ಅತಿರಥರ ರಂಗ ಪ್ರವೇಶ
News

ಅತಿರಥರ ರಂಗ ಪ್ರವೇಶ

March 27, 2022

ಬೆಂಗಳೂರು,ಮಾ.26(ಕೆಎಂಶಿ)-ಕರ್ನಾಟಕದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ದೆಹಲಿ ಬಿಜೆಪಿ ನಾಯಕರೇ ಅಖಾಡಕ್ಕೆ ಇಳಿಯುತ್ತಿ ದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿ ಗಣ್ಯರು ಏಪ್ರಿಲ್ ತಿಂಗಳಲ್ಲಿ ರಾಜ್ಯ ಪ್ರವಾಸ ಕೈಗೊಂಡು ಚುನಾವಣಾ ಬಾವುಟ ಹಾರಿಸುತ್ತಿದ್ದಾರೆ. ಕರ್ನಾಟಕದ ಬಿಜೆಪಿ ನಾಯಕರನ್ನು ನಂಬಿಕೊಂಡರೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲವೆಂದು ಮನಗಂಡು ವರಿಷ್ಠರೇ ರಾಜ್ಯದ ನಾಯಕತ್ವ ಕೈಗೆತ್ತಿಕೊಂಡಿದ್ದಾರೆ.

ಪ್ರಧಾನಿಯವರು ಏ.5ರಂದು ಒಂದು ದಿನದ ರಾಜ್ಯ ಪ್ರವಾಸ ಕೈಗೊಂಡರೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾರ್ಚ್ 31 ಹಾಗೂ ಏ.1ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಏಪ್ರಿಲ್ 17 ಮತ್ತು 18ರಂದು 2 ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಏ.6ರಂದು ಜಿಲ್ಲಾ ಉಸ್ತುವಾರಿ ಸಚಿವರುಗಳು ತಮಗೆ ವಹಿಸಿರುವ ಜಿಲ್ಲೆಗಳಲ್ಲೇ ಉಳಿದು, ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ದೊಡ್ಡ ಪ್ರಮಾಣ ದಲ್ಲಿ ಆಚರಿಸಬೇಕೆಂದು ದೆಹಲಿಯಿಂದ ಸಂದೇಶ ಬಂದಿದೆ.

ಅಂದು ಉಸ್ತುವಾರಿ ಸಚಿವರುಗಳು, ಜಿಲ್ಲಾ ಕಾರ್ಯಕರ್ತರ ಸಭೆ ನಡೆಸಿ, ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾ ಗುವಂತೆ ಸೂಚಿಸಬೇಕು. ಅಷ್ಟೇ ಅಲ್ಲ, ಸಾರ್ವಜನಿಕರಿಗೆ ತಲು ಪುವ ಕಾರ್ಯಕ್ರಮಗಳು ಯಾವ ಹಂತದಲ್ಲಿವೆ ಎಂಬುದರ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದೆ. ಒಂದೆಡೆ ಜನರಿಗೆ ತಲುಪಬಹುದಾದ ಕಾರ್ಯಕ್ರಮಗಳ ಉದ್ಘಾಟಿಸಲು ಪ್ರಧಾನಿ ಹಾಗೂ ಗೃಹ ಸಚಿವರು ಪ್ರತ್ಯೇಕ ಪ್ರವಾಸ ಕೈಗೊಂಡರೆ ನಡ್ಡಾ ಪಕ್ಷದ ಮುಖಂಡರನ್ನು ಸಂಘಟಿಸಲು ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ.

ಏ.17 ಮತ್ತು 18ರಂದು ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯ ಲಿದೆ. 2 ದಿನಗಳ ಕಾಲವೂ ನಡ್ಡಾ ಅಲ್ಲಿಯೇ ಉಳಿದು, ಚುನಾವಣಾ ಸಿದ್ಧತೆ, ಪಕ್ಷದ ಸಂಘಟನೆ, ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು, ರಾಜ್ಯ ಘಟಕ ಹೇಗೆ ಸಿದ್ಧತೆ ಮಾಡಿಕೊಂಡಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯುವುದಲ್ಲದೆ, ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಏಪ್ರಿಲ್ ನಂತರ ಮುಂದಿನ ಚುನಾವಣೆಯವರೆಗೂ ಪ್ರಧಾನಿ ಮತ್ತು ಅಮಿತ್ ಷಾ ತಿಂಗಳಿಗೊಮ್ಮೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ನಾಯಕರು ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರಮುಖ ಕಾರ್ಯಕ್ರಮಗಳನ್ನು ಉದ್ಘಾಟಿಸುವುದು, ಚುನಾವಣೆಯ ತಂತ್ರಗಾರಿಕೆಯ ಒಂದು ಭಾಗವಾಗಿದೆ. ಅಲ್ಲದೆ ಪ್ರತಿ ಭೇಟಿಯ ಸಂದರ್ಭದಲ್ಲೂ ಒಂದೊಂದು ಸಮಾಜವನ್ನು ಓಲೈಸಿಕೊಳ್ಳುವಂತೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇಂತಹದ್ದೇ ಕಾರ್ಯಕ್ರಮಗಳನ್ನು ಸಿದ್ಧಪಡಿಸುವಂತೆ ಪ್ರಧಾನಿ ಕಾರ್ಯಾಲಯ ಈಗಾಗಲೇ ಮುಖ್ಯಮಂತ್ರಿಯವರ ಕಾರ್ಯಾಲಯಕ್ಕೆ ಸಂದೇಶ ರವಾನೆ ಮಾಡಿದೆ.

ಪ್ರಧಾನಿಯವರ ಮೊದಲ ಭೇಟಿಯ ಸಂದರ್ಭದಲ್ಲೇ ಬೆಂಗಳೂರು ವಿಶ್ವವಿದ್ಯಾಲ ಯದ ಆವರಣದಲ್ಲಿ ಅಂಬೇಡ್ಕರ್-ಸ್ಕೂಲ್ ಆಫ್ ಅಕಾಡೆಮಿ, ಅಂದೇ ಬೆಂಗಳೂರು ಅರ್ಬನ್ ರೈಲ್ವೆಯ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ, ನಗರದ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಿದ್ದಾರೆ. ಇದಕ್ಕೂ ಮುನ್ನಾ ಅಮಿತ್ ಷಾ ಅವರು ಎರಡು ದಿನಗಳಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಹಾಗೂ ಬೆಂಗಳೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ 31 ರಂದು ನಗರಕ್ಕೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವು ನಾಯಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಲಿರುವ ಅಮಿತ್ ಷಾ, ಏ.1ರಂದು ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ 114ನೇ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ನೇರವಾಗಿ ಭಾರತ ರತ್ನ ವಿಶ್ವೇಶ್ವರಯ್ಯ ಅವರ ಹುಟ್ಟೂರು ಚಿಕ್ಕಬಳ್ಳಾಪುರದ ಮುದ್ದೇನ ಹಳ್ಳಿಯಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಅಂದು ಸಂಜೆ ನಗರದಲ್ಲಿ ರೈತರಿಗಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ಷೀರ ಅಭಿವೃದ್ಧಿ ಬ್ಯಾಂಕ್ ಹಾಗೂ ಯಶಸ್ವಿನಿ ಮರು ಉದ್ಘಾಟನೆ ಮಾಡಲಿದ್ದಾರೆ. ಇದೇ ರೀತಿ ಮುಂದಿನ ಚುನಾವಣೆ ವೇಳೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಈ ರಾಷ್ಟ್ರೀಯ ನಾಯಕರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು ಏ.5ರಂದು ಪ್ರಧಾನಿ ಮೋದಿಯವರು ಸರ್ಕಾರಿ ವಿಶೇಷ ಕಾರ್ಯಕ್ರಮಗಳ ಉದ್ಘಾಟನೆಗಾಗಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ಕೇಂದ್ರ ಸಚಿವ ಅಮಿತ್ ಷಾ ಅವರಿಂದ ಕ್ಷೀರ ಅಭಿವೃದ್ಧಿ ಬ್ಯಾಂಕ್ ಉದ್ಘಾಟನೆ. ಏಪ್ರಿಲ್ 1 ರಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಸಹಕಾರಿ ರಂಗದಲ್ಲಿ ಹಲವಾರು ಸುಧಾರಣೆಗಳನ್ನು ತರಬೇಕೆಂಬ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಷೀರ ಅಭಿವೃದ್ಧಿ ಬ್ಯಾಂಕ್ ಪ್ರಾರಂಭ ಮಾಡಲು ಉದ್ದೇಶಿಸಿದೆ. ಅದರ ಲಾಂಛನದ ಉದ್ಘಾಟನೆ ಮಾಡಲು ಬೃಹತ್ ಸಭೆ ಏರ್ಪಾಡು ಮಾಡಲಾಗುತ್ತಿದೆ. ಕ್ಷೀರ ಕ್ಷೇತ್ರದಲ್ಲಿ ಆರ್ಥಿಕ ಅಭಿವೃದ್ಧಿಗೆ ಇಂಬು ನೀಡಿ ಆರ್ಥಿಕ ಕ್ರಾಂತಿಯಾಗಲಿದೆ. ಇದರಿಂದ ರೈತರ ಆದಾಯ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಲಿದೆ. ರೈತರಿಗೆ ಆರ್ಥಿಕ ಸಹಾಯ ದೊರೆಯಲು ನೆರವಾಗಲಿದೆ. ಲಾಂಛನ ಹಾಗೂ ಯಶಸ್ವಿನಿ ಯೋಜನೆಯ ಉದ್ಘಾಟನೆಯನ್ನು ಅಮಿತ್ ಷಾ ನೆರವೇರಿಸಲಿದ್ದಾರೆ ಎಂದರು. ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ದೆಹಲಿಯಲ್ಲಿ ವರಿಷ್ಠರೊಂದಿಗೆ ಚರ್ಚೆಯಾಗಬೇಕು. ವರಿಷ್ಠರು ಕರೆದಾಗ ದೆಹಲಿಗೆ ಹೋಗುತ್ತೇನೆ.

Translate »