ರಾಜೀನಾಮೆಗೂ ಒಂದು ಗೌರವ ತಂದುಕೊಟ್ಟವರು ಅರಸು!
ಮೈಸೂರು

ರಾಜೀನಾಮೆಗೂ ಒಂದು ಗೌರವ ತಂದುಕೊಟ್ಟವರು ಅರಸು!

August 21, 2022

ಮೈಸೂರು, ಆ.20(ಎಂಟಿವೈ)- ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷಕ್ಕೆ ಹಿನ್ನಡೆಯಾದ ಕಾರಣ ಡಿ.ದೇವರಾಜ ಅರಸ್ ಅವರು ಹಿಂದೆ ಮುಂದೆ ನೋಡದೆ, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ರಾಜೀನಾಮೆಯ ಮಹತ್ವವನ್ನೇ ಉತ್ತುಂಗಕ್ಕೆ ಏರಿಸಿದ್ದರು. ಆದರೆ ಇಂದು ಅಧಿಕಾರಕ್ಕಾಗಿ ಹಪಹಪಿ ಸುತ್ತಿರುವ ಜನಪ್ರತಿನಿಧಿಗಳು ಎಫ್‍ಐಆರ್ ದಾಖ ಲಾದರೂ ರಾಜೀನಾಮೆ ನೀಡುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವಿಷಾದಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ದೇವರಾಜ ಅರಸು ಪ್ರತಿಷ್ಠಾನ ಸಮಿತಿ ವತಿಯಿಂದ ಆಯೋಜಿಸಿದ್ದ ಡಿ.ದೇವರಾಜ ಅರಸ್ ಜನ್ಮದಿನದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ದೇವರಾಜ ಅರಸ್ ಅವರು ಸ್ವಾಭಿಮಾನದ ಸಂಕೇತ. ಅವರು ಎಂದಿಗೂ ಅಧಿಕಾರದ ವ್ಯಾಮೋಹಿಯೂ, ಭ್ರಷ್ಟಾಚಾರಿಯೂ ಆಗಿರಲಿಲ್ಲ. ಅವರ ಜೀವಿತಾವಧಿ ಸೇರಿದಂತೆ ಚಿತೆ ಮೇಲೆ ಮಲಗುವವರೆಗೂ ಭ್ರಷ್ಟಾಚಾರಕ್ಕೆ ಅವಕಾಶ ನೀಡಲಿಲ್ಲ. ಆದರೆ ಕೆಲವರು ಅವರನ್ನು ಭ್ರಷ್ಟಾಚಾರಿ ಎಂದು ಜರಿದರು. ದೊಡ್ಡ ಜಾತಿಗೂ ಸೇರಿದವರಲ್ಲದಿದ್ದರೂ, ಕೋಟಿಗಟ್ಟಲೇ ದುಡ್ಡು ಇರದಿದ್ದರೂ ಜನರು ಅವರನ್ನು ಗೆಲ್ಲಿಸಿದರು. ಅಧಿಕಾರದಲ್ಲಿದ್ದಾಗ ಹೆಂಡತಿ-ಮಕ್ಕಳಿಗೂ ಆಸ್ತಿ ಮಾಡಲಿಲ್ಲ. ತಾವು ಅಧಿಕಾರದಲ್ಲಿದ್ದಾಗ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಹಿನ್ನಡೆ ಯಾಯಿತು ಎಂಬ ಒಂದೇ ಕಾರಣಕ್ಕೆ ಯಾರಿಗೂ ಹೇಳದೇ-ಕೇಳದೇ ಒಂದು ಕ್ಷಣವೂ ಯೋಚಿಸದೆ ರಾಜೀನಾಮೆ ನೀಡಿದರು. ಅವರನ್ನು ಅಧಿಕಾರ ವ್ಯಾಮೋಹಿ ಎನ್ನುವುದು ಸರಿಯೇ… ಎಂದು ಖಾರವಾಗಿ ಪ್ರಶ್ನಿಸಿದರು.

ಪ್ರಸ್ತುತ ಸಂದರ್ಭದಲ್ಲಿ ಮಂತ್ರಿಗಳ ಮೇಲೆ ಎಫ್‍ಐಆರ್ ದಾಖ ಲಾದರೂ ರಾಜೀನಾಮೆ ಕೊಡಲ್ಲ ಎನ್ನುತ್ತಾರೆ. ರಾಜೀನಾಮೆ ನೀಡಬೇಕಾದ ಸಂದರ್ಭ ಎದುರಾದರೆ ಮತ್ತೊಮ್ಮೆ ಪರಿಶೀಲಿಸುವ, ಹಿಂಬಾಲಕ ರೊಂದಿಗೆ ಚರ್ಚಿಸುವ, ರೇಟ್ ಫಿಕ್ಸ್ ಮಾಡುವ, ಪಲಾಯನ ಮಾಡಿರುವ ಪ್ರಯತ್ನಗಳು ನಡೆಯುತ್ತಿದೆ. ಇದರೊಂದಿಗೆ ಯಾವುದೋ ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.
ದೇವರಾಜ ಅರಸು ಅವರು ಜಾರಿಗೆ ತಂದ ಸಾಮಾಜಿಕ ಸುಧಾರಣೆ ಕಾರ್ಯಕ್ರಮಗಳನ್ನು ವಿರೋಧಿಸಿದ್ದವರು ಇಂದು ಹಿಂದುಳಿದ ವರ್ಗಗಳಿಗೆ ಸರ್ಟಿಫಿಕೆಟ್ ಪಡೆಯಲು ಪ್ರತಿಭಟನೆ ಗಳನ್ನು ಮಾಡುತ್ತಿದ್ದಾರೆ. ದಶಕಗಳಿಗೂ ಹಿಂದೆ ಹಿಂದುಳಿದ ವರ್ಗ ಗಳ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಜನರು ಮುಜುಗರ ಪಡುತ್ತಿದ್ದರು. ಆದರೆ ಈಗ ಸರ್ಕಾರ ನೀಡುವ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಸುಳ್ಳು ಹೇಳಿ ಜಾತಿಯ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸೌಲಭ್ಯಕ್ಕಾಗಿ ನಮ್ಮನ್ನು ಇಂತಹ ವರ್ಗಕ್ಕೆ ಸೇರಿಸಿ ಎಂದು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಕಾಲ ಎಲ್ಲಿಗೆ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಸಭೆಯನ್ನು ನೂರಾರು ಕಿಲೋಮೀಟರ್ ದೂರದಲ್ಲಿ ನಿಂತು ನೋಡುತ್ತಿದ್ದವರನ್ನು, ಶಾಸನ ಸಭೆಯ ಒಳಗೆ ಕರೆತಂದರಲ್ಲದೇ ಮೂರನೇ ಮಹಡಿಗೂ ಹತ್ತಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅರಸು ಅವರು ಮರಣ ಹೊಂದಿ 40 ವರ್ಷವಾದರೂ ಇನ್ನೂ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅದು ಅವರು ಮಾಡಿರುವ ಸಾಮಾಜಿಕ ಸುಧಾರಣೆ ಕಾರ್ಯಗಳಿಂದಾಗಿ ಮಾತ್ರ ಎಂದು ರಮೇಶ್ ಕುಮಾರ್, ತಮ್ಮ ರಾಜಕೀಯ ಗುರುಗಳನ್ನು ಬಣ್ಣಿಸಿದರು.

ಸ್ಪೀಕರ್ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅಣ್ಣ ಒತ್ತಾಯಿ ಸಿದ್ದರು: 1994ರಲ್ಲಿ ವಿಧಾನಸಭೆ ಸ್ಪೀಕರ್ ಸ್ಥಾನಕ್ಕಾಗಿ ಪಕ್ಷದ ವತಿ ಯಿಂದ ನನ್ನನ್ನು ಆಯ್ಕೆ ಮಾಡಿದ್ದರು. ಇದಕ್ಕಾಗಿ ನಾನು ನಾಮಿನೇಷನ್ ಸಲ್ಲಿಸಿದ್ದೆ. ಆ ವಿಚಾರ ತಿಳಿದು ನನ್ನ ಅಣ್ಣ ನನ್ನನ್ನು ಕರೆದು, ಸ್ಪೀಕರ್ ಸ್ಥಾನಕ್ಕಾಗಿ ನಾಮಿನೇಷನ್ ಸಲ್ಲಿಸಿರುವುದು ನಿಜವೇ? ಎಂದು ಕೇಳಿದರು. ಅದಕ್ಕೆ ನಾನು ಹೌದು ಎಂದೆ. ಆಗ ನನ್ನ ಅಣ್ಣ ನನಗೆ ಬೈಯ್ದರು. `ನೀನು ಲಾ ಓದಿಲ್ಲ. ಕಾನೂನಿನ ವಿವಿಧ ನಿಯಮಗಳ ಬಗ್ಗೆ ಅರಿವಿಲ್ಲ. ಒಂದು ಮನೆ ಹಾಗೂ ಒಂದು ಸೈಟ್ ಕೊಡುತ್ತಾರೆ ಎಂದು ಆಸೆ ಬಿದ್ದು ಸ್ಪೀಕರ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೀಯಾ. ಸಮಾಜದಲ್ಲಿ ನಾವು ತಲೆ ಎತ್ತಿಕೊಂಡು ಓಡಾಡಬೇಕಾದರೆ, ನೀನು ನಾಮಿನೇಷನ್ ಹಿಂದಕ್ಕೆ ತೆಗೆದುಕೋ ಎಂದು ಒತ್ತಾಯಿಸಿದ್ದರು. ಅದನ್ನೇ ನಾನು ಸವಾಲಾಗಿ ಸ್ವೀಕರಿಸಿ, ನಿವೃತ್ತ ನ್ಯಾಯಾಧೀಶರು, ಕಾನೂನು ತಜ್ಞರಿಂದ ಮಾಹಿತಿ ಸಂಗ್ರಹಿಸಿ, ಕಾನೂನುಗಳ ಬಗ್ಗೆ ತಿಳಿದುಕೊಂಡೇ ಎಂದರು.
4 ಬಾರಿ ಪಲ್ಟಿ ಹೊಡೆದು, 6 ಬಾರಿ ಗೆದ್ದಿದ್ದೇನೆ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಸಮುದಾಯಕ್ಕೆ ಸೇರಿದ ಮತದಾರರ ಸಂಖ್ಯೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದಾರೆ. ಆದರೂ ಕ್ಷೇತ್ರದ ಮತದಾರರು ನನ್ನನ್ನು 6 ಬಾರಿ ಗೆಲ್ಲಿಸಿದ್ದಾರೆ. 4 ಬಾರಿ ಪಲ್ಟಿ ಹೊಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುತ್ತಾರೋ ಅಥವಾ ಪಲ್ಟಿ ಹೊಡೆಸುತ್ತಾರೋ ತಿಳಿಯದು ಎಂದು ಹಾಸ್ಯ ಚಟಾಕಿ ಹಾರಿಸಿದರು.

Translate »