ಪ್ರಾಚೀನ ಆಹಾರ ಪದ್ಧತಿ ಇಂದಿನ ಜೀವನ ಶೈಲಿಗೆ ಅವಶ್ಯಕ
ಮೈಸೂರು

ಪ್ರಾಚೀನ ಆಹಾರ ಪದ್ಧತಿ ಇಂದಿನ ಜೀವನ ಶೈಲಿಗೆ ಅವಶ್ಯಕ

February 21, 2021

ಮೈಸೂರು, ಫೆ.20- ಮೈಸೂರಿನ ಜೆಎಸ್‍ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಎಸ್‍ಡಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅನಲ 2021 ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಜೆಎಸ್‍ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಯುರ್ವೇದವು ಇಂದಿನ ಆಧುನಿಕ ವೈಜ್ಞಾನಿಕ ಜಗತ್ತಿನಲ್ಲಿ ಕಂಡು ಬರುವ ಹಲವಾರು ಹೊಸ ಹೊಸ ಖಾಯಿಲೆಗಳಿಗೆ ಅತ್ಯುತ್ತಮ ವೈದ್ಯಪದ್ಧತಿ ಆಗಿದೆ. ಗ್ಯಾಸ್ಟ್ರಿಕ್ ಸಮಸ್ಯೆಗಳು, ಕರುಳಿನ ಹುಣ್ಣು, ಕಾಮಾಲೆ, ಅಜೀರ್ಣ ಇತರೆ ಕರುಳಿನ ಸಮಸ್ಯೆಗಳು ಇಂದಿನ ಆಧುನಿಕ ಆಹಾರ ಪದ್ಧತಿಯಿಂದ ಉಲ್ಬಣಿಸಿದ ದೈನಂದಿನ ಖಾಯಿಲೆಗಳಾಗಿ ಮಾರ್ಪಟ್ಟಿವೆ. ಆದ್ದರಿಂದ ಸಂಶೋಧನಾತ್ಮಕ ಚಿಕಿತ್ಸೆಗಳು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಬೇಕೆಂದು ಹಾಗೂ ಪ್ರಾಚೀನ ಆಹಾರ ಪದ್ಧತಿಗಳು ಇಂದಿಗೂ ಅವಶ್ಯಕ ಜೀವನ ಶೈಲಿಗಳನ್ನಾಗಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.

ಕೇಂದ್ರೀಯ ಆಯುರ್ವೇದ ವೈದ್ಯ ಪರಿಷತ್, ನವದೆಹಲಿ ಮಾಜಿ ಅಧ್ಯಕ್ಷರಾದ ಡಾ. ವನಿತಾ ಮುರಳಿಕುಮಾರ್ ಮಾತನಾಡಿದರು. ಜೆಎಸ್‍ಎಸ್ ಮಹಾವಿದ್ಯಾಪೀಠ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದಲ್ಲಿ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

 

Translate »