ಅಕ್ಟೋಬರ್‍ನಲ್ಲಿ ಚುನಾವಣೆ ನಡೆಸಲು ಆಯೋಗ ಚಿಂತನೆ
ಮೈಸೂರು

ಅಕ್ಟೋಬರ್‍ನಲ್ಲಿ ಚುನಾವಣೆ ನಡೆಸಲು ಆಯೋಗ ಚಿಂತನೆ

July 9, 2020

ಮೈಸೂರು,ಜು.8(ಆರ್‍ಕೆಬಿ)-ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರವಾರು ಗ್ರಾಪಂ ಮತದಾರರ ಪಟ್ಟಿ ಪರಿಷ್ಕರಿಸಲು ರಾಜ್ಯ ಚುನಾವಣಾ ಆಯೋಗವು ಜಿಲ್ಲಾಡಳಿತಗಳಿಗೆ ಬುಧವಾರ ಸೂಚನೆ ನೀಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕ ವಾಗಿದೆ. ಜತೆಗೆ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ಗ್ರಾಮ ಪಂಚಾಯಿತಿಗಳ ಮತ ದಾರರ ಪಟ್ಟಿ ತಯಾರಿಸುವ ಕಾರ್ಯ ವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕಳೆದ ಮಾರ್ಚ್‍ನಲ್ಲಿ ತಿಳಿಸಲಾಗಿತ್ತು. ಅಲ್ಲದೇ, ಚುನಾವಣೆಯನ್ನೂ ತಾತ್ಕಾಲಿಕವಾಗಿ ಮುಂದೂಡಿ ಆದೇಶ ಹೊರಡಿಸಲಾಗಿತ್ತು.

ಇದರ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆ ಯಾಗಿತ್ತು. ಈ ಸಂಬಂಧ ಜೂ.26ರ ನಡೆದ ಸಭೆಯಲ್ಲಿ ಹಲವು ಜಿಲ್ಲಾಧಿಕಾರಿಗಳು, ಅಕ್ಟೋಬರ್‍ನಲ್ಲಿ ಪರಿಸ್ಥಿತಿ ಅವಲೋಕಿಸಿ ಚುನಾವಣೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿ ಸಿದ್ದರು. ಇದೇ ವಿಚಾರವನ್ನು ನ್ಯಾಯಾಲಯದ ಗಮನಕ್ಕೂ ತರಲಾಗಿತ್ತು. ಇದೀಗ ರಾಜ್ಯ ಚುನಾವಣಾ ಆಯೋಗವು ಗ್ರಾಪಂ ಮತದಾರರ ಪಟ್ಟಿ ಸಿದ್ಧಪಡಿಸಲು ವೇಳಾಪಟ್ಟಿ ಪ್ರಕಟಿಸಿದೆ.

ವೇಳಾಪಟ್ಟಿ: ಜು.13ರಿಂದ 18, ಗ್ರಾಪಂ ಕ್ಷೇತ್ರ ವ್ಯಾಪ್ತಿಯಲ್ಲಿನ ಮತದಾರರನ್ನು ಗುರುತಿಸುವುದು. ಜು.20ರಿಂದ 29, ಕ್ಷೇತ್ರಗಳಲ್ಲಿ ಮನೆಗಳಿಗೆ ಭೇಟಿ ನೀಡಿ ಮತ ದಾರರ ಪಟ್ಟಿಯಲ್ಲಿರುವ ಮತದಾರರ ಇರುವಿಕೆ ಖಾತರಿಪಡಿಸಿಕೊಳ್ಳುವುದು. ಜು.30ರಿಂದ ಆ.5 ಮುದ್ರಕರಿಂದ ಪ್ರಥಮ ಚೆಕ್‍ಲಿಸ್ಟ್ ಪಡೆದು ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸುವುದು. ನಂತರ ಪ್ರಥಮ ಚೆಕ್‍ಲಿಸ್ಟ್‍ನಲ್ಲಿ ಆಗಬೇಕಾದ ಬದಲಾವಣೆಗಳನ್ನು ಆ.6ರಂದು ಮುದ್ರಕ ರಿಂದ ಮಾಡಿಸಿ ಕರಡು ಮತದಾರರ ಪಟ್ಟಿಯ 10 ಪ್ರತಿ ಪಡೆದುಕೊಳ್ಳುವುದು. ಆ.7ರಂದು ಸಂಬಂಧ ಪಟ್ಟ ಕಚೇರಿಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸುವುದು. ಆಕ್ಷೇಪಣೆಗೆ ಕೊನೆ ದಿನಾಂಕ ಆ.14. ಆಕ್ಷೇಪಣೆಗಳಿದ್ದರೆ ಇತ್ಯರ್ಥಪಡಿಸಲು ಕೊನೆ ದಿನಾಂಕ ಆ.24. ನಂತರ ಆ.30ರಂದು ಮುದ್ರಕರಿಂದ ಅಗತ್ಯ ಬದಲಾವಣೆ ಮಾಡಿಸಿ ಅಂತಿಮ ಚೆಕ್‍ಲಿಸ್ಟ್ ಪಡೆದು ಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸುವುದು. ಇದೆಲ್ಲಾ ಆದ ಬಳಿಕ ಆ.31ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.