ಮೈಸೂರು,ಮಾ.26-ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಕಾಮಗಾರಿ ಕೈಗೊಂಡರೆ ಭೂಮಿ ಸಡಿಲ ಗೊಂಡು ಪರಿಸರಕ್ಕೆ ಅಪಾರವಾದ ಹಾನಿ ಸಂಭವಿಸುವ ಅಪಾಯವಿರುವುದರಿಂದ ಈ ಯೋಜನೆ ಕೈಗೊಳ್ಳು ವುದು ಸೂಕ್ತವಲ್ಲ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು, ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರ ಗಮನ ಸೆಳೆದಿದ್ದಾರೆ.
ಈ ಸಂಬಂಧ ವಾರ್ತಾ ಇಲಾಖೆ ಮೂಲಕ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, 2022-23ರ ಆಯ-ವ್ಯಯದಲ್ಲಿ ಹಣಕಾಸು ಸಚಿವರೂ ಆಗಿ ರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಿಸುವುದರ ಬಗ್ಗೆ ಪ್ರಸ್ತಾಪಿಸಿರುವ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮೈಸೂರಿನ ಜನತೆ ಮತ್ತು ಪರಿಸರವಾದಿಗಳು ಈ ಯೋಜನೆಯನ್ನು ವಿರೋಧಿಸುತ್ತಿರುವುದು ಪತ್ರಿಕೆ ಗಳಲ್ಲಿ ವರದಿಯಾಗಿದ್ದು, ಈ ಕುರಿತು ಕೆಲವು ಮಹತ್ವದ ಸಂಗತಿಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಚಾಮುಂಡಿಬೆಟ್ಟಕ್ಕೆ ಕುಡಿಯುವ ನೀರು, ಶೌಚಾ ಲಯ, ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ಪೂಜಾ ಸಾಮಗ್ರಿಗಳ ಮಾರಾಟ ವ್ಯವಸ್ಥೆಯಂತಹ ಈಗಿರುವ ಮೂಲಭೂತ ಸೌಕರ್ಯಗಳು ಸಾಕೆನಿಸಿದೆ. ಇನ್ನೇನಾದರೂ ಅಗತ್ಯ ಕಂಡುಬಂದಲ್ಲಿ ಪರಿಸರಸ್ನೇಹಿ ವಿಧಾನದಲ್ಲಿ ಅದನ್ನು ಒದಗಿಸುವ ಅವಶ್ಯವಿದೆಯೇ ಹೊರತು, ಪರಿಸರಕ್ಕೆ ಮಾರಕವಾದ ರೋಪ್ ವೇಯಂ ತಹ ಮಾರ್ಗ ನಿರ್ಮಾಣವು ಅಭಿವೃದ್ಧಿಯೂ ಅಲ್ಲ, ಅದರ ಅಗತ್ಯತೆಯೂ ಇಲ್ಲ. ಆದುದರಿಂದ ಮುಖ್ಯಮಂತ್ರಿ ಗಳು ಈ ವಿಷಯವನ್ನು ಮರು ಪರಿಶೀಲಿಸಬೇಕು ಮತ್ತು ಸಕಾರಾತ್ಮಕ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹ ಪೂರ್ವಕವಾಗಿ ಒತ್ತಾಯಿಸುವುದಾಗಿ ಪ್ರಸಾದ್ ತಿಳಿಸಿದ್ದಾರೆ.
ತಾವು ಕಂದಾಯ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ, 2015ರಲ್ಲಿ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತಾದಿಗಳು ಮತ್ತು ಪ್ರವಾಸಿ ಗರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವಾಣಿಜ್ಯ ಸಮುಚ್ಛಯ, ಡಾರ್ಮಿಟರಿ ಬ್ಲಾಕ್, ಕ್ಯೂ ಲೈನ್ ವಿತ್ ಟಾಯ್ಲೆಟ್ ಬ್ಲಾಕ್, ರಸ್ತೆ ನಿರ್ಮಾಣ, ವಾಹನ ನಿಲುಗಡೆಗೆ ಬಹು ಅಂತಸ್ತಿನ ಕಟ್ಟಡ ಮುಂತಾದವು ಗಳಿಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಯೋಜನೆ ಸಿದ್ಧ ಪಡಿಸಿ ಕಾಮಗಾರಿ ಕೈಗೊಳ್ಳಲು ಶಂಕುಸ್ಥಾಪನೆ ನೆರವೇ ರಿಸಲಾಗಿತ್ತು. ಅದಕ್ಕಾಗಿ ಚಾಮುಂಡಿಬೆಟ್ಟದ ಮೇಲೆ ದೇವಿಕೆರೆ ಪ್ರದೇಶದಲ್ಲಿ 8.04 ಎಕರೆ ಜಮೀನು ನಿಗದಿಪಡಿಸಿ ಅಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಈ ಹಂತದಲ್ಲಿ ಚಾಮುಂಡಿಬೆಟ್ಟದಲ್ಲಿ ಭೂ ಕುಸಿತವಾಗಿ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದರು. ಇದನ್ನು ಗಮನಿಸಿದ ತಾವು, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಪರಿಶೀಲನೆ ನಡೆಸಲು ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೆ. ಅಲ್ಲಿ ನಾನು ಕೇಳಿದ ಮೊದಲ ಪ್ರಶ್ನೆ “ಬೆಟ್ಟದ ಮೇಲೆ ಹೀಗೆ ಕಾಮಗಾರಿ ಕೈಗೊಳ್ಳಲು ಸಂಬಂಧಿಸಿದ ಇಲಾಖೆಯವರು ನಿಮ್ಮ ಒಪ್ಪಿಗೆ ಪಡೆದಿದ್ದಾರೆಯೇ?” ಎಂದು. ಆಗ ಅರಣ್ಯ ಮತ್ತು ಪರಿಸರ ಇಲಾಖೆ ಯವರು ತಬ್ಬಿಬ್ಬಾಗಿ ತಮಗೆ ಈ ವಿಷಯವೇ ಗೊತ್ತಿಲ್ಲ ಎಂದು ತಿಳಿಸಿದರು. ಭೂ ಕುಸಿತದ ಹಾನಿಯನ್ನು ಕಣ್ಣಾರೆ ಕಂಡ ನಾನು ಆ ಕೆಲಸವನ್ನು ಅಲ್ಲಿಗೇ ಸ್ಥಗಿತಗೊಳಿಸುವಂತೆ ಆದೇಶಿಸಿದ್ದೆ. ಇದಾದ ಕೆಲವು ದಿನಗಳಲ್ಲಿ ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟ ಕಾರಣದಿಂದಾಗಿ ಮುಂದೆ ಏನಾಯಿತು ಎಂಬುದು ನನಗೆ ತಿಳಿದಿಲ್ಲ ಎಂದು ಶ್ರೀನಿವಾಸಪ್ರಸಾದ್ ಹಿಂದಿನ ವೃತ್ತಾಂತವನ್ನು ಉಲ್ಲೇಖಿಸಿದ್ದಾರೆ. ಈಗ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿ ರುವುದು ತಿಳಿಯಿತು. ಪರಿಸರವಾದಿಗಳು ಈ ಯೋಜನೆಯನ್ನು ವಿರೋಧಿಸುವುದರಲ್ಲಿ ಅರ್ಥವಿದೆ ಎಂದು ನಾನು ಭಾವಿಸಿದ್ದೇನೆ ಎಂದು ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ.
ಚಾಮುಂಡಿಬೆಟ್ಟ ಮೈಸೂರಿಗೆ ಪ್ರಕೃತಿದತ್ತವಾದ ಕೊಡುಗೆ. ಈಗ ಅದು ಮೈಸೂರಿನ ಮಧ್ಯಭಾಗದಲ್ಲಿದೆ. ಮೈಸೂರಿನ ಯದು ವಂಶದ ಅರಸರು ತಮ್ಮ ಕುಲದೇವತೆ ಚಾಮುಂಡೇ ಶ್ವರಿಗೆ ದೇವಸ್ಥಾನ ನಿರ್ಮಿಸಿ, ಅಂದಿನಿಂದಲೂ ಅದರ ಅಭಿವೃದ್ಧಿಗಾಗಿ ಯೋಜಿತ ರೀತಿಯಲ್ಲಿ ಪ್ರಯತ್ನ ನಡೆ ಸುತ್ತಲೇ ಬಂದಿದ್ದಾರೆ. ಬೆಟ್ಟದ ತುದಿಯನ್ನು ತಲು ಪಲು ಸುಸಜ್ಜಿತವಾದ ಮೆಟ್ಟಿಲುಗಳ ಒಂದು ಮಾರ್ಗ ವಿದೆ. ಬಸ್ ಹಾಗೂ ಇತರ ವಾಹನಗಳಿಗಾಗಿ ಮತ್ತೊಂದು ರಸ್ತೆ ಇದೆ. ಇದಲ್ಲದೇ ಇನ್ನೂ ಎರಡು ಕಡೆಯಿಂದ ಬೆಟ್ಟ ಹತ್ತಿಕೊಂಡು ಹೋಗಲು ಮಾರ್ಗಗಳಿವೆ. ಕೇವಲ ಅರ್ಧ ಗಂಟೆ ಅವಧಿಯಲ್ಲಿ ಬೆಟ್ಟದ ತುದಿ ತಲುಪ ಬಹುದು ಮತ್ತು ಬೆಟ್ಟದ ತುದಿಯಿಂದ 20 ನಿಮಿಷ ದಲ್ಲಿ ಮೈಸೂರು ನಗರಕ್ಕೆ ಪ್ರವೇಶಿಸಬಹುದು. ಹೀಗೆ ಬೆಟ್ಟಕ್ಕೆ ಹೋಗಿ-ಬರಲು ಮಾರ್ಗ ಸೌಕರ್ಯ ಇರು ವುದರಿಂದ ರೋಪ್ ವೇ ಅನಗತ್ಯ.