ಪ್ರತಿಯೊಬ್ಬ ಮನುಷ್ಯ ಐದು ಸಸಿ ನೆಡಬೇಕು
ಮೈಸೂರು

ಪ್ರತಿಯೊಬ್ಬ ಮನುಷ್ಯ ಐದು ಸಸಿ ನೆಡಬೇಕು

October 29, 2021

ಮೈಸೂರು, ಅ. 28- ವಿಶ್ವ ಧನ್ವಂತರಿ ದಿನಾಚರಣೆ ಅಂಗ ವಾಗಿ ಸರ್ಕಾರಿ ಆಯುರ್ವೇದ ಮಹಾವಿಶ್ವವಿದ್ಯಾಲಯ ಮತ್ತು ಸರ್ಕಾರಿ ಆಯುರ್ವೇದ ಸಂಶೋಧನ ಕೇಂದ್ರ ಅಪೂರ್ವ ಸ್ನೇಹ ಬಳಗ ವತಿಯಿಂದ ಆಯುರ್ವೇದ ಮಾಸಾಚರಣೆಯಲ್ಲಿ ಸಾರ್ವಜನಿಕರಿಗೆ ಆಯುರ್ವೇದ ಸಸಿ ವಿತರಿಸುವ ಅಭಿಯಾನಕ್ಕೆ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತವಿಜಯಾನಂದ ಸ್ವಾಮೀಜಿಗಳು ಆಶ್ರಮದ ಪೌಂಡರಿಕ ಭವನ ಆವರಣದಲ್ಲಿ 126ಕ್ಕೂ ಹೆಚ್ಚು ಬಗೆಯ ಆಯುರ್ವೇದ ಸಸಿ ವಿತರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರ ಮದ ದತ್ತ ವಿಜಯಾನಂದ ಸ್ವಾಮೀಜಿ ಮಾತನಾಡಿ, ಶಾಸ್ತ್ರ ಪುರಾಣಗಳಲ್ಲಿ ಉಲ್ಲೇಖವಿರುವಂತೆ ಮನುಷ್ಯನಾಗಿ ಜನಿಸಿದ ಮೇಲೆ ಆತನ ಎತ್ತರಕ್ಕೆ 5 ಸಸಿಗಳನ್ನು ನೆಡುವುದು ಕರ್ತವ್ಯ, ಕೊರೊನಾ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ ಆಮ್ಲಜನಕ ಎಷ್ಟರ ಮಟ್ಟಿಗೆ ಅನಿವಾರ್ಯತೆ ಎಂದು ಪ್ರಕೃತಿ ತೋರಿಸಿ ಕೊಟ್ಟಿದೆ ಎಂದರು. ಗಿಡಮೂಲಿಕೆ ಮರಗಿಡಗಳು ಇದ್ದಷ್ಟು ಭೂಮಂಡಲ ಬೆಳವಣಿಗೆ ಚೆನ್ನಾಗಿರುತ್ತದೆ, ರಾಮಾಯಣದಲ್ಲಿ ಲಕ್ಷ್ಮಣನಿಗೆ ಆರೋಗ್ಯ ಏರುಪೇರಾದಾಗ ಸಂಜೀವಿನಿ ಗಿರಿಯನ್ನ ಹೊತ್ತು ತಂದ ಆಂಜನೇಯ ಆಯುರ್ವೇದ ಗಿಡಮೂಲಿಕೆ ಮಹತ್ವ ಸಾರಿದೆ. ಮನುಷ್ಯನಿಗೆ ಆಹಾರ ಪದ್ಧತಿಯೂ ಸಹ ಬಹಳ ಮುಖ್ಯ, ಬದುಕಿಗಾಗಿ ಪೌಷ್ಟಿಕಾಂಶ ಆಹಾರ ಸೇವಿಸಬೇಕೆ ವಿನಃ ಆರೋಗ್ಯ ಕಳೆದುಕೊಳ್ಳಲು ಮುಂದಾಗಬಾರದು ಎಂದರು.

ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಆಯುರ್ವೇದ ವೃಕ್ಷಗಳು ಆರೋಗ್ಯ ಸಮಾಜದ ವಾತಾವರಣ ವನ್ನ ನಿರ್ಮಾಣ ಮಾಡುತ್ತವೆ. ಉತ್ತಮ ಗಾಳಿ ನೆರಳು ನೀಡುತ್ತದೆ. ಋಷಿ ಮುನಿಗಳು ಆಯುರ್ವೇದ ಪದ್ಧತಿಯಲ್ಲಿ ಜೀವನ ಶೈಲಿ ನಡೆಸಿ ನೂರಾರು ವರುಷ ಬದುಕಿದ್ದರು ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಆಯುರ್ವೇದ ವೈದ್ಯ ಡಾ.ಚಂದ್ರಶೇಖರ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಡಾ.ಲಕ್ಷ್ಮಿಕಾಂತ ಶೆಣೈ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಬಿಜೆಪಿ ಮುಖಂಡ ಕೇಬಲ್ ಮಹೇಶ್, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಶಿಕ್ಷಕರಾದ ರವಿಶಂಕರ್, ವಿನಯ್ ಬಾಬು ಇತರರಿದ್ದರು.

Translate »