ಕೆಆರ್ ಕ್ಷೇತ್ರದ ಪ್ರತಿ ಮನೆಗೆ ತಲಾ ಎರಡು  ಆಯುರ್ವೇದ ಗಿಡ ನೀಡುವ ಅಭಿಯಾನಕ್ಕೆ ಚಾಲನೆ
ಮೈಸೂರು

ಕೆಆರ್ ಕ್ಷೇತ್ರದ ಪ್ರತಿ ಮನೆಗೆ ತಲಾ ಎರಡು ಆಯುರ್ವೇದ ಗಿಡ ನೀಡುವ ಅಭಿಯಾನಕ್ಕೆ ಚಾಲನೆ

June 6, 2021

ಮೈಸೂರು,ಜೂ.5(ಪಿಎಂ)- ವಿಶ್ವ ಪರಿಸರ ದಿನದ ಅಂಗವಾಗಿ ಶಾಸಕ ಎಸ್.ಎ.ರಾಮ ದಾಸ್ ನೇತೃತ್ವದಲ್ಲಿ ಶನಿವಾರ ಗಿಡ ನೆಡುವ ಕಾರ್ಯಕ್ರಮದ ಜೊತೆಗೆ ಕೆಆರ್ ಕ್ಷೇತ್ರದ ಪ್ರತಿ ಮನೆಗೆ ತಲಾ 2 ಆಯುರ್ವೇದ ಗಿಡಗಳನ್ನು ನೀಡುವ ಅಭಿಯಾನಕ್ಕೂ ಚಾಲನೆ ನೀಡಲಾಯಿತು. ಮೈಸೂರು ಮಹಾನಗರ ಪಾಲಿಕೆ ವಾರ್ಡ್ 56ರ ಕೃಷ್ಣಮೂರ್ತಿ ಪುರಂನ ಅನಂತಸ್ವಾಮಿ ಉದ್ಯಾನವನ ಮತ್ತು ಅಶೋಕಪುರಂನ ಡಾ.ಅಂಬೇಡ್ಕರ್ ಉದ್ಯಾನ ವನದಲ್ಲಿ ಸಸಿ ನೆಡಲಾಯಿತು. ಇದೇ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮ ದಾಸ್, ಇಂದು ವಿಶ್ವ ಪರಿಸರ ದಿನ ಇಂದಿಗೇ ಮಾತ್ರವೇ ಪರಿಸರ ಕಾಳಜಿ ಸೀಮಿತವಾಗ ಬಾರದು. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಪರಿಸರ ಸಂರಕ್ಷಣೆಗೆ ಹಲವು ಕಾರ್ಯಕ್ರಮಗಳನ್ನು ನೀಡಿದೆ. ಗ್ರೀನ್ ಸ್ಕಿಲ್ ಡೆವಲಪ್ಮೆಂಟ್, ನಮಾಮಿ ಗಂಗೆ ಸೇರಿದಂತೆ ಮಹತ್ವದ ಕಾರ್ಯಕ್ರಮಗಳನ್ನು ಅವರು ನೀಡಿದ್ದಾರೆ ಎಂದು ಹೇಳಿದರು.

ಕೃಷ್ಣಮೂರ್ತಿಪುರಂನಲ್ಲಿ ವಾಸವಾಗಿದ್ದ ಗಾಯಕ ಅನಂತಸ್ವಾಮಿ ಅವರ ಹೆಸರಲ್ಲಿರುವ ಪಾರ್ಕ್ ಅನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗುವುದು. ಆ ಮೂಲಕ ಅವರ ಹಾಡುಗಳ ಸದಾ ಕಾಲ ಪಾರ್ಕ್‍ನಲ್ಲಿ ಪ್ರಸಾರಪಡಿಸಲಾಗುವುದು. ಕ್ಷೇತ್ರದಲ್ಲಿರುವ 62 ಸಾವಿರ ಮನೆಗಳಿಗೆ ತಲಾ ಎರಡು ಆಯುರ್ವೇದ ಗಿಡಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು. ಮರಗಳನ್ನು ದೇವರಂತೆ ಕಾಣುವ ಸಂಸ್ಕøತಿ ನಮ್ಮದು. ಅರಳಿಮರವನ್ನು ವೈಜ್ಞಾನಿಕವಾಗಿ ವರದಾನವೆಂದು ಪರಿಗಣಿಸಲಾಗುತ್ತದೆ. ಈ ಪವಿತ್ರ ಮರವು ಹಗಲಿನ ವೇಳೆಯಲ್ಲಿ ಮಾತ್ರವಲ್ಲ, ರಾತ್ರಿಯೂ ಆಮ್ಲಜನಕ ಹೊರಹಾಕುತ್ತದೆ. ಇದು ಆಮ್ಲಜನಕದ ಮೂಲವೆಂದು ಗುರುತಿಸಲಾಗಿದೆ. ಅರಳಿ ಮರವು ತನ್ನ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧೀಕರಿಸುತ್ತದೆ. ಅಲ್ಲದೆ, ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತದೆ ಎಂದು ಮಾಹಿತಿ ನೀಡಿದರು. ನಗರಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಪಾಲಿಕೆಯ ನಾಮ ನಿರ್ದೇಶಿತ ಸದಸ್ಯರಾದ ಪಿ.ಟಿ.ಕೃಷ್ಣ, ಬಿಜೆಪಿ ಮುಖಂಡರಾದ ಕೀರ್ತಿರಾಜ್, ರಾಜೀವ್, ರವಿ, ಮಧು, ಕುಮಾರ್, ಜಿತೇಂದ್ರ, ಪ್ರವೀಣ್, ಶ್ರೀಧರ್ ಮತ್ತಿತರರು ಹಾಜರಿದ್ದರು.

Translate »