ತುಳಸಿದಾಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಹೆರಿಗೆ ಆಸ್ಪತ್ರೆಗೆ ಚಾಲನೆ
ಮೈಸೂರು

ತುಳಸಿದಾಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಹೆರಿಗೆ ಆಸ್ಪತ್ರೆಗೆ ಚಾಲನೆ

May 31, 2021

ಮೈಸೂರು, ಮೇ 30(ಎಂಟಿವೈ)- ನೂತನ ಕಟ್ಟಡವನ್ನೊಳ ಗೊಂಡಿದ್ದ ಸೇಟ್ ಮೋಹನ್‍ದಾಸ್ ತುಳಸಿದಾಸ್ ಆಸ್ಪತ್ರೆ ಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗಾಗಿ 50 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಎಸ್‍ಎಂಟಿ ಆಸ್ಪತ್ರೆ ನೂತನ ಕಟ್ಟಡದಲ್ಲಿ ಆರಂಭಿಸಿರುವ ಕೋವಿಡ್-19 ಹೆರಿಗೆ ಆಸ್ಪತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ತುಳಸಿದಾಸ್ ಹೆರಿಗೆ ಆಸ್ಪತ್ರೆಯ ನೂತನ ಕಟ್ಟಡವನ್ನು ಈಗಾಗಲೇ ಕೋವಿಡ್ ಕೇರ್ ಸೆಂಟರ್, `ಕೋವಿಡ್ ಮಿತ್ರ’ಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆಗೆ ಸೌಲಭ್ಯ ಬೇಕಾದ ಹಿನ್ನೆಲೆಯಲ್ಲಿ ಇದೀಗ 50 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಇದರಿಂದ ಸೋಂಕಿಗೆ ತುತ್ತಾದ ಗರ್ಭಿಣಿಯ ರಿಗೆ ನೆರವಾಗಲಿದೆ ಎಂದರು. ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಯನ್ನು ಒಳಗೊಂಡಿರುವ ಸುಸಜ್ಜಿತ ಕಟ್ಟಡದಲ್ಲಿ ಸದ್ಯಕ್ಕೆ ಹೆರಿಗೆ ಆಸ್ಪತ್ರೆ ಆರಂಭಿಸಲು ಬೇಕಾದ ಉಪಕರಣ ಸೇರಿದಂತೆ ಇನ್ನಿತರ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಸಿಬ್ಬಂದಿ ಕೊರತೆ ಇರುವುದನ್ನು ಈ ಕ್ಷೇತ್ರದ ಶಾಸಕ ಎಸ್.ಎ.ರಾಮ ದಾಸ್ ಗಮನಕ್ಕೆ ತಂದಿದ್ದಾರೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಗಮನ ಸೆಳೆದು ತುಳಸಿ ದಾಸ್ ಹೆರಿಗೆ ಆಸ್ಪತ್ರೆಗೆ ಬೇಕಾಗುವ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

280 ಮಕ್ಕಳಿಂದ ಅರ್ಜಿ: ಕೋವಿಡ್‍ನಿಂದ ಪೋಷಕರು ಮೃತರಾಗಿ ಅನಾಥವಾಗಿರುವ ಮಕ್ಕಳ ಆಶ್ರಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ
ಕಾರ್ಯಕ್ರಮ ರೂಪಿಸಿದೆ. ಈಗಾಗಲೇ ಸುತ್ತೂರು ಶ್ರೀಗಳು ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡಿದ್ದ ಮಕ್ಕಳಿಗೆ ಆಶ್ರಯ ನೀಡಲು ಘೋಷಿಸಿದ್ದರು. ಇದರಿಂದ ರಾಜ್ಯದಾದ್ಯಂತ ಪೋಷಕರನ್ನು ಕಳೆದುಕೊಂಡ 280 ಮಂದಿ ಮಕ್ಕಳು ಜೆಎಎಸ್‍ಎಸ್ ಸಂಸ್ಥೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಬಂದಿದೆ. ಮೈಸೂರು ಜಿಲ್ಲೆಯಲ್ಲಿ ಎಷ್ಟು ಮಂದಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಕೋವಿಡ್ ಸೋಂಕಿಗೆ ಗುರಿಯಾದ ಗರ್ಭಿಣಿಯರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಸ್ತುತ ಒಂಟಿಕೊಪ್ಪಲಿನ ನಾಗಮ್ಮ ಆಸ್ಪತ್ರೆ ಮೇಲೆ ಹೆಚ್ಚಿನ ಒತ್ತಡ ಪ್ರಾರಂಭವಾಗಿದೆ. ಈ ಹಿನ್ನೆಲೆ ತುಳಸಿದಾಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಯರಿಗೆ 50 ಹಾಸಿಗೆ ಮೀಸಲಿಡಲಾಗಿದೆ. ನಗರದಲ್ಲಿ ಪ್ರಸ್ತುತ 30 ಗರ್ಭಿಣಿಯರಿಗೆ ಸೋಂಕು ಕಂಡು ಬಂದಿದೆ. ಮನೆ ಮನೆ ಸರ್ವೆಯಿಂದ ಮತ್ತಷ್ಟು ಗರ್ಭಿಣಿಯರು ಪತ್ತೆಯಾಗುವ ನಿರೀಕ್ಷೆ ಇದ್ದು, ಅವರಿಗೆ ಇಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕೆ.ಆರ್.ಆಸ್ಪತ್ರೆ ಡೀನ್ ಡಾ.ಸಿ.ಪಿ. ನಂಜರಾಜ್, ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕಿ ಡಾ.ಸುಧಾ ರುದ್ರಪ್ಪ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಡಿಹೆಚ್‍ಓ ಡಾ.ಟಿ.ಅಮರನಾಥ್, ಬೆಡ್ ಮ್ಯಾನೇಜ್‍ಮೆಂಟ್ ನೋಡಲ್ ಅಧಿಕಾರಿ ಡಾ.ಎಲ್.ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »