ದಸರಾದಲ್ಲಿ ಹಳ್ಳಿಗರಿಗೂ ಯೋಗಾ ಯೋಗ!
ಮೈಸೂರು

ದಸರಾದಲ್ಲಿ ಹಳ್ಳಿಗರಿಗೂ ಯೋಗಾ ಯೋಗ!

September 13, 2022

ಮೈಸೂರು, ಸೆ.12(ಎಂಕೆ)- ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿನ ಪ್ರಮುಖ ಆಕರ್ಷಣೆಯಾದ ‘ಯೋಗ ದಸರಾ’ ಸಂಭ್ರಮ ಈ ಬಾರಿ ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗಲಿದೆ. ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಬಳಿಕ ಯೋಗಾಸಕ್ತರ ಸಂಖ್ಯೆ ಹೆಚ್ಚಾಗಿದ್ದು, ಯೋಗ ದಸರಾ ಆಚರಣೆ ಮೂಲಕ ನಗರದಿಂದ ಗ್ರಾಮೀಣ ಭಾಗದ ಜನರಿಗೂ ಯೋಗಾಸನದ ಮಹತ್ವ ಹಾಗೂ ಅದರ ಉಪಯುಕ್ತತೆ ಕುರಿತು ಅರಿವು ಮೂಡಿ ಸಲು ತೀರ್ಮಾನಿಸಲಾಗಿದೆ. ನಗರ ಪ್ರದೇಶಕ್ಕೇ ಸೀಮಿತವಾ ಗಿದ್ದ ಯೋಗ ದಸರಾ ಆಚರಣೆ ಈ ವರ್ಷ ನಂಜನಗೂ ಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಈ ಮೂಲಕ ನಂಜನಗೂಡು ಹಾಗೂ ಸುತ್ತ ಮುತ್ತಲಿನಲ್ಲಿರುವ ಗ್ರಾಮಸ್ಥರು ಯೋಗ ದಸರಾ ಸಂಭ್ರಮ ದಲ್ಲಿ ಭಾಗಿಯಾಗಲಿದ್ದಾರೆ. ಮೊದಲ ಬಾರಿಗೆ ಗ್ರಾಮೀಣ ಪ್ರದೇಶದ ಜನರು ಯೋಗ ದಸರಾದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಯೋಗ ದಸರಾ ಉಪಸಮಿತಿ ವಿಶೇಷಾಧಿಕಾರಿಯೂ ಆದ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕಿ ಸೀಮಂತಿನಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಮೈಸೂರಿನ ಓವೆಲ್ ಮೈದಾನದಲ್ಲಿ ಸೆ.26 ರಂದು ಯೋಗ ದಸರಾ ಉದ್ಘಾಟನೆ ಯಾಗಲಿದ್ದು, 7 ದಿನಗಳ ಕಾಲ ನಡೆಯಲಿದೆ. ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಹೊರತುಪಡಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳು ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ನಡೆಯಲಿದ್ದು, ರಾಜ್ಯ-ರಾಷ್ಟ್ರಮಟ್ಟದ ಯೋಗಪಟುಗಳು ಭಾಗವಹಿಸಲಿದ್ದಾರೆ ಎಂದರು.

ಯೋಗ ವಾಹಿನಿ, ಯೋಗ ಸಂಭ್ರಮ: ಸೆ.27ರಂದು ಜನಪ್ರತಿನಿಧಿಗಳು, ಮುದ್ರಣ ಹಾಗೂ ದೃಶ್ಯ ಮಾಧ್ಯಮ ಪ್ರತಿನಿಧಿಗಳಿಗಾಗಿ ಹಮ್ಮಿಕೊಂಡಿರುವ ‘ಯೋಗ ವಾಹಿನಿ’ ಕಾರ್ಯಕ್ರಮ ಸರಸ್ವತಿಪುರಂನಲ್ಲಿರುವ ಜವರೇಗೌಡ ಉದ್ಯಾನವನದಲ್ಲಿ ನಡೆಯಲಿದೆ. ಹಾಗೆಯೇ ಸೆ.28 ರಂದು ಅರಮನೆ ಆವರಣದಲ್ಲಿ ‘ಯೋಗ ಸಂಭ್ರಮ’ ನಡೆಯಲಿದ್ದು, ನೂರಾರು ಯೋಗ ಪಟುಗಳಿಂದ 75 ಬಗೆಯ ವಿಶಿಷ್ಠ ಯೋಗಾಸನಗಳ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು. ಸೆ.29 ರಂದು ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿರುವ ಕಾಳಿಂಗರಾವ್ ವೇದಿಕೆಯಲ್ಲಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ನಡೆಯಲಿದೆ. 3 ರಿಂದ 80 ವರ್ಷದವರೆಗಿನ ಯೋಗಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೂ ಯೋಗಾಸನ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಯೋಗ ಸರಪಳಿ, ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ: ಅರಮನೆ ಆವರಣದಲ್ಲಿ ಸೆ.30 ರಂದು 2 ಸಾವಿರಕ್ಕೂ ಹೆಚ್ಚು ಯೋಗಪಟುಗಳಿಂದ ಯೋಗ ಸರಪಳಿ ಕಾರ್ಯಕ್ರಮ ನಡೆಯಲಿದೆ. ಅ.3 ರಂದು ಚಾಮುಂಡಿಬೆಟ್ಟದ ಮೇಲೆ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ಆಯೋಜಿಸಲಾಗುವುದು. ದುರ್ಗಾ ನಮಸ್ಕಾರದಲ್ಲಿ ಭಾಗವಹಿಸುವವರ ಚಾಮುಂಡಿಬೆಟ್ಟವನ್ನು ಕಾಲ್ನಡಿಯಲ್ಲಿ ಹತ್ತಿ ಯೋಗಾಸನ ಮಾಡಬೇಕಾಗಿದೆ ಎಂದರು.

ನಂಜನಗೂಡಿನಲ್ಲಿ ಯೋಗ: ಅ.1 ರಂದು ಇದೇ ಮೊದಲ ಬಾರಿಗೆ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಆಯೋಜಿಸಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷ ಇದೆ. ಈ ಮೂಲಕ ನಗರಕ್ಕೆ ಸೀಮಿತವಾಗಿದ್ದ ಯೋಗ ಪ್ರದರ್ಶನ ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗಲಿದ್ದು, ಯೋಗದ ಉಪಯುಕ್ತತೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಉಪಹಾರ ವ್ಯವಸ್ಥೆ: 7 ದಿನಗಳ ಯೋಗ ದಸರಾದಲ್ಲಿ ಭಾಗವಹಿಸುವವರಿಗೆ ಬೆಳಗಿನ ಉಪಹಾರ, ಹಣ್ಣು-ಹಾಲು ವಿತರಣೆಗೆ ಚಿಂತನೆ ನಡೆಸಲಾಗಿದೆ. ವಿಶ್ವ ಯೋಗ ದಿನಾಚರಣೆ ಬಳಿಕ ಯೋಗ ಆಸಕ್ತರ ಸಂಖ್ಯೆ ಹೆಚ್ಚಾಗಿದ್ದು, ಈಗಾಗಲೇ ಸಾಕಷ್ಟು ಮಂದಿ ಯೋಗ ಪಟುಗಳು, ತರಬೇತುದಾರರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.

Translate »