ಚಾಮುಂಡೇಶ್ವರಿ ದೇವಸ್ಥಾನಕ್ಕೆ ದೇವಿಯ  ಉತ್ಸವ ಮೂರ್ತಿ ಸ್ಥಳಾಂತರ
ಮೈಸೂರು

ಚಾಮುಂಡೇಶ್ವರಿ ದೇವಸ್ಥಾನಕ್ಕೆ ದೇವಿಯ ಉತ್ಸವ ಮೂರ್ತಿ ಸ್ಥಳಾಂತರ

September 13, 2022

ಮೈಸೂರು, ಸೆ.12(ಎಸ್‍ಬಿಡಿ)- ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಚಾಮುಂಡಿಬೆಟ್ಟದ ದೇವಾಲಯಕ್ಕೆ ಸೋಮ ವಾರ ತರಲಾಯಿತು. ಅರಮನೆ ಆವರಣದಲ್ಲಿದ್ದ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರು ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದ ಇಓ ಗೋವಿಂದರಾಜು ಅವರಿಗೆ ಹಸ್ತಾಂತರ ಮಾಡಿದರು. ಈ ವೇಳೆ ಮುಜರಾಯಿ ತಹಸೀಲ್ದಾರ್ ಕೃಷ್ಣ, ಅರಮನೆ ಎಇಇ ಸತೀಶ್ ಮತ್ತಿತರರಿದ್ದರು. ನಾಡದೇವಿ ಚಾಮುಂಡೇಶ್ವರಿ
ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದ ಆಗಮಿಕರು ವಿಶೇಷ ಪೂಜೆ ಸಲ್ಲಿಸಲಿದ್ದು, ಈ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕವೇ ದಸರಾ ಉತ್ಸವಕ್ಕೆ ಚಾಲನೆ ದೊರಕಲಿದೆ. ನಂತರ ಜಂಬೂಸವಾರಿ ದಿನ ತಾಯಿಯ ಉತ್ಸವ ಮೂರ್ತಿಯನ್ನು ಅರಮನೆ ಆವರಣಕ್ಕೆ ತಂದು, ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ವಿಜಯದಶಮಿ ಮೆರವಣಿಗೆ ಮುಕ್ತಾಯವಾದ ಬಳಿಕ ಉತ್ಸವ ಮೂರ್ತಿಯನ್ನು ಮತ್ತೆ ಅರಮನೆ ಆವರಣದಲ್ಲಿ ಇಡಲಾಗುತ್ತದೆ. ಕಳೆದ ಬಾರಿ ಚಾಮುಂಡಿ ಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇನ್ನಿತರ ಗಣ್ಯರು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಅಲಂಕೃತ ವಾಹನದಲ್ಲಿ ನಾದಸ್ವರ, ಪೆÇಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡ, ವೇದಘೋಷದೊಂದಿಗೆ ಮೆರವಣಿಗೆಯಲ್ಲಿ ತರಲಾಗಿತ್ತು. ದಾರಿಯುದ್ದಕ್ಕೂ ಭಕ್ತರು ಇಕ್ಕೆಲಗಳಲ್ಲಿ ನಿಂತು ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡಿದ್ದರು.

Translate »