ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಆನೆ, ಹುಲಿ ಹಾವಳಿ
ಕೊಡಗು

ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಆನೆ, ಹುಲಿ ಹಾವಳಿ

August 22, 2021

ಗುಡ್ಡೆಹೊಸೂರು, ಆ.21- ಗುಡ್ಡೆಹೊಸೂರು ವ್ಯಾಪ್ತಿಯ ಸುಣ್ಣದಕೇರೆ ಸುತ್ತಮುತ್ತಲಿನಲ್ಲಿ ರೈತರ ಬೆಳೆಗಳನ್ನು ಆನೆ ದಾಳಿ ನಡೆಸಿ ನಷ್ಟಪಡಿಸುತ್ತಿದೆ ಎಂದು ಆ ವಿಭಾಗದ ರೈತರು ದೂರಿಕೊಂಡಿದ್ದಾರೆ.

ಆನೆಯ ಜೊತೆ ಹುಲಿ ಹಾವಳಿಯು ತಲೆದೋರಿದೆ ಎಂದು ಅಲ್ಲಿನ ನಿವಾಸಿ ರಂಜಿತ್ ಪ್ರತ್ಯಕ್ಷವಾಗಿ ಹುಲಿಯನ್ನು ವೀಕ್ಷಿಸಿ ಮಾಹಿತಿ ನೀಡಿದ್ದಾರೆ. ಆನೆ ಕಂದಕದ ಒಂದು ಭಾಗ ದಲ್ಲಿ ಹುಲಿ ಇರುವುದನ್ನು ನೋಡಲಾ ಗಿದೆ. ಸುಮಾರು ಒಂದು ವಾರದಿಂದ ನಿರಂ ತರವಾಗಿ ಆನೆ ರೈತರ ಜೋಳ, ಬಾಳೆ, ಮರಗೆಣಸು, ಅಡಿಕೆ, ತೆಂಗು ಅಲ್ಲದೆ ವಿವಿಧ ಬೆಳೆಗಳನ್ನು ತಿಂದು ನಾಶಪಡಿಸುತ್ತಿದೆ ಎಂದು ದೂರಿಕೊಂಡಿದ್ದಾರೆ.

ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ರೈತರು ಆರೋಪಿಸುತ್ತಾರೆ. ಅದೇ ರೀತಿ ಈ ವಿಭಾಗದಲ್ಲಿ ಹುಲಿಯು ಅರಣ್ಯದಿಂದ ಮನೆಯಂಗಳಕ್ಕೆ ಭೇಟಿ ನೀಡುತ್ತಿರುವು ದಾಗಿ ಅಲ್ಲಿನ ನಿವಾಸಿ ಶಿವ ಅವರು ತಿಳಿಸಿದ್ದಾರೆ.

ಅರಣ್ಯದಂಚಿನ ಸುಣ್ಣದಕೇರೆ ಗ್ರಾಮದ ನಿವಾಸಿಗಳು ಆನೆ, ಹುಲಿ ಹಾವಳಿಯಿಂದ ಭಯಭೀತರಾಗಿದ್ದಾರೆ. ಸಂಜೆಯಾಗು ತ್ತಿದ್ದಂತೆ ರೈತರು ತಮ್ಮ ತೋಟಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಅಲ್ಲಿನ ನಿವಾಸಿಗಳಾದ ಪಾರ್ವತಿ, ರಂಜಿತ್, ರಾಜಪ್ಪ, ಜಯಪ್ರಕಾಶ್ ಮುಂತಾದವರ ಬೆಳೆಗಳನ್ನು ತಿಂದು ನಾಶಪಡಿಸಲಾಗಿದೆ ಎಂದು ದೂರಿಕೊಂಡಿದ್ದಾರೆ.

ಅರಣ್ಯ ಇಲಾಖೆಯವರು ಸೂಕ್ತ ಕ್ರಮ ವಹಿಸುವಂತೆ ರೈತರು ಒತ್ತಾಯಿಸಿದ್ದಾರೆ. ಆನೆ ಕಂದಕ ನಿರ್ಮಾಣವಾಗಿದ್ದರೂ ಪ್ರತಿನಿತ್ಯ ಈ ಕಂದಕದ ಮೂಲಕವೇ ಆನೆ ಗ್ರಾಮಕ್ಕೆ ನುಗ್ಗಿ ಬರುತ್ತಿದೆ. ಕಂದಕದ ಒಂದು ಭಾಗ ವನ್ನು ಕಾಲಿನಿಂದ ತುಳಿದು ಮಣ್ಣನ್ನು ಗುಂಡಿಗೆ ಹಾಕಿ ದಾಟುತ್ತಿರುವ ದೃಶ್ಯ ಕಂಡುಬರುತ್ತಿದೆ.

Translate »