ಶಿಕ್ಷಿತರೆ ನಿಸರ್ಗ ಹಾಳು ಮಾಡುತ್ತಿದ್ದಾರೆ
ಮೈಸೂರು

ಶಿಕ್ಷಿತರೆ ನಿಸರ್ಗ ಹಾಳು ಮಾಡುತ್ತಿದ್ದಾರೆ

November 12, 2018

ಮೈಸೂರು:  ಕಲೆ, ಸಾಹಿತ್ಯ, ನೃತ್ಯ ಕೇವಲ ಮನ ರಂಜನೆಗಲ್ಲ, ಮನೋವಿಕಾಸಕ್ಕೆ. ನನ್ನ ಜಲ, ನನ್ನದು ಸಂಸ್ಕøತಿ ಎಂಬ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಸಂಸ್ಕøತಿ ಚಿಂತಕ ಹಾಗೂ ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಇಂಜಿನಿಯರ್ ಶಂಕರ್ ದೇವನೂರು ಅಭಿಪ್ರಾಯಪಟ್ಟರು.

ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆದ ನೃತ್ಯ ವಿದ್ಯಾಪೀಠ ಸಂಸ್ಥೆಯ 9ನೇ ವಾರ್ಷಿಕೋತ್ಸವವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಈ ಮಣ್ಣಿನಲ್ಲಿ ನಾವು ಹುಟ್ಟಿ, ನೆಲದ ಫಲವನ್ನು ತಿಂದು ಬದುಕಿದ್ದೇವೆ. ಇಲ್ಲಿನ ಗಾಳಿ ಮತ್ತು ಜಲ ದಿಂದ ಜೀವಿಸುತ್ತಿದ್ದೇವೆ. ನಮ್ಮ ಬದುಕಿಗೆ ಮೆರಗು ನೀಡುವಂತಹ ಸಂಸ್ಕøತಿಯನ್ನು ಕಟ್ಟಿಕೊಂಡಿದ್ದೇವೆ. ಇವೆಲ್ಲವೂ ಕೂಡ ಜೀವ ದಾಯಕ, ಪ್ರಾಣ ಪೋಷಕ ಎಂದು ಪರಿಭಾವಿಸಬೇಕು ಎಂದರು.

ಒಂದು ಕಾಲಘಟ್ಟದಲ್ಲಿ ನಮ್ಮ ಪೂರ್ವಿಕರು ನಿಸರ್ಗದೊಂ ದಿಗೆ ತಮ್ಮ ಬದುಕನ್ನು ಒಗ್ಗೂಡಿಸಿಕೊಂಡಿದ್ದರು. ಹಾಗಾಗಿ ಈ ನೆಲದಲ್ಲಿ ಕಲೆ, ಸಾಹಿತ್ಯ, ಸಂಸ್ಕøತಿ ಹುಟ್ಟುವುದಕ್ಕೆ ಸಾಧ್ಯವಾಯಿತು. ಆದರೆ, ಇಂದು ಶಿಕ್ಷಿತರೇ ನಿಸರ್ಗದೊಂದಿಗಿನ ಸಂಬಂಧವನ್ನು ಕತ್ತರಿಸಿಕೊಂಡು ಹಾಳು ಮಾಡುತ್ತಿದ್ದಾರೆ. ಇದು ಜಗತ್ತಿನ ದೊಡ್ಡ ದುರಂತವಾಗಿದೆ. ಹಾಗಾಗಿ ಈ ಭೂಮಿ ನಮಗೆ ಆಶ್ರಯ ನೀಡುತ್ತಿದೆ ಎಂಬ ಮಾತನ್ನು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನೆಲ, ಜಲ ಪರಂಪರೆಯ ಎರಡು ಪ್ರಮುಖ ಅಂಶಗಳಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕಲೆ, ಸಾಹಿತ್ಯ, ಸಂಗೀತ ಇವೆಲ್ಲವೂ ಈ ನೆಲದ ಸತ್ಯವನ್ನು ಹಿಡಿದಿಟ್ಟುಕೊಂಡಿದ್ದು, ಇವುಗಳು ಮನುಷ್ಯರನ್ನು ಮನುಷ್ಯರ ನ್ನಾಗಿ ಮಾಡುತ್ತಿವೆ ಎಂದು ಹೇಳಿದರು.
ಮಕ್ಕಳೇ ನಮ್ಮ ನೆಲದ ಪೋಷಕರು, ಅವರಿಂದಲೇ ನಮ್ಮ ಕಲೆ, ಸಾಹಿತ್ಯ, ಸಂಸ್ಕøತಿ ಬೆಳೆಯಲು ಸಾಧ್ಯ. ಆದ್ದರಿಂದ ಅವರು, ಅನನ್ಯವಾಗಿ ಬೆಳೆಯಲು ನಿರಂತರವಾಗಿ ಸಾಂಸ್ಕøತಿಕ ಕಾರ್ಯ ಕ್ರಮಗಳು ನಡೆಯುತ್ತಿರಬೇಕು. ಆಧುನಿಕ ಜಗತ್ತಿನಲ್ಲಿ ಭಾವುಕತೆ ಎಂಬುದು ಮರೆಯಾಗುತ್ತಿದ್ದು, ನೃತ್ಯದ ಮೂಲಕ ಭಾವುಕತೆ ಯನ್ನು ಬೆಳೆಸಬೇಕು ಎಂದು ತಿಳಿಸಿದರು.

ಪ್ರತಿಭಾ ಪುರಸ್ಕಾರ: ಭರತ ನಾಟ್ಯದ ವಿದ್ವತ್, ಸೀನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ ವಿಜೇತ ವಿದ್ಯಾರ್ಥಿಗಳಾದ ನಿಶ್ಚಿತ ಕೃಷ್ಣ, ವಂದಿತ ಕೃಷ್ಣ, ಬೃಂದಾ ನಂಜುಂಡಸ್ವಾಮಿ, ಅಮೃತ, ಕಿರ್ತನ, ಮೇಘನ, ಅಬೋರ, ಭಾರ್ಗವ, ಸಂಜನಾ ರಮೇಶ್ ಹಾಗೂ ರಾಧ ಅಚಾರ್ಯರಿಗೆ ಪ್ರಶಸ್ತಿ ಪತ್ರ ನೀಡಿ, ಅಭಿನಂದಿಸಲಾಯಿತು. ನಂತರ ನೃತ್ಯ ವಿದ್ಯಾ ಪೀಠ ಸಂಸ್ಥೆಯ 90ಕ್ಕೂ ಹೆಚ್ಚು ವಿದ್ಯಾರ್ಥಿ ನಿಯರು ಭರತ ನಾಟ್ಯ ಪ್ರದರ್ಶನ ನೀಡಿದರು.

ವಕೀಲೆ ಎಂ.ಎನ್.ಸುಮನ, ಕಲಾವಿದೆ ಡಾ.ಜಮುನಾರಾಣಿ ವಿ. ಮಿರ್ಲೆ, ಜೆಎಸ್‍ಎಸ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕುಮುದಿನಿ ಅಚ್ಚಿ, ನೃತ್ಯ ವಿದ್ಯಾ ಪೀಠ ಸಂಸ್ಥೆಯ ನಿರ್ದೇಶಕಿ ಸಿ.ಎನ್.ಅನಿತ ಉಪಸ್ಥಿತರಿದ್ದರು.

Translate »