ಬೆಂಗಳೂರು, ಸೆ. 12- ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ನಡೆಸಿದ ಸಾಮಾಜಿಕ ಕಾರ್ಯಕರ್ತ, ಚಲನಚಿತ್ರ ವಿತರಕ ಪ್ರಶಾಂತ್ ಸಂಬರಗಿ ವಿಚಾರಣೆ ಮುಕ್ತಾಯವಾಗಿದೆ. ವಿಚಾರಣೆ ಮುಗಿಸಿ ಸಿಸಿಬಿ ಕಚೇರಿಯಿಂದ ಹೊರಬಂದ ಸಂಬರಗಿ ಸುದ್ದಿಗಾರರೊಡನೆ ಮಾತನಾಡಿ, ಸಿಸಿಬಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ನನ್ನ ಬಳಿಯಿದ್ದ ಸಾಕ್ಷ್ಯಗಳನ್ನು ನೀಡಿದ್ದೇನೆ. ಶೇಕ್ ಫಾಜಿಲ್ ಹಾಗೂ ಶಾಸಕ ಜಮೀರ್ ಅಹಮದ್ ನಂಟಿಗೆ ಸಂಬಂಧಿಸಿ ವಿಚಾರಣೆ ಮಾಡುವಂತೆ ಸಿಸಿಬಿಗೆ ಮನವಿ ಮಾಡಿ ದ್ದೇನೆ ಎಂದರು. ಕೊಲಂಬೋದ ಕ್ಯಾಸಿನೋಗೆ ಹೋಗಿರುವುದಾಗಿ ಸ್ವತಃ ಜಮೀರ್ ಅಹಮದ್ ಒಪ್ಪಿಕೊಂಡಿರುವ ಕಾರಣ ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ನಟಿ ಸಂಜನಾ ಅವರ ಬಗ್ಗೆ ಯಾವ ದಾಖಲೆ ನೀಡಿಲ್ಲ, ಐಟಿ, ಇಡಿ ಕುರಿತು ಏನನ್ನೂ ಮಾತನಾಡಿಲ್ಲ. ಜೊತೆಗೆ ಯಾವುದೇ ನಟ, ನಟಿಯರ ಬಗ್ಗೆ ನಾನು ದಾಖಲೆ ನೀಡಿಲ್ಲ. ನಾನು ಯಾವುದೇ ಪಕ್ಷದ ವಕ್ತಾರನಾಗಿ ಕೆಲಸ ಮಾಡುತ್ತಿಲ್ಲ. ರಾಜಕೀಯ ಪ್ರೇರಿತವಾಗಿ ಈ ಅಭಿಯಾನ ನಡೆಸುತ್ತಿಲ್ಲ ಎಂದು ಸಹ ಅವರು ಹೇಳಿದರು. ತಮ್ಮ ವಿರುದ್ಧದ ಎಫ್ ಐಆರ್ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತೇನೆ.ನಾನು ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ, ಸದ್ಯ ಯಾವುದೇ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ, ಜಮೀರ್ ಮತ್ತು ಫಾಜಿಲ್ ಮದ್ಯದ ವ್ಯವಹಾರದ ಬಗ್ಗೆ ಹೆಚ್ಚಿನ ಚರ್ಚೆ ಆಗಬೇಕು ಎಂದು ಸಂಬರಗಿ ಹೇಳಿದರು. ಇದಕ್ಕೂ ಮುನ್ನ ಜಮೀರ್ ಅಹ್ಮದ್ ಖಾನ್ 50ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್, ಜಾಕಿ ಶ್ರಾಫ್, ಶಕ್ತಿ ಕಪೂರ್, ಅಫ್ತಾಬ್ ಶಿವದಾಸನಿ ಹಲವರು ಭಾಗಿಯಾಗಿದ್ದರು ಎಂದು ಸಂಬರಗಿ ಹೊಸ ಬಾಂಬ್ ಸಿಡಿಸಿದ್ದರು.