ಜೆಎಸ್‍ಎಸ್ ಅರ್ಬನ್‍ಹಾತ್‍ನಲ್ಲಿ  `ಗುಜರಾತ್ ಹ್ಯಾಂಡಿ ಕ್ರಾಫ್ಟ್ಸ್ ಉತ್ಸವ’ಕ್ಕೆ ಚಾಲನೆ
ಮೈಸೂರು

ಜೆಎಸ್‍ಎಸ್ ಅರ್ಬನ್‍ಹಾತ್‍ನಲ್ಲಿ `ಗುಜರಾತ್ ಹ್ಯಾಂಡಿ ಕ್ರಾಫ್ಟ್ಸ್ ಉತ್ಸವ’ಕ್ಕೆ ಚಾಲನೆ

July 19, 2021

ಮೈಸೂರು, ಜು.18(ವೈಡಿಎಸ್)- ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ 8 ದಿನಗಳ ಕಾಲ `ಗುಜರಾತ್ ಹ್ಯಾಂಡಿ ಕ್ರಾಫ್ಟ್ಸ್ ಉತ್ಸವ-2021’ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ಜೆಎಸ್‍ಎಸ್ ಅರ್ಬನ್ ಹಾತ್, ಗುಜರಾತ್ ರಾಜ್ಯ ಸರ್ಕಾರ ಅಂಗ ಸಂಸ್ಥೆಯಾದ ಇಂಡೆಕ್ಸ್ಟ್-ಸಿ ಸಹಯೋಗ ದಲ್ಲಿ ಜು.18ರಿಂದ 25ರವರೆಗೆ ಮೇಳವನ್ನು ಆಯೋ ಜಿಸಿದ್ದು, ಗುಜರಾತ್‍ನ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲರಾಗಿರುವ 50ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದು, ಕೊರೊನಾದ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೇಳದಲ್ಲಿ ಗುಜರಾತ್‍ನ ಕುಶಲಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್‍ಶೀಟ್‍ಗಳು, ಟವಲ್‍ಗಳು, ಕುಶನ್ ಕವರ್‍ಗಳು, ಪರಿಸರ ಸ್ನೇಹಿ ಆಭರಣ ಗಳು, ಡ್ರೆಸ್ ಮೆಟೀರಿಯಲ್‍ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು ಇನ್ನಿತರೆ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿವೆ.

8 ದಿನಗಳ ಮೇಳವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ತೆರೆದಿದ್ದು, ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಖರೀದಿಸಬಹುದಾಗಿದೆ. ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕøತಿಯ ಉಡುಗೆ-ತೊಡುಗೆಗಳು ಮತ್ತು ಅಲಂಕಾರಿಕ ವಸ್ತುಗಳು ದೊರೆಯಲಿದೆ.

ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮೇಳಕ್ಕೆ ಚಾಲನೆ ನೀಡಿದರು. ಇನ್‍ಡೆಕ್ಸ್ಟ್-ಸಿ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಎಂ.ಶುಕ್ಲ, ಮಾರುಕಟ್ಟೆ ವ್ಯವಸ್ಥಾಪಕ ಡಾ.ಎಸ್.ಡಿ.ಮಕ್ವಾನ, ಜೆಎಸ್‍ಎಸ್ ಮಹವಿದ್ಯಾ ಪೀಠದ ಹಣಕಾಸು ವಿಭಾಗದ ನಿರ್ದೇಶಕ ಎಸ್.ಪುಟ್ಟಸುಬ್ಬಪ್ಪ, ಲೆಕ್ಕ ಮತ್ತು ಲೆಕ್ಕಪರಿಶೋಧನಾ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನಂ, ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಹೆಚ್.ಆರ್. ಮಹದೇವಸ್ವಾಮಿ, ರಾಕೇಶ್ ರೈ ಉಪಸ್ಥಿತರಿದ್ದರು.

ಹಾಡಿಗೆ ಹೆಜ್ಜೆ ಹಾಕಿದ ಡಿಸಿ: ಗುಜರಾತ್ ಹ್ಯಾಂಡಿ ಕ್ರಾಫ್ಟ್ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಗುಜರಾತ್ ಹಾಡಿಗೆ ಹೆಜ್ಜೆ ಹಾಕಿ ಸಂತಸಪಟ್ಟರು.

Translate »