ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದ್ದಾರೆ ಪುನೀತ್ ರಾಜ್‍ಕುಮಾರ್
ಮೈಸೂರು

ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದ್ದಾರೆ ಪುನೀತ್ ರಾಜ್‍ಕುಮಾರ್

August 21, 2022

ಮೈಸೂರು, ಆ.20(ಜಿಎ)- ಈ ಬಾರಿ ದಸರಾ ಮಹೋತ್ಸ ವದ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದ್ದಾರೆ ನಟ ಪುನೀತ್ ರಾಜ್‍ಕುಮಾರ್….! ಆಜಾದಿ ಕಾ ಅಮೃತ ಮಹೋತ್ಸವದ ಮಹತ್ವವೂ ಪುಷ್ಪ ಕಲಾಕೃತಿ ಮೂಲಕ ಎಲ್ಲರ ಗಮನ ಸೆಳೆಯಲಿದೆ.

ಕೊರೊನಾ ಬಾಧೆಯಿಂದ ಕಳೆದ ಎರಡು ವರ್ಷಗಳಿಂದ ವಿಶ್ವವಿಖ್ಯಾತ ದಸರಾ ಮಹೋತ್ಸವ ಸರಳವಾಗಿ ಆಚರಿಸಲ್ಪಟ್ಟಿತ್ತು. ಆದರೆ, ಈ ಬಾರಿ ಅದ್ಧೂರಿ ದಸರಾ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಮೈಸೂರಿಗೆ ಗಜಪಡೆ ಆಗಮನ ದಿಂದ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ನಟ ಪುನೀತ್ ರಾಜ್ ಕುಮಾರ್ ಪುಷ್ಪಗಳಲ್ಲಿ ಅರಳಲಿದ್ದು, 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ದೇಶಕ್ಕೆ ಆಜಾದಿ ಕಾ ಅಮೃತ ಮಹೋ ತ್ಸವದ ಮಹತ್ವವನ್ನು ಸಾರಲಿದೆ. ಮೈಸೂರು ದಸರಾ ಎಂದ ತಕ್ಷಣ ಎಲ್ಲರ ನೆನಪಿಗೆ ಬರುವುದು ವಿಜಯದಶಮಿ ದಿನದ ಜಂಬೂಸವಾರಿ. ಅದಕ್ಕೂ ಮುನ್ನ ಇಡೀ ಮೈಸೂರು ನವವಧು ವಿನ ರೀತಿ ಶೃಂಗಾರಗೊಂಡು ಎಲ್ಲರನ್ನು ಸೆಳೆಯುತ್ತದೆ. ನವರಾತ್ರಿಯ 9 ದಿನಗಳು ಮೈಸೂರಿನ ಯಾವ ದಿಕ್ಕಿನಲ್ಲಿ ನೋಡಿದ್ದರು ವಿಶೇಷ ಕಾರ್ಯಕ್ರಮಗಳು ಬೆಳಗಿನಿಂದ ರಾತ್ರಿವರೆಗೂ ನಡೆಯುತ್ತವೆ.

ಕುಸ್ತಿ ಪ್ರೇಮಿಗಳಿಗಾಗಿ ಕುಸ್ತಿ ಪಂದ್ಯಾವಳಿಗಳು, ಮಕ್ಕಳ ದಸರಾ, ಮಹಿಳಾ ದಸರಾ, ಆಹಾರ ಮೇಳ, ವಸ್ತು ಪ್ರದರ್ಶನ, ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕಾಗಿ ಯುವ ಸಂಭ್ರಮ ಒಂದು ಕಡೆ ನಡೆದರೆ, ಮತ್ತೊಂದೆಡೆ ಯುವ ಸಮೂಹ ಕುಣಿದು ಕುಪ್ಪಳಿಸಲು ಯುವ ಸಮೂಹದ ಮೆಗಾ ಮನರಂಜನೆ ಯುವ ದಸರಾ ಸೇರಿ ಅನೇಕ ಕಾರ್ಯಕ್ರಮಗಳು ಮೈಸೂರಿಗರನ್ನು ಹಾಗೂ ವಿಶ್ವದ ಮೂಲೆ ಮೂಲೆಯಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರತಿ ವರ್ಷ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸುವ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಆಗಮಿಸುತ್ತದೆ. ಈ ಹಿನ್ನೆಲೆಯಲ್ಲಿ ಇಲಾಖೆ ಈ ಬಾರಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಚಿಂತಿಸಿದ್ದು, ಈಗಾಗಲೇ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಲಾಲ್ ಬಾಗ್‍ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಡಾ.ರಾಜ್‍ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್ ಹಾಗೂ ನಟ ಪುನೀತ್ ರಾಜ್‍ಕುಮಾರ್ ಅವರ ಪುಷ್ಪಕಲಾಕೃತಿ ಎಲ್ಲರ ಗಮನ ಸೆಳೆದಿತ್ತು. 8.34 ಕೋಟಿ ಪ್ರವಾಸಿಗರು ವೀಕ್ಷಿಸಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬರೋಬ್ಬರಿ 3.34 ಕೋಟಿ ರೂ. ಪ್ರವೇಶ ಶುಲ್ಕ ಸಂಗ್ರಹವಾಗಿತ್ತು.

ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನದಲ್ಲೂ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಹೂಗಳ ಮೂಲಕ ಅರಳಿಸಲು ಚಿಂತನೆ ನಡೆಸಿದ್ದು, ಇದು ಕುಪ್ಪಣ ಪಾರ್ಕ್‍ನಲ್ಲಿ ಆಯೋಜಿಸುವ ಫಲಪುಷ್ಪ ಪ್ರದರ್ಶನದ ವಿಶೇಷವಾಗಿರಲಿದೆ. ಜೊತೆಗೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ದೇಶಕ್ಕೆ ಆಜಾದಿ ಕಾ ಅಮೃತ ಮಹೋತ್ಸವದ ಮಹತ್ವವನ್ನು ಪುಷ್ಪಕಲಾಕೃತಿ ಮೂಲಕ ಸಾರಲಿದ್ದಾರೆ.

ಸ್ಪರ್ಧಿಸಲು ಹೆಚ್ಚಿನ ಆಸಕ್ತಿ :ದಸರಾ ಮಹೋತ್ಸವದ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ನಾಗರಿಕರು, ಸಂಘ-ಸಂಸ್ಥೆಗಳು ಹಾಗೂ ಕೈಗಾರಿಕೆಗಳಿಗೆ ಫಲಪುಷ್ಪ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಲು ಈಗಾಗಲೇ ಅರ್ಜಿ ಆಹ್ವಾನಿ ಸಲಾಗಿದೆ. ಈಗಾಗಲೇ ಅದಕ್ಕೂ ಎಲ್ಲಾ ವಿಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದ್ದು, ಅನೇಕರು ನಗರದ ಕರ್ಜನ್ ಪಾರ್ಕ್ ಆವರಣದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ವಿಶೇಷ ತರಬೇತಿ ಆರಂಭ : ಈಗಾಗಲೇ ಫಲಪುಷ್ಪ ಪ್ರದರ್ಶನಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅದರಂತೆ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ ಸೆ.5 ರಿಂದ 6ರವರೆಗೂ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಿದ್ದು, ಶಿಬಿರದಲ್ಲಿ ಗಾರ್ಡನ್ ನಿರ್ವಹಣೆ, ಪಾಶ್ಚಿಮಾತ್ಯ ರೀತಿಯಲ್ಲಿ ಹೂವಿನ ಕಲೆ ರೂಪಿಸುವುದು ಸೇರಿ ವಿವಿಧ ತರಬೇತಿಯನ್ನು ಆಯೋಜಿಸಲಾಗಿದೆ.

Translate »