ಡಿಸ್ನಿಲ್ಯಾಂಡ್ ಮಾದರಿ ಕೆಆರ್‍ಎಸ್ ಅಭಿವೃದ್ಧಿ ಈಗ ‘ಡ್ರೀಮ್‍ಲ್ಯಾಂಡ್’!!
ಮೈಸೂರು

ಡಿಸ್ನಿಲ್ಯಾಂಡ್ ಮಾದರಿ ಕೆಆರ್‍ಎಸ್ ಅಭಿವೃದ್ಧಿ ಈಗ ‘ಡ್ರೀಮ್‍ಲ್ಯಾಂಡ್’!!

July 9, 2020

ಮೈಸೂರು, ಜು.8-ರಾಜ್ಯದಲ್ಲಿ ಗಂಭೀರ ಸ್ವರೂಪ ತಾಳುತ್ತಿರುವ ಕೊರೊನಾ ವೈರಸ್ ಸೋಂಕು ತಡೆ ಗಟ್ಟುವತ್ತ ರಾಜ್ಯದ ಆಡಳಿತಯಂತ್ರ ತೊಡ ಗಿರುವುದರಿಂದ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ಕೆಆರ್‍ಎಸ್ ಅನ್ನು ಡಿಸ್ನಿ ಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆ ನೆನೆಗುದಿಗೆ ಬಿದ್ದಂತಾಗಿದೆ. ಡಿಸ್ನಿಲ್ಯಾಂಡ್ ಬರೀ ‘ಡ್ರೀಮ್ ಲ್ಯಾಂಡ್’ ಎಂದು ಕೆಲವರು ಲೇವಡಿ ಮಾಡುವಂತಾಗಿದೆ.

ಕೋವಿಡ್-19 ನಿರ್ವಹಣೆ ಸವಾ ಲಾಗಿ ಪರಿಣಮಿಸಿರುವುದರಿಂದ ಮುಂಜಾ ಗ್ರತಾ ಕ್ರಮದ ಮೂಲಕ ಸೋಂಕು ಹರ ಡುವುದನ್ನು ನಿಯಂತ್ರಿಸಿ ಸಾವು-ನೋವು ತಪ್ಪಿಸಲು ಹರಸಾಹಸ ಪಡುತ್ತಿರುವ ಸರ್ಕಾರಕ್ಕೆ ರಾಜ್ಯದ ಯಾವುದೇ ಅಭಿ ವೃದ್ಧಿ ಯೋಜನೆ ಜಾರಿಗೊಳಿಸಲು ಆರ್ಥಿಕ ಸಂಪನ್ಮೂಲದ ಕೊರತೆ ಎದುರಾಗಿ ರುವುದು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಬೃಂದಾವನ ಪ್ರವಾಸಿ ತಾಣ ಅಭಿವೃದ್ಧಿ ಪಡಿಸುವ ಯೋಜನೆ ಪಕ್ಕಕ್ಕೆ ಸರಿಯಲು ಕಾರಣ ಎನ್ನಲಾಗಿದೆ.

ಚರ್ಚೆಯಾಗಲಿಲ್ಲ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿದ್ಧಗೊಳಿಸಿದ್ದ ಈ ಯೋಜನೆಯ ಡಿಪಿಆರ್, ಕ್ರಿಯಾ ಯೋಜ ನೆಯ ಬಗ್ಗೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಒಂದೇ ಒಂದು ದಿನವೂ ಸಭೆ ನಡೆಸಿ ಚರ್ಚಿಸಲಿಲ್ಲ. ಅಷ್ಟರಲ್ಲಾಗಲೇ ಡಿಸ್ನಿಲ್ಯಾಂಡ್ ಮಾದರಿಯ ಬೃಂದಾವನ ಅಭಿವೃದ್ಧಿ ಬಗ್ಗೆ ಮಂಡ್ಯ-ಮೈಸೂರು ಭಾಗ ದಲ್ಲಿ ಪರ-ವಿರೋಧಗಳು ಕೇಳಿಬಂದದ್ದು, ಪ್ರಸ್ತುತ ಸರ್ಕಾರದ ವಿಳಂಬ ಧೋರಣೆಗೆ ಕಾರಣವಾಯಿತು ಎನ್ನಲಾಗುತ್ತಿದೆ.

2019ರ ಆಗಸ್ಟ್ 4ರಂದು ಈ ಕುರಿತು ಬೆಂಗಳೂರಲ್ಲಿ ಉನ್ನತ ಮಟ್ಟದ ಸಭೆ ನಿಗದಿ ಯಾಗಿತ್ತಾದರೂ, ಬೆಳವಣಿಗೆಯೊಂದರ ಕಾರಣದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಂದಿನ ಸಭೆಯನ್ನು ಮುಂದೂಡಿದ್ದರಾದರೂ, ಕಳೆದ 11 ತಿಂಗ ಳಿಂದ ಡಿಸ್ನಿಲ್ಯಾಂಡ್ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆಯೇ ನಡೆಯಲಿಲ್ಲ.

2000 ಕೋಟಿ ಯೋಜನೆ: ಸುಮಾರು 2000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೆಆರ್‍ಎಸ್ ಅನ್ನು ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸಲು ಅಂದಿನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಸಕ್ತಿ ತೋರಿದ್ದರು. ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವ ಕುಮಾರ್ ಹಾಗೂ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ. ಮಹೇಶ್ ಇದಕ್ಕೆ ಸಾಥ್ ನೀಡುತ್ತಿದ್ದರು. ಯೋಜನೆಯಿಂದ ಸರ್ಕಾರಕ್ಕೆ ಅಧಿಕ ಆದಾಯದ ಜೊತೆಗೆ ಮಂಡ್ಯ, ಮೈಸೂರು ಸುತ್ತಮುತ್ತಲ ಸುಮಾರು 40,000 ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಿನ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಿತ್ತು.

ಕಾವೇರಿ ಪ್ರತಿಮೆ: ಬೃಂದಾವನ ಸೇರಿ ದಂತೆ ಸುತ್ತಲಿನ 400 ಎಕರೆ ಸರ್ಕಾರಿ ಭೂಮಿ ಪೈಕಿ 86 ಮೀಟರ್ ಪ್ರದೇಶ ದಲ್ಲಿ 120 ಮೀಟರ್ ಎತ್ತರದ ಕಾವೇರಿ ಮಾತೆಯ ಪ್ರತಿಮೆ, ಕೆಆರ್‍ಎಸ್ ಅಣೆ ಕಟ್ಟೆಗಿಂತ ಎತ್ತರದ ಟವರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ, ಟೋಲ್ ಪ್ಲಾಜಾ, ಎಂಟ್ರಿ ಪ್ಲಾಜಾ, ಗ್ರ್ಯಾಂಡ್ ಸ್ಟ್ರೀಟ್‍ಗಳು, ಗಂಡಬೇರುಂಡ ಪ್ರತಿಮೆಗಳಂತಹ ಅತ್ಯಾಕರ್ಷಣೆಯೊಂ ದಿಗೆ ಬೃಂದಾವನ ಅಭಿವೃದ್ಧಿಪಡಿಸಿ ದೇಶದಲ್ಲೇ ಅತ್ಯುತ್ತಮ ಪ್ರವಾಸಿ ತಾಣ ವಾಗಿಸುವ ಉದ್ದೇಶವಿತ್ತು.

ಯಡಿಯೂರಪ್ಪ ಅಸಮಾಧಾನ: ಸಮ್ಮಿಶ್ರ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಡಿಸ್ನಿಲ್ಯಾಂಡ್ ಯೋಜನೆಯನ್ನು ವಿರೋಧಿಸಿದ್ದರಲ್ಲದೆ ಸದನದಲ್ಲಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‍ಗೆ ನಿಮ್ಮ ಪ್ರಾಧಾನ್ಯತೆ ಯಾವುದಕ್ಕೆ ಎಂದು ಪ್ರಶ್ನಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಎಸ್.ಟಿ. ರವಿಕುಮಾರ್

Translate »