ದಸರಾ ಗಜಪಡೆ, ಕುದುರೆಗಳಿಗೆ ಮೊದಲ ಸಿಡಿಮದ್ದು ತಾಲೀಮು
ಮೈಸೂರು

ದಸರಾ ಗಜಪಡೆ, ಕುದುರೆಗಳಿಗೆ ಮೊದಲ ಸಿಡಿಮದ್ದು ತಾಲೀಮು

September 13, 2022

ಮೈಸೂರು,ಸೆ.12(ಎಂಟಿವೈ)- ಜಂಬೂಸವಾರಿ ಯಲ್ಲಿ ಪಾಲ್ಗೊಳ್ಳುವ ಗಜಪಡೆಯ 14 ಆನೆ ಹಾಗೂ ಅಶ್ವಾರೋಹಿ ಪಡೆಯ 44 ಕುದುರೆಗಳಿಗೆ ಸೋಮ ವಾರ ಮೊದಲ ಸಿಡಿಮದ್ದು ತಾಲೀಮು ಯಶಸ್ವಿ ಯಾಗಿ ನಡೆಯಿತು. ಮೈಸೂರು ಅರಮನೆಯ ವರಹಾ ದ್ವಾರದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಇಂದು ಮಧ್ಯಾಹ್ನ ಈ ವರ್ಷದ ಮೊದಲು ಸಿಡಿ ಮದ್ದು ತಾಲೀಮು ನಡೆಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯ 38 ಸಿಬ್ಬಂದಿ ತಂಡ 7 ಫಿರಂಗಿ ಬಳಸಿ, ಮೂರು ಹಂತದಲ್ಲಿ 21 ಸುತ್ತು ಕುಶಾಲ ತೋಪು ಸಿಡಿಸಿದರು. ಈ ವೇಳೆ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಎಫ್ ಡಾ.ವಿ.ಕರಿಕಾಳನ್, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಸಿಎಆರ್ ಡಿಸಿಪಿ ಶಿವರಾಜ್ ಉಪಸ್ಥಿತರಿದ್ದು, ದಸರಾ ಗಜಪಡೆ ಹಾಗೂ ಅಶ್ವಾರೋಹಿ ದಳದ ಕುದುರೆ ಗಳ ವರ್ತನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ಇಂದು ನಡೆದ ಮೊದಲ ತಾಲೀಮಿನಲ್ಲಿ ಮೂರು ಹಂತದಲ್ಲಿ ತಲಾ 7 ಸಿಡಿಮದ್ದು ಸಿಡಿಸಲಾಯಿತು. ಒಂದೇ ಬಾರಿ 21 ಸುತ್ತು ಸಿಡಿಸಿದರೆ ಆನೆ, ಕುದುರೆ ಗಳು ಬೆದರಬಹುದು ಎಂಬ ಉದ್ದೇಶದಿಂದ ಒಂದರಿಂದ ಮತ್ತೊಂದಕ್ಕೆ 3-4 ನಿಮಿಷ ಬಿಟ್ಟು ಸಿಡಿಸಲಾಯಿತು. ಈ ವೇಳೆ ಹೊಸ ಆನೆಗಳಾದ ಪಾರ್ಥಸಾರಥಿ, ಶ್ರೀರಾಮ, ಸುಗ್ರೀವ, ಭೀಮ, ಧನಂಜಯ ಆನೆಗಳು ಬೆಚ್ಚಿ ಘೀಳಿಟ್ಟವು.

ಬೆದರಿದ ಸುಗ್ರೀವ, ಪಾರ್ಥಸಾರಥಿ: ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗ ವಹಿಸಲಿರುವ ಶ್ರೀರಾಮ, ಸುಗ್ರೀವ, ಅತೀ ಚಿಕ್ಕ ವಯಸ್ಸಿನ ಪಾರ್ಥಸಾರಥಿ ಮತ್ತು ಎರಡನೇ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಭೀಮ, ಧÀನಂಜಯ, ಲಕ್ಷ್ಮೀ ಭಾರೀ ಶಬ್ದಕ್ಕೆ ಬೆದರಿ, ಘೀಳಿಟ್ಟವು. ಮುಂಜಾ ಗ್ರತಾ ಕ್ರಮವಾಗಿ ವಿಜಯ, ಶ್ರೀರಾಮ, ಸುಗ್ರೀವ ಕಾಲಿಗೆ ಸರಪಳಿ ಕಟ್ಟಿ ಪ್ರತ್ಯೇಕವಾಗಿ ನಿಲ್ಲಿಸಲಾಗಿತ್ತು. ಮೊದಲ ಸುತ್ತು ಸಿಡಿಸುತ್ತಿದ್ದಂತೆ, ಬೆಚ್ಚಿ, ಅತ್ತಿಂದಿತ್ತ ಹೆಜ್ಜೆ ಹಾಕಿದವು. ಈ ವೇಳೆ ಮಾವುತರು ನಿಯಂತ್ರಿ ಸಿದರು. ಕಳೆದ ಎರಡು ವರ್ಷಗಳಿಂದ ಭಾಗವಹಿ ಸುತ್ತಿರುವ ಧನಂಜಯ ಈ ಬಾರಿಯೂ ಬೆದರಿದ.

ಜಗ್ಗದ ಅಭಿಮನ್ಯು, ಅರ್ಜುನ : ಸಿಡಿಮದ್ದು ತಾಲೀಮಿ ನಲ್ಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಮತ್ತು ಮಾಜಿ ಕ್ಯಾಪ್ಟನ್ ಅರ್ಜುನ ಜಗ್ಗಲಿಲ್ಲ. ಜಂಬೂ ಸವಾರಿ ವೇಳೆ ಸಿಡಿಮದ್ದು ಸಿಡಿಸುತ್ತಿದ್ದಂತೆ ಅಂಬಾರಿ ಹೊತ್ತು ಮುಂದಡಿಯಿಡುವಂತೆ ತಾಲೀಮಿನಲ್ಲೂ ಕುಶಾಲತೋಪು ಸಿಡಿಸಿದ ಬಳಿಕ ಅಭಿಮನ್ಯು ಹಾಗೂ ಅರ್ಜುನ ಫಿರಂಗಿಗಳತ್ತ ಹೆಜ್ಜೆ ಹಾಕಿದವು. ಇದೇ ಮೊದಲ ಬಾರಿ ಜಂಬೂಸವಾರಿಯಲ್ಲಿ ಭಾಗವಹಿ ಸಲಿರುವ ಮಹೇಂದ್ರ ಬೆಚ್ಚದೆ ಗಮನ ಸೆಳೆದ. ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಅರ್ಜುನ ನೊಂದಿಗೆ ಗೋಪಾಲಸ್ವಾಮಿ, ಧÀನಂಜಯ, ಗೋಪಿ, ಮಹೇಂದ್ರ, ಭೀಮ, ಸುಗ್ರೀವ, ಶ್ರೀರಾಮ, ಪಾರ್ಥ ಸಾರಥಿ ಹಾಗೂ ಕುಮ್ಕಿ ಆನೆಗಳಾದ ಕಾವೇರಿ, ಚೈತ್ರ, ಲಕ್ಷ್ಮೀ ಹಾಗೂ ವಿಜಯ ಆನೆಗಳು ಪಾಲ್ಗೊಂಡಿದ್ದವು.

ಬೆದರಿದ ಕುದುರೆ : ಸಿಡಿಮದ್ದು ತಾಲೀಮಿನ ವೇಳೆ ಒಂದೆಡೆ ಆನೆ ಮತ್ತೊಂದೆಡೆ ಅಶ್ವದಳ ಕುದುರೆಗಳ ನಿಲ್ಲಿಸಲಾಗಿತ್ತು. ಈ ವೇಳೆ ಅಶ್ವದಳದ ಕುದುರೆಯೊಂದು ಗಾಬರಿಯಿಂದ ಆನೆಗಳತ್ತ ಸಾಗಿತು. ಇದರಿಂದ ವಿಚಲಿತಗೊಂಡು ಆನೆಗಳು ಘೀಳಿಟ್ಟವು. ಕೆಲಕ್ಷಣ ಆತಂಕದ ವಾತಾವರಣ ಸೃಷ್ಟಿಯಾಯಿತು. ಆದರೆ ಮಾವುತರು, ಕಾವಾಡಿಗಳು ಆನೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಇತ್ತ ಅಶ್ವದಳ ಸಿಬ್ಬಂದಿಯೂ ಕುದುರೆಯನ್ನು ನಿಯಂತ್ರಿಸಿ ಬೇರೆ ಕಡೆಗೆ ಕರೆದೊಯ್ದು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಮಹೇಂದ್ರ ಬೆಸ್ಟ್: ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ನಾಲ್ಕು ಹೊಸ ಆನೆಗಳ ಪೈಕಿ ಮಹೇಂದ್ರ ಆನೆ ಸಿಡಿಮದ್ದು ತಾಲೀಮಿನ ಭಾರಿ ಶಬ್ದಕ್ಕೆ ಒಂದಿಷ್ಟೂ ಜಗ್ಗದೆ ನೆರೆದವರಲ್ಲಿ ಅಚ್ಚರಿ ಮೂಡಿಸಿದ. ಸೌಮ್ಯ ಸ್ವಭಾವದ ಮಹೇಂದ್ರ, ಸಿಡಿಮದ್ದು ತಾಲೀಮಿನಲ್ಲಿ ಧÉೈರ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದ. ಭವಿಷ್ಯದ ಕುಮ್ಕಿ ಆನೆ ಎನಿಸಿರುವ ಲಕ್ಷ್ಮೀ ವರ್ತನೆಯಲ್ಲೂ ಸುಧಾರಣೆ ಕಂಡಿದೆ. ಕಳೆದ ಬಾರಿ ಸಿಡಿಮದ್ದು ತಾಲೀಮಿಗೆ ಲಕ್ಷ್ಮಿ ಆನೆ ಬೆಚ್ಚಿತ್ತು. ಹೆಣ್ಣಾನೆಗಳಲ್ಲೇ ಕಿರಿಯಳಾದ 22 ವರ್ಷದ ಲಕ್ಷ್ಮಿ, ಈ ಬಾರಿ ಸಿಡಿಮದ್ದಿನ ತಾಲೀಮಿನಲ್ಲಿ ಸಣ್ಣದಾಗಿ ಬೆದರಿದ್ದನ್ನು ಬಿಟ್ಟರೆ, ಉಳಿದಂತೆ ಅದರ ವರ್ತನೆ ಮೆಚ್ಚುಗೆಯಾಯಿತು. ಆದರೆ ಎರಡನೇ ಬಾರಿಗೆ ದಸರಾ ಉತ್ಸವದಲ್ಲಿ ಭಾಗಿಯಾಗಿರುವ ಭೀಮ ಘೀಳಿಟ್ಟಿದ್ದು ಅಚ್ಚರಿಗೆ ಕಾರಣವಾಗಿದೆ. ತಾಲೀಮು ಸಂದಭರ್Àದಲ್ಲಿ ಆರ್‍ಎಫ್‍ಓ ಸಂತೋಷ್ ಹೂಗಾರ್, ಪಶು ವೈದ್ಯ ಡಾ.ಮುಜೀಬ್ ಸೇರಿದಂತೆ ಹಲವರು ಇದ್ದರು.

Translate »