇವೆ ಅಪಾರ ಎಂದು ಮೆಚ್ಚುಗೆ ಮಾತುಗಳನ್ನಾಡಿದರು. ಶಾಸಕ ಯತೀಂದ್ರ ಸಿದ್ದರಾಮಯ್ಯ, ನಗರ ಪಾಲಿಕೆ ಸದಸ್ಯರಾದ ಶಿವಕುಮಾರ್, ಪ್ರೇಮಾ ಶಂಕರೇಗೌಡ, ಲಕ್ಷ್ಮಿ, ಕೆ.ವಿ.ಶ್ರಿಧರ್, ರಮೇಶ್, ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ, ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಸ್ಥಳಿಯ ಮುಖಂಡರಾದ ಶಿವಮಾದೇಗೌಡ, ಸಿ.ಎನ್.ದಂಡಪಾಣಿ, ಬಿ.ಜೆ.ನಾಗೇಂದ್ರ, ಪ್ರಕಾಶ್, ಸುಬ್ಬಣ್ಣ ಮತ್ತಿತರರು ಉಪಸ್ಥಿತರಿದ್ದರು.

Translate »